ADVERTISEMENT

ಉನ್ನತ ಶಿಕ್ಷಣ ಮಸೂದೆ ವಿರುದ್ಧ ವಕೀಲರ ಪ್ರತಿಭಟನೆ

​ಪ್ರಜಾವಾಣಿ ವಾರ್ತೆ
Published 12 ಜುಲೈ 2012, 8:10 IST
Last Updated 12 ಜುಲೈ 2012, 8:10 IST
ಉನ್ನತ ಶಿಕ್ಷಣ ಮಸೂದೆ ವಿರುದ್ಧ ವಕೀಲರ ಪ್ರತಿಭಟನೆ
ಉನ್ನತ ಶಿಕ್ಷಣ ಮಸೂದೆ ವಿರುದ್ಧ ವಕೀಲರ ಪ್ರತಿಭಟನೆ   

ಬಳ್ಳಾರಿ: ಕೇಂದ್ರ ಸರ್ಕಾರ ಜಾರಿಗೆ ತರಲು ಉದ್ದೇಶಿಸಿರುವ `ಉನ್ನತ ಶಿಕ್ಷಣ ಮತ್ತು ಸಂಶೋಧನೆ ಮಸೂದೆ~ ವಿರುದ್ಧ ನಗರದಲ್ಲಿ ಬುಧವಾರ ನೂರಾರು ವಕೀಲರು ಪ್ರತಿಭಟನೆ ನಡೆಸಿದರು.

ಭಾರತೀಯ ವಕೀಲರ ಪರಿಷತ್ತು ಹಾಗೂ ಕರ್ನಾಟಕ ವಕೀಲರ ಪರಿಷತ್ತಿನ ಅಧಿಕಾರ ಮೊಟಕುಗೊಳಿಸುವ ಉದ್ದೆೀಶದಿಂದ ಮಸೂದೆಯನ್ನು ಜಾರಿಗೊಳಿಸಲಾಗುತ್ತಿದೆ ಎಂದು ವಕೀಲರು ಆರೋಪಿಸಿದರು.

ಕೇಂದ್ರದ ಮಾನವ ಸಂಪನ್ಮೂಲ ಇಲಾಖೆ ಮೂಲಕ ನಿಯಂತ್ರಣ ಮಾಡಲು ಹುನ್ನಾರ ನಡೆದಿದೆ. ಹೊಸ ಮೂದೆಯ ಜಾರಿಯಿಂದ ಕಾನೂನು ಕಾಲೇಜುಗಳು ಹಾಗೂ ಕಾನೂನು ಕಾಯಿದೆಗಳಿಗೆ ಧಕ್ಕೆಯಾಗಲಿದೆ.

ಇದರಿಂದ ವಕೀಲರು ಹಾಗೂ ಕಾನೂನು ಕಾಲೇಜುಗಳು ಪ್ರಜಾಸತ್ತಾತ್ಮಕ ಹಕ್ಕು ಗಳನ್ನು ಕಳೆದುಕೊಳ್ಳುವಂತಾಗುತ್ತದೆ. ಕೇಂದ್ರ ಸರ್ಕಾರ ಮಸೂದೆಯನ್ನು ಮುಂಗಾರು ಅಧಿವೇಶನದಲ್ಲಿ ಮಂಡಿ ಸಲು ಸಿದ್ಧತೆ ನಡೆಸಿದ್ದು, ಕೂಡಲೇ ಈ ಬಗ್ಗೆ ಪರಾಮರ್ಶೆ ನಡೆಯಬೇಕು. ಮಸೂದೆ ಜಾರಿಯಿಂದಾಗುವ ಅಪಾಯಗಳ ಕುರಿತು ತಜ್ಞರ ಜತೆ ಚರ್ಚಿಸಿದ ನಂತರ ಮುಂದಿನ ಕ್ರಮ ಕೈಗೊಳ್ಳಬೇಕು ಎಂದು ಪ್ರತಿಭಟನಾ ಕಾರರು ಒತ್ತಾಯಿಸಿದರು.

ವಕೀಲರ ಸಂಘದ ಕಚೇರಿಯಿಂದ ಹೊರಟ ಮೆರವಣಿಗೆ ಜೋಡಿ ರಸ್ತೆ ಮೂಲಕ ಗಡಗಿಚನ್ನಪ್ಪ ವೃತ್ತ ತಲುಪಿತು. ವೃತ್ತದಲ್ಲಿ ಕೆಲಕಾಲ ಮಾನವ ಸರಪಳಿ ನಿರ್ಮಿಸಿ ರಸ್ತೆ ತಡೆ ನಡೆಸಿದ ವಕೀಲರು, ಕೇಂದ್ರ ಸರ್ಕಾರದ ಅವೈಜ್ಞಾನಿಕ ನಿರ್ಧಾರದ ವಿರುದ್ಧ ಘೋಷಣೆಗಳನ್ನು ಕೂಗಿದರು. ಬಳಿಕ ಮೆರವಣಿಗೆ ಜಿಲ್ಲಾಧಿಕಾರಿ ಕಚೇರಿ ತಲುಪಿತು.

 ಈ ಸಂದರ್ಭದಲ್ಲಿ ಮಾತನಾಡಿದ ವಕೀಲರ ಸಂಘದ ಜಿಲ್ಲಾ ಘಟಕದ ಅಧ್ಯಕ್ಷ ಎ.ಜಿ.ಶಿವಕುಮಾರ್, ವಕೀಲರ ಪರಿಷತ್ತಿನ ಸ್ವಾಯತ್ತತೆಯನ್ನು ಹಾಳು ಮಾಡುವ ಹಾಗೂ ಎಲ್ಲ ಅಧಿಕಾರವನ್ನು ತಮ್ಮ ನಿಯಂತ್ರಣದಲ್ಲಿಟ್ಟುಕೊಳ್ಳುವ ಹುನ್ನಾರದಿಂದ ಕೇಂದ್ರದ ಯುಪಿಎ ಸರ್ಕಾರ ಹೊಸ ಮಸೂದೆಯನ್ನು ಜಾರಿಗೊಳಿಸಲು ನಿರ್ಧರಿಸಿದ್ದು, ಕೂಡಲೇ ತನ್ನ ನೀತಿಯಿಂದ ಹಿಂದಕ್ಕೆ ಸರಿಯಬೇಕು ಎಂದು ಆಗ್ರಹಿಸಿದರು.

ಸಂಘದ ಕಾರ್ಯದರ್ಶಿ ಉಪಾಧ್ಯಕ್ಷ ಎರ‌್ರೆಗೌಡ, ಕಾರ್ಯದರ್ಶಿ ಬಿ.ಎಸ್. ಭದ್ರಿನಾಥ್, ಖಜಾಂಚಿ ಪಿ.ಎಂ. ಜಡೇಶ್, ಸಹ ಕಾರ್ಯದರ್ಶಿ ವಿಜಯಲಕ್ಷ್ಮಿ, ಹಿರಿಯ ವಕೀಲರಾದ ಬಿ.ವೈ. ಹಾಲಪ್ಪ, ಮಹೇಂದ್ರನಾಥ್, ರಾಮಬ್ರಹ್ಮ, ಗುರುರಾಜ್, ಕೊಟ್ರೇಶ್ ಮತ್ತಿತರರು ಪಾಲ್ಗೊಂಡಿದ್ದರು.
 
ಪ್ರಧಾನಮಂತ್ರಿ ಹಾಗೂ ಮಾನವ ಸಂಪನ್ಮೂಲ ಸಚಿವರಿಗೆ ಬರೆದ ಮನವಿಯನ್ನು ಹೆಚ್ಚುವರಿ ಜಿಲ್ಲಾಧಿಕಾರಿ ವಿಜಯಕುಮಾರ್ ಸ್ವೀಕರಿಸಿದರು.
ಬಳ್ಳಾರಿ ವಕೀಲರ ಸಂಘದ ನೇತೃತ್ವದಲ್ಲಿ ಪ್ರತಿಭಟನೆ ಹಮ್ಮಿಕೊಳ್ಳಲಾಗಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.