ADVERTISEMENT

ಉದ್ಘಾಟನೆಗೆ ಮುನ್ನವೇ ಅಯೋಮಯ!

ಪರಮ ದೇವನಹಳ್ಳಿ ಶಾಲೆಯ ಪರಿ`ಸ್ಥಿತಿ'

​ಪ್ರಜಾವಾಣಿ ವಾರ್ತೆ
Published 19 ಜುಲೈ 2013, 5:18 IST
Last Updated 19 ಜುಲೈ 2013, 5:18 IST

ಬಳ್ಳಾರಿ: ವಿದ್ಯಾರ್ಥಿಗಳ ಅನುಕೂಲಕ್ಕಾಗಿ ಹತ್ತಾರು ಲಕ್ಷ ರೂಪಾಯಿ ಖರ್ಚು ಮಾಡಿ ಹೊಸದಾಗಿ ನಿರ್ಮಿಸಲಾಗಿರುವ ಶಾಲೆಯ ಕೊಠಡಿಗಳು ಉದ್ಘಾಟನೆಗೆ ಮುನ್ನವೇ ಶಿಥಿಲಾವಸ್ತೆ ತಲುಪಿದ್ದು, ಯಾವುದೇ ಕ್ಷಣದಲ್ಲಿ ಕುಸಿದು ಬೀಳುವ ಸ್ಥಿತಿ ತಲುಪಿವೆ.

ತಾಲ್ಲೂಕಿನ ಪರಮ ದೇವನಹಳ್ಳಿ ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ವಿದ್ಯಾರ್ಥಿಗಳ ಅನುಕೂಲಕ್ಕಾಗಿ ನಿರ್ಮಿಸಿರುವ ಕೊಠಡಿಗಳ ಸ್ಥಿತಿಯೇ ಅಯೋಮಯವಾಗಿದ್ದು, ಕಳಪೆ ಕಾಮಗಾರಿ ಹಿನ್ನೆಲೆಯಲ್ಲಿ ಗ್ರಾಮಸ್ಥರು ತೀವ್ರ ವಿರೋಧ ವ್ಯಕ್ತಪಡಿಸಿದ್ದರಿಂದ ನಿರ್ಮಾಣ ಕಾಮಗಾರಿ ಪೂರ್ಣಗೊಂಡು 4 ವರ್ಷ ಕಳೆದರೂ ಕೊಠಡಿಗಳು ಉದ್ಘಾಟನೆಗೊಂಡಿಲ್ಲ. ಅಲ್ಲದೆ, ಉದ್ಘಾಟನೆಗೆ ಮುನ್ನವೇ ಈ ಕೊಠಡಿಗಳು ನೆಲಕಚ್ಚುವ ಅಪಾಯ ಎದುರಾಗಿದೆ.

ಶಾಲೆಯ ಹಳೆಯ ಕಟ್ಟಡ ಸಂಪೂರ್ಣ ಶಿಥಿಲಗೊಂಡಿದ್ದರಿಂದ ವಿದ್ಯಾರ್ಥಿಗಳಿಗೆ ಆಗುವ ತೊಂದರೆ ನೀಗಿಸಲೆಂದೇ ನಾಲ್ಕು ವರ್ಷಗಳ ಹಿಂದೆ ಸಾಕಷ್ಟು ಅನುದಾನದ ನೆರವಿನೊಂದಿಗೆ ನೂತನವಾಗಿ ಎಂಟು ಕೊಠಡಿಗಳನ್ನು ನಿರ್ಮಿಸಲಾಗಿದೆ. ಶಾಸಕ ಬಿ.ಶ್ರೀರಾಮುಲು ಕಟ್ಟಡ ನಿರ್ಮಾಣ ಕಾಮಗಾರಿಯ ಶಂಕುಸ್ಥಾಪನೆ ನೆರವೇರಿಸಿದ್ದು, ಅವರ ಬೆಂಬಲಿಗರಾಗಿದ್ದವರೇ ಗುತ್ತಿಗೆ ಹಿಡಿದು ನಿರ್ಮಿಸಿರುವ ಈ ಕಟ್ಟಡಗಳು ಸಂಪೂರ್ಣ ಕಳಪೆಯಾಗಿದ್ದನ್ನು ಗಮನಿಸಿದ ಗ್ರಾಮಸ್ಥರು, `ಕಟ್ಟಡ ಸರಿಯಾಗಿ ನಿರ್ಮಿಸದಿದ್ದರೆ ಉದ್ಘಾಟನೆಯೇ ಬೇಡ' ಎಂದು ಪಟ್ಟು ಹಿಡಿದಿದ್ದರಿಂದ ಶಿಕ್ಷಣ ಇಲಾಖೆ ಈ ಬಗ್ಗೆ ಪರಿಶೀಲನೆಯನ್ನೂ ನಡೆಸಿದೆ.

8ನೇ ತರಗತಿವರೆಗಿನ ಈ ಶಾಲೆಯಲ್ಲಿ ಒಟ್ಟು 220 ವಿದ್ಯಾರ್ಥಿಗಳು ಅಭ್ಯಾಸ ಮಾಡುತ್ತಿದ್ದು, ಈ ಹಿಂದೆ ನಿರ್ಮಿಸಲಾಗಿರುವ ಎರಡು ಹೊಸ ಕೊಠಡಿಗಳನ್ನು ನೂತನವಾಗಿ ಮಂಜೂರಾಗಿರುವ ಪದವಿಪೂರ್ವ ಕಾಲೇಜುಗಳ ತರಗತಿ ನಡೆಸಲು ಬಿಟ್ಟುಕೊಡಲಾಗಿದೆ. ಇದರಿಂದಾಗಿ ಕುಸಿಯುವ ಹಂತದಲ್ಲಿರುವ ಹಳೆಯ ಕೊಠಡಿಗಳಲ್ಲೇ ವಿದ್ಯಾರ್ಥಿಗಳು ಅಪಾಯಕ್ಕೆ ಆಹ್ವಾನ ನೀಡಿಯೇ ಪಾಠ ಕೇಳುವಂತಾಗಿದೆ.

`ಮಳೆ ಸುರಿಯಲಾರಂಭಿಸಿದರೆ ಈ ಹಳೆಯ ಕೊಠಡಿಗಳು ಸೋರುವುದರಿಂದ ಅಂದು ಶಾಲೆಗೆ ರಜೆ ಘೋಷಿಸಲಾಗುತ್ತದೆ' ಎಂದು ಅನೇಕ ಮಕ್ಕಳು `ಪ್ರಜಾವಾಣಿ'ಗೆ ತಿಳಿಸಿದರು.

ಈ ಸಮಸ್ಯೆಯ ಹಿನ್ನೆಲೆಯಲ್ಲೇ ಹೊಸದಾಗಿ 8 ಕೊಠಡಿಗಳ ನಿರ್ಮಿಸಲಾಗಿದ್ದು, ಉದ್ಘಾಟನೆಗೆ ಮುನ್ನವೇ ಕಳಪೆ ಕಾಮಗಾರಿಯಿಂದಾಗಿ ಹೊಸ ಕಟ್ಟಡದ ಗೋಡೆಗಳು, ಕಂಬಗಳು ಬಿರುಕು ಬಿಟ್ಟಿವೆ. ಇದನ್ನು ಕಂಡ ಗ್ರಾಮಸ್ಥರು ತಕರಾರು ತೆಗೆದು ಇಲಾಖೆಗೆ ದೂರು ಸಲ್ಲಿಸಿದ್ದರಿಂದ ಕೆಲವು ಅಧಿಕಾರಿಗಳು ಪರಿಶೀಲನೆಯನ್ನೂ ಮಾಡಿದ್ದರೂ  ಪ್ರಯೋಜನವಾಗಿಲ್ಲ. ಶಾಲೆಯ ಕೊಠಡಿಗಳ ಸಮಸ್ಯೆ ಪರಿಹಾರವಾಗಿಲ್ಲ ಎಂದು ಮುಖ್ಯಾಧ್ಯಾಪಕಿ ಸುಶೀಲಾ ಅಸಹಾಯಕತೆ ವ್ಯಕ್ತಪಡಿಸಿದರು.

ಕಾಮಗಾರಿ ಕಳಪೆಯಾಗಿದ್ದರಿಂದ ಈ ಕೊಠಡಿಗಳು ಉಪಯೋಗಕ್ಕೆ ಬಾರದಾಗಿ, ಅನೈತಿಕ ಚಟುವಟಿಕೆಗಳ ತಾಣವಾಗಿವೆ. ದನಕರುಗಳು, ಹಂದಿ, ನಾಯಿಗಳ ಆವಾಸಸ್ಥಾನವಾಗಿರುವ ಈ ಕೊಠಡಿಗಳನ್ನು ಕೆಲವರು   ಶೌಚಾಲಯಗಳಂತೆ ಬಳಕೆ ಮಾಡಿಕೊಳ್ಳುತ್ತಿದ್ದಾರೆ ಎಂದು ಹೆಸರು ಬಹಿರಂಗಪಡಿಸಲು ಇಚ್ಛಿಸದ ಗ್ರಾಮಸ್ಥರೊಬ್ಬರು ದೂರಿದರು.

ಕಳಪೆ ಕಾಮಗಾರಿ ಕುರಿತ ಶಿಕ್ಷಣ ಇಲಾಖೆ ಅಧಿಕಾರಿಗಳು ಪರಿಶೀಲನೆ ನಡೆಸಿ ವರದಿ ಸಲ್ಲಿಸಿರುವ ಬಗ್ಗೆ ಮಾಹಿತಿ ಇಲ್ಲ. ಶಿಕ್ಷಣ ಇಲಾಖೆ ಈ ಬಗ್ಗೆ ಕ್ರಮ ಕೈಗೊಂಡಿಲ್ಲ ಎಂದೂ ಅವರು ಹೇಳಿದರು.

ಮಕ್ಕಳು ಮನೆಯಿಂದ ಶಾಲೆಗೆ ಸುರಕ್ಷಿತವಾಗಿ ತೆರಳಿ, ಸುರಕ್ಷಿತವಾಗಿ ಮರಳಬೇಕು. ಆದರೆ, ಬೆಳಿಗ್ಗೆ ಶಾಲೆಗೆ ಹೋದ ಮಕ್ಕಳ ಸುರಕ್ಷತೆ ಬಗ್ಗೆ ಚಿಂತಯಾಗಿದೆ ಎಂದು ಯಲ್ಲಮ್ಮ ಎಂಬ ಪಾಲಕಿಯೊಬ್ಬರು ತಿಳಿಸಿದರು. ತಪ್ಪು ಮಾಡಿದವರ ಆದಷ್ಟು ಬೇಗ ಸುಸಜ್ಜಿತ ಕೊಠಡಿ ನಿರ್ಮಿಸಿ ಕೊಡುವಂತೆ ಕ್ರಮ ಕೈಗೊಳ್ಳಬೇಕು ಎಂದೂ ಅವರು ಆಗ್ರಹಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.