ADVERTISEMENT

ಉಜ್ಜಿನಿ ಆಸ್ಪತ್ರೆಗೆ ಬೇಕಿದೆ ತುರ್ತು ಚಿಕಿತ್ಸೆ

ಎಸ್.ಎಂ.ಗುರುಪ್ರಸಾದ ಕೊಟ್ಟೂರು
Published 1 ಆಗಸ್ಟ್ 2017, 6:29 IST
Last Updated 1 ಆಗಸ್ಟ್ 2017, 6:29 IST
ಉಜ್ಜಿನಿ ಆಸ್ಪತ್ರೆಗೆ ಬೇಕಿದೆ ತುರ್ತು ಚಿಕಿತ್ಸೆ
ಉಜ್ಜಿನಿ ಆಸ್ಪತ್ರೆಗೆ ಬೇಕಿದೆ ತುರ್ತು ಚಿಕಿತ್ಸೆ   

ಕೊಟ್ಟೂರು : ಗ್ರಾಮಾಂತರ ಪ್ರದೇಶದ ಬಡವರ ಪಾಲಿಗೆ ವರವಾಗಬೇಕಿದ್ದ ಉಜ್ಜಿನಿ ಗ್ರಾಮದ ಸಮುದಾಯ ಆರೋಗ್ಯ ಕೇಂದ್ರವೇ ಆನಾರೋಗ್ಯದಿಂದ ನರಳುತ್ತಿದ್ದು, ಸೌಲಭ್ಯಗಳ ಕೊರತೆಯಿಂದ ಕಾಡುತ್ತಿದೆ.

ಪ್ರಾಥಮಿಕ ಆರೋಗ್ಯ ಕೇಂದ್ರವು ಸಮುದಾಯ ಆರೋಗ್ಯ ಕೇಂದ್ರವಾಗಿ ಮೇಲ್ದರ್ಜೆಗೇರಿ ಹಲವು ವರ್ಷ ಕಳೆದರೂ ನಾಮಫಲಕ ಬದಲಾವಣೆ ಬಿಟ್ಟರೆ ಸೌಲಭ್ಯ ವಿಷಯದಲ್ಲಿ ಮಾತ್ರ ಬೇರೇನೂ ಸುಧಾರಣೆ ಕಂಡಿಲ್ಲ. ರೋಗಿಗಳಿಗೆ ಚಿಕಿತ್ಸೆ ನೀಡುವುದಕ್ಕಿಂತ ಮೊದಲು ಆಸ್ಪತ್ರೆಗೆ ಶಸ್ತ್ರ ಚಿಕಿತ್ಸೆ ಆಗಬೇಕಿದೆ ಎಂಬುದು ಗ್ರಾಮಸ್ಥರ ಅಭಿಪ್ರಾಯ.

ಆಸ್ಪತ್ರೆಯ ಆವರಣದಲ್ಲಿ ಸ್ವಚ್ಛತೆ ಎಂಬುದು ಮರೀಚಿಕೆಯಾಗಿದ್ದು, ಎಲ್ಲೆಡೆ ತ್ಯಾಜ್ಯ ತುಂಬಿ ತುಳುಕುತ್ತಿರುವುದರಿಂದ ಸೊಳ್ಳೆಗಳು ಉತ್ಪತ್ತಿಯಾಗುತ್ತಿವೆ. ಆಸ್ಪತ್ರೆ ಆವರಣದಲ್ಲಿ ಅಡ್ಡಾಡಿದರೆ ಸಾಕು ಅನಾರೋಗ್ಯಕ್ಕೆ ತುತ್ತಾಗುವಂತಾಗಿದೆ. ಚಿಕಿತ್ಸೆ ಪಡೆಯುತ್ತಿರುವ ರೋಗಿಗಳು ಹಾಗೂ ಬಾಣಂತಿಯರ ಗೋಳು ಹೇಳುವಂತಿಲ್ಲ, ಸೊಳ್ಳೆಗಳ ಕಾಟದಿಂದ ಡೆಂಗಿ, ಮಲೇರಿಯಾ ರೋಗಗಳಿಗೆ ಜನರು ತುತ್ತಾಗುತ್ತಿದ್ದಾರೆ.

ADVERTISEMENT

ಆಸ್ಪತ್ರೆಯಲ್ಲಿ ಕುಡಿಯುವ ನೀರು, ಶೌಚಾಲಯ, ಆವರಣದಲ್ಲಿ ವಿದ್ಯುತ್ ದೀಪಗಳ ಸೌಕರ್ಯ ಹಾಗೂ ಕುಳಿತು ಕೊಳ್ಳಲು ಆಸನ ವ್ಯವಸ್ಥೆ ಇಲ್ಲ ಎಂದು ಗ್ರಾಮಸ್ಥ ನಾಗರಾಜ್ ದೂರಿದರು.

ಕಟ್ಟಡವು ಶಿಥಿಲಾವಸ್ಥೆ ತಲುಪಿದ್ದು, ಮೇಲ್ಚಾವಣಿಯ ಸಿಮೆಂಟ್ ಬಿರುಕು ಬಿಟ್ಟಿದೆ. ಇದರಿಂದ ರೋಗಿಗಳು ಜೀವ ಭಯದಲ್ಲಿ ಚಿಕಿತ್ಸೆ ಪಡೆಯುವಂತಾಗಿದೆ. ಆಸ್ಪತ್ರೆಗೆ ಕಾಯಂ ವೈದ್ಯರು ಹಾಗು ಸಿಬ್ಬಂದಿ ಇಲ್ಲ. ತೀವ್ರ ಕಾಯಿಲೆಯಿಂದ ಬಳಲುವ ರೋಗಿಗಳು ಬಂದರೆ ಸೂಕ್ತ ಚಿಕಿತ್ಸೆ ನೀಡುವ ಗೋಜಿಗೆ ಹೋಗದೆ ದಾವಣಗೆರೆ ಬಳ್ಳಾರಿ ಆಸ್ಪತ್ರೆಗಳಿಗೆ ಶಿಫಾರಸು ಮಾಡಿ ಕೈತೊಳೆದುಕೊಳ್ಳು ತ್ತಾರೆ ಇಲ್ಲಿನ ವೈದ್ಯರು.

* * 

ಕಟ್ಟಡದ ದುರಸ್ತಿ ಬಗ್ಗೆ ಹಾಗೂ ಸಿಬ್ಬಂದಿ ಕೊರತೆ ನೇಮಿಸುವ ಹಿರಿಯ ಅಧಿಕಾರಿಗಳ ಗಮನಕ್ಕೆ ತರಲಾಗಿದೆ. ಶೀಘ್ರವೇ ಕಾಯಂ ವೈದ್ಯ ರನ್ನು ನೇಮಕ ಮಾಡಲಾಗುವುದು
ಡಾ.ಷಣ್ಮುಖನಾಯ್ಕ
ತಾಲ್ಲೂಕು ವೈದ್ಯಾಧಿಕಾರಿ
 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.