ಬಳ್ಳಾರಿ: ಲೋಕಸಭೆ ಚುನಾವಣೆಯಲ್ಲಿ ಸ್ಪರ್ಧಿಸಿರುವ ಎಸ್‌ಯುಸಿಐ (ಸಿ) ಪಕ್ಷದ ಅಭ್ಯರ್ಥಿ ಎ.ದೇವದಾಸ್ ಅವರು ಭಾನುವಾರ ಬೆಳಿಗ್ಗೆ ನಗರದ ವಿವಿಧ ಉದ್ಯಾನವನ ಹಾಗೂ ಆಟದ ಮೈದಾನಗಳಲ್ಲಿ ಚುನಾವಣಾ ಪ್ರಚಾರ ನಡೆಸುವ ಮೂಲಕ ಮತ ಯಾಚಿಸಿದರು.
ವಾಯು ವಿಹಾರಕ್ಕೆ ಬಂದಿದ್ದ ಮತದಾರರನ್ನು ಭೇಟಿಯಾದ ಅಭ್ಯರ್ಥಿ ಹಾಗೂ ಕಾರ್ಯಕರ್ತರು ಪಕ್ಷದ ಕರಪತ್ರ ಹಂಚಿ, ಬೆಂಬಲಿಸುವಂತೆ ಕೋರಿದರು.
ಭ್ರಷ್ಟಾಚಾರ ಮತ್ತು ಸ್ವಜನ ಪಕ್ಷಪಾತದಿಂದ ಕೂಡಿರುವ ರಾಜಕೀಯ ಪಕ್ಷಗಳು ಕಲುಷಿತಗೊಂಡಿದ್ದು, ಅಂತಹ ಪಕ್ಷಗಳನ್ನು ತಿರಸ್ಕರಿಸಬೇಕು ಎಂದು ಅವರು ಮನವಿ ಮಾಡಿದರು.
65 ವರ್ಷ ದೇಶದಲ್ಲಿ ಆಡಳಿತ ನಡೆಸಿದ ಕಾಂಗ್ರೆಸ್ ಹಾಗೂ ಬಿಜೆಪಿ ಸರ್ಕಾರಗಳು ನಿರುದ್ಯೋಗ, ಬಡತನ ಸಮಸ್ಯೆ ನಿವಾರಿಸುವ ಕುರಿತು ಗಂಭೀರವಾಗಿ ಚಿಂತಿಸದೆ ಭ್ರಷ್ಟ ಆಡಳಿತ ನೀಡಿವೆ ಎಂದು ಅವರು ದೂರಿದರು.
ಕೇವಲ ಅಧಿಕಾರಕ್ಕಾಗಿ ಹಪಹಪಿಸುವ ಈ ಪಕ್ಷಗಳಿಂದ ದೇಶದ ಜ್ವಲಂತ ಸಮಸ್ಯೆಗಳ ನಿವಾರಣೆ ಅಸಾಧ್ಯ. ಇಂತಹ ಪಕ್ಷಗಳಿಗೆ ಮತದಾರರು ಮನ್ನಣೆ ನೀಡಬಾರದು ಎಂದರು. ಉನ್ನತ ಸಿದ್ಧಾಂತ ಹಾಗೂ ಮೌಲ್ಯಾಧಾರಿತ ರಾಜಕೀಯ ವ್ಯವಸ್ಥೆಯ ಮೇಲೆ ಅಪಾರ ನಂಬಿಕೆ ಇರುವ ತಮ್ಮ ಪಕ್ಷವನ್ನು ಬೆಂಬಲಿಸಬೇಕು ಎಂದು ಅವರು ಕೋರಿದರು.
ಜಿಲ್ಲಾ ಘಟಕದ ಕಾರ್ಯದರ್ಶಿ ಕೆ.ಸೋಮಶೇಖರ್, ಆರ್. ಸೋಮಶೇಖರಗೌಡ, ಡಾ.ಪ್ರಮೋದ್ ಇತರರು ಪಾಲ್ಗೊಂಡಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.