ADVERTISEMENT

ಈ ಶಾಲೆಯಲ್ಲಿ ಪೋಷಕರಿಗೂ ಕ್ರೀಡಾಕೂಟ!

​ಪ್ರಜಾವಾಣಿ ವಾರ್ತೆ
Published 7 ಫೆಬ್ರುವರಿ 2012, 6:10 IST
Last Updated 7 ಫೆಬ್ರುವರಿ 2012, 6:10 IST
ಈ ಶಾಲೆಯಲ್ಲಿ ಪೋಷಕರಿಗೂ ಕ್ರೀಡಾಕೂಟ!
ಈ ಶಾಲೆಯಲ್ಲಿ ಪೋಷಕರಿಗೂ ಕ್ರೀಡಾಕೂಟ!   

ಬಳ್ಳಾರಿ: ಸಾಮಾನ್ಯವಾಗಿ ಶಾಲೆಗಳಲ್ಲಿ ವಿದ್ಯಾರ್ಥಿಗಳಿಗೆ ವಾರ್ಷಿಕ ಕ್ರೀಡಾಕೂಟ ಆಯೋಜಿಸುವುದು ವಾಡಿಕೆ. ಆದರೆ, ಈ ಶಾಲೆಯಲ್ಲಿ ಪ್ರತಿ ವರ್ಷ ವಿದ್ಯಾರ್ಥಿಗಳ ತಂದೆ- ತಾಯಿಗಳಿಗೂ, ಪೋಷಕರಿಗೂ ವಿಶೇಷ ಕ್ರೀಡಾಕೂಟ ಆಯೋಜಿಸಲಾಗುತ್ತದೆ.

ಜಿಲ್ಲೆಯ ಸಿರುಗುಪ್ಪ ತಾಲ್ಲೂಕಿನ ಹೊಸ ದೇವಲಾಪುರದಲ್ಲಿರುವ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆಯಲ್ಲಿ ಓದುತ್ತಿರುವ ವಿದ್ಯಾರ್ಥಿಗಳ ಪಾಲಕರಿಗೂ, ಪೋಷಕರಿಗೂ ಪ್ರತಿವರ್ಷ ಕ್ರೀಡಾಕೂಟ ನಡೆಸುತ್ತ ಮಕ್ಕಳಲ್ಲಿ ಕ್ರೀಡೆಯ ಆಸಕ್ತಿ ಮೂಡಿಸವಲ್ಲಿ ಪಾಲಕರ ಪಾತ್ರವೂ ಮುಖ್ಯ ಎಂದು ಹೇಳಿಕೊಡಲಾಗುತ್ತಿದೆ.

ಸರ್ಕಾರಿ ಶಾಲೆಗಳಲ್ಲಿಯೇ ಅತ್ಯಂತ ವಿಭಿನ್ನವಾಗಿರುವ ಈ ಶಾಲೆಯಲ್ಲಿ ಇದೇ 7ರಂದು ಅಂತಹ ಕ್ರೀಡಾಕೂಟ ನಡೆಯಲಿದೆ.

ಒಂದಿಡೀ ದಿನ ನಡೆಯುವ ಈ ಕ್ರೀಡಾಕೂಟದಲ್ಲಿ ಶಾಲೆಯಲ್ಲಿ ಓದುತ್ತಿರುವ ವಿದ್ಯಾರ್ಥಿಯ ತಂದೆ, ತಾಯಿ, ಅಕ್ಕ, ಅಣ್ಣ, ಅಜ್ಜ, ಅಜ್ಜಿ ಮತ್ತಿತರ ಎಲ್ಲ ಸಂಬಂಧಿಗಳೂ ಭಾಗವಹಿಸಬಹುದಾಗಿದೆ.

ಮಹಿಳೆಯರಿಗೆ ರಂಗೋಲಿ, ನಿಂಬೆ ಚಮಚದ ಓಟ, ಸಂಗೀತ ಕುರ್ಚಿ, ಗುಂಡು ಎಸೆತ, ಪುರುಷರಿಗೆ ಕಬಡ್ಡಿ, 100 ಮೀಟರ್ ಓಟ, ಗೋಣಿಚೀಲ ರೇಸ್, ಸ್ಲೋ ಸೈಕ್ಲಿಂಗ್, ಒಂದೇ ನಿಮಿಷದಲ್ಲಿ ಬಲೂನ್ ಊದಿ ಒಡೆಯುವ ಸ್ಪರ್ಧೆ ಆಯೋಜಿಸಲಾಗುತ್ತದೆ. ಕ್ರೀಡಾಕೂಟದ ವಿಜೇತರಿಗೆ ಇದೇ 24ರಂದು ನಡೆಯಲಿರುವ ಶಾಲಾ ವಾರ್ಷಿಕೋತ್ಸವದಲ್ಲಿ ಬಹುಮಾನ ವಿತರಿಸಲಾಗುತ್ತದೆ.

ವಿಶಿಷ್ಟ ಶಾಲೆ: 10 ವರ್ಷಗಳ ಹಿಂದೆ ಆರಂಭವಾದ ಈ ಶಾಲೆ ಹಚ್ಚಹಸಿರಾಗಿರುವ ಬತ್ತದ ಗದ್ದೆಯ ಪಕ್ಕದಲ್ಲೇ ಇದ್ದು, ಕಣ್ಣಿಗೆ ಹಿತ ನೀಡುವ ವಾತಾವರಣದಿಂದ ಕೂಡಿದೆ.

ಬಡ ಕುಟುಂಬಗಳೇ ಹೆಚ್ಚಾಗಿ ಇರುವ ಈ ಹಳ್ಳಿಯ ಪ್ರತಿ ವಿದ್ಯಾರ್ಥಿಗಳೂ  ಯಾವುದೇ ಖಾಸಗಿ ಕಾನ್ವೆಂಟ್‌ನ ವಿದ್ಯಾರ್ಥಿಗೂ ಕಡಿಮೆಯೇನಲ್ಲ ಎಂಬಂತೆಯೇ ಓದಿನಲ್ಲೂ ಸದಾ ಮುಂದಿದ್ದಾರೆ.

ಪ್ರತಿಯೊಬ್ಬರ ಅಕ್ಷರಗಳು ಮುತ್ತು ಪೋಣಿಸಿದಂತೆ ಕಂಗೊಳಿಸುವಂತೆಯೂ, ಅಲ್ಪಪ್ರಾಣ, ಮಹಾಪ್ರಾಣ, ಒತ್ತಕ್ಷರಗಳನ್ನು ಗಮನಿಸಿ ಬರೆಯುವಂತೆಯೂ ನಿತ್ಯ ವೈಯಕ್ತಿಕವಾಗಿ ಗಮನಹರಿಸುವ ಮೂಲಕ  ಹೇಳಿಕೊಡಲಾಗುತ್ತದೆ.

ದಾನಿಗಳ ನೆರವಿನೊಂದಿಗೆ ಸಮವಸ್ತ್ರ, ಟೈ, ಶೂ, ಗುರುತಿನ ಚೀಟಿ ಒದಗಿಸಲಾಗಿದೆ.
ಶಾಲೆಯ ಆವರಣದೊಳಗೆ ಹೆಜ್ಜೆ ಇಡುತ್ತಿದ್ದಂತೆಯೇ ಕಿನ್ನರಲೋಕ ಪ್ರವೇಶಿಸಿದಂತೆ ಭಾಸವಾಗುವಂತೆ ಶಾಲೆಯನ್ನು ಅಭಿವೃದ್ಧಿಪಡಿಸುವಲ್ಲಿ ಮುಖ್ಯ ಶಿಕ್ಷಕ ಎಂ.ವೆಂಕಟೇಶ, ಶಿಕ್ಷಕರಾದ ಸಿ.ಎಚ್.ಎಂ. ವತ್ಸಲಾ, ಮಲ್ಲಿನಾಥ ಉಮರ್ಜಿ, ಎ.ಎಂ. ವೀರಯ್ಯ ಶ್ರಮಿಸುತ್ತಿದ್ದಾರೆ.

ವಿದ್ಯಾರ್ಥಿಗಳಿಗೆ ಸಂಗೀತವನ್ನೂ, ಡೊಳ್ಳು ಬಾರಿಸುವುದನ್ನೂ ಹೇಳಿಕೊಟ್ಟು ಜನಪದ ಕಲೆಯನ್ನೂ ಪೋಷಿಸಲಾಗುತ್ತಿದೆ. ಪ್ರತಿ ಶನಿವಾರ ತಪ್ಪದೇ ರಸಪ್ರಶ್ನೆ ಸ್ಪರ್ಧೆ ಏರ್ಪಡಿಸಿ ಮಕ್ಕಳ ಸಾಮಾನ್ಯ ಜ್ಞಾನವೃದ್ಧಿಗೂ ಆದ್ಯತೆ ನೀಡಲಾಗುತ್ತಿದೆ.

ಶಾಲೆಯ ಬಡ ವಿದ್ಯಾರ್ಥಿಗಳಲ್ಲಿ ಬಹುತೇಕರು 5ನೇ ತರಗತಿಯ ನಂತರ ಮೊರಾರ್ಜಿ, ಪ್ರತಿಷ್ಠಿತ ಶಾಲೆ, ಆದರ್ಶ ಶಾಲೆಗಳ ಪ್ರವೇಶ ಪರೀಕ್ಷೆಗಳಲ್ಲಿ ಉತ್ತಮ ಅಂಕ ಗಳಿಸಿ 6ನೇ ತರಗತಿಗೆ ತೆರಳುತ್ತಿದ್ದಾರೆ ಎಂದು ವೆಂಕಟೇಶ ಹೆಮ್ಮೆಯಿಂದ ಹೇಳುತ್ತಾರೆ.

ಸಿರುಗುಪ್ಪದ ಕೆಲವು ಮಕ್ಕಳೂ ಹಳ್ಳಿಯ ಈ ಶಾಲೆಗೆ ಪ್ರವೇಶ ಪಡೆದಿದ್ದಾರೆ. ಮಂಗಳವಾರ ನಡೆಯಲಿರುವ ಕ್ರೀಡಾಕೂಟದಲ್ಲಿ ಪಾಲ್ಗೊಳ್ಳಲು ಬೇರೆ ಊರುಗಳಲ್ಲಿರುವ ಪಾಲಕರೂ ಬರುತ್ತಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.