ADVERTISEMENT

ಕಡಿಮೆಯಾಗುತ್ತ ಸಾಗಿರುವ ಪ್ರಾಣಿಗಳ ಸಂಖ್ಯೆ

ನಿರ್ಲಕ್ಷ್ಯಕ್ಕೊಳಗಾದ ಪ್ರಾಣಿ ಸಂಗ್ರಹಾಲಯ

​ಪ್ರಜಾವಾಣಿ ವಾರ್ತೆ
Published 24 ಜೂನ್ 2013, 4:39 IST
Last Updated 24 ಜೂನ್ 2013, 4:39 IST

ಬಳ್ಳಾರಿ: ಸಾಲು ಸಾಲು ಖಾಲಿ ಪಂಜರಗಳು, ಬಿಕೋ ಎನ್ನುತ್ತಿರುವ ಹಾವಿನ ಬಿಲಗಳು, ಜೀವಕಳೆ ಕಳೆದು ಕೊಂಡ ಪಕ್ಷಿ ಗೂಡುಗಳು, ಕಣ್ಣಾಡಿಸಿ ದಲ್ಲೆಲ್ಲ ಕಸದ ರಾಶಿ, ಬೆರಳೆಣಿಕೆಯಷ್ಟು ಮೃಗಾಲಯದ ಸಿಬ್ಬಂದಿ ಇವೆಲ್ಲವುಗಳ ಮಧ್ಯೆಯೂ ನಿತ್ಯವೂ ನೂರಾರು ಜನ ಪ್ರೇಕ್ಷಕರನ್ನು ತನ್ನತ್ತ ಸೆಳೆಯುತ್ತಿರುವ ನಗರದ ಐತಿಹಾಸಿಕ ಪ್ರಾಣಿ ಸಂಗ್ರಹಾ ಲಯದ ವಿಶೇಷತೆಯೇ ಹೌದು.

1981ರಲ್ಲಿಯೇ ಅಂದಿನ ಅರಣ್ಯ, ಗಣಿ ಮತ್ತು ಭೂವಿಜ್ಞಾನ ಖಾತೆ ಸಚಿವರಾಗಿದ್ದ ಜಿ.ಮಾದೇಗೌಡರಿಂದ ಉದ್ಘಾಟನೆಗೆ ಒಳಗಾಗಿರುವ ಪ್ರಾಣಿ ಸಂಗ್ರಹಾಲಯ ಇಂದು ದಿವ್ಯ ನಿರ್ಲಕ್ಷ್ಯಕ್ಕೆ ಒಳಗಾಗಿರುವುದು ನಗರದ ವನ್ಯಜೀವ ಪ್ರೇಮಿಗಳಲ್ಲಿ ತೀವ್ರ ನಿರಾಸಕ್ತಿ ಉಂಟುಮಾಡಿದೆ.

ಸತತ 32 ವರ್ಷಗಳಿಂದ ಮುಖ್ಯ ವಾಗಿ ಜಿಲ್ಲೆಯ ಮಕ್ಕಳ ಮನಸ್ಸನ್ನು ಅರಳಿಸುವ ನಿಟ್ಟಿನಲ್ಲಿ ಮೃಗಾಲಯದ ಪಾತ್ರ ಮಹತ್ವದ್ದಾಗಿದೆ. ಮೂರು ದಶಕಗಳಿಗಿಂತಲು ಹೆಚ್ಚು ಕಾಲ ಸೇವೆಯನ್ನು ಒದಗಿಸುತ್ತಿರುವ ಪ್ರಾಣಿ ಸಂಗ್ರಹಾಲಯ ಇಂದು ಬಿಕೋ ಎನ್ನುತ್ತಿರುವುದು ಸೋಜಿಗದ ಸಂಗತಿಯಾಗಿದೆ.
ಇದೇ ರೀತಿಯಲ್ಲಿ ಮೃಗಾಲಯವು ನಿರ್ಲಕ್ಷ್ಯದಿಂದ ಕಾರ್ಯ ನಿರ್ವಹಿಸಿದ್ದೇ ಆದರೆ, ಇನ್ನು ಕೆಲವೆ ದಿನಗಳಲ್ಲಿ ಮೃಗಾಲಯವು ಇತಿಹಾಸದ ಪುಟ ಸೇರುವುದರಲ್ಲಿ ಸಂಶಯವೇ ಇಲ್ಲ ಎಂಬ ಸ್ಥಿತಿ ಈಗ ಎದುರಾಗಿದೆ.

ಪ್ರಸ್ತುತ ಮೃಗಾಲಯದಲ್ಲಿ ಕೇವಲ ಒಂದು ಹುಲಿ, ಒಂದು ಚಿರತೆ, ಒಂದು ಕರಡಿ, ಒಂದು ತೋಳ, ಎರಡು ಕೋತಿ, ಎರಡು ನರಿ, ಆರು ಮೊಸಳೆ, ಹತ್ತು ನವಿಲು, 15 ಆಮೆ, 70ಕ್ಕೂ ಅಧಿಕ ಚುಕ್ಕೆ ಜಿಂಕೆ, 60 ಕ್ಕೂ ಅಧಿಕ ಕೃಷ್ಣ ಮೃಗ, ಬೆರಳೆಣಿಕೆಯಷ್ಟು ಪ್ರೇಮ ಪಕ್ಷಿಗಳು, ಒಂದಷ್ಟು ಪಾರಿವಾಳ ಮತ್ತು ಗಿಳಿಗಳು ಹಾಗೂ ಇದರ ಉಸ್ತುವಾರಿ ಹೊತ್ತ ಐದು ಜನ ಸಿಬ್ಬಂದಿಯನ್ನು ಕೆಲವೇ ನಿಮಿಷಗಳಲ್ಲಿ ಎಣಿಕೆ ಮಾಡಬಹುದು.

ಪ್ರಾಣಿಗಳಿಗೆ ನಿತ್ಯವೂ 30 ಕಿಲೋ ಮಾಂಸ, ಜಿಂಕೆ ಹಾಗೂ ಕೃಷ್ಣಮೃಗ ಗಳಿಗೆ ನಿತ್ಯ 100 ಕಿಲೋ ಗೋಧಿ ಮತ್ತು 50 ಕಿಲೋ ಹೆಸರು ನೀಡಲಾಗುತ್ತಿದೆ.
ದೇಶದೆಲ್ಲೆಡೆ ನಗರವು ಶ್ರೇಷ್ಟಮಟ್ಟದ ಉಕ್ಕಿನ ಉತ್ಪಾದನೆಗೆ ಹೆಸರುವಾಸಿ ಆಗಿದ್ದರೂ ಜೀನ್ಸ್ ಮತ್ತು ಜವಳಿಯ ಉದ್ಯಮದಲ್ಲಿ ಮುಂಚೂಣಿಯಲ್ಲಿ ಇದ್ದರೂ, ಒಂದು ಮೃಗಾಲಯವನ್ನೂ ಸಹ ಅಚ್ಚುಕಟ್ಟಾಗಿ, ಸರಳ ಸುಲಭ ರೀತಿಯಲ್ಲಿ ನಿಭಾಯಿಸುವಲ್ಲಿ ವೈಫಲ್ಯ ಕಂಡಿರುವುದು ಜಿಲ್ಲೆಯ ಪ್ರಾಣಿಪ್ರಿಯ ರಲ್ಲಿ ಆಕ್ರೋಶ ಉಂಟುಮಾಡಿದೆ.

`ಪ್ರತಿ ಭಾನುವಾರ ಮೊಮ್ಮಗನ ಜತೆ ಪಿಕ್‌ನಿಕ್‌ಗೆ ಇಲ್ಲಿಗೇ ಬರುತ್ತೇನೆ. ಮೊಮ್ಮಗ ಇಲ್ಲಿಯ ಹುಲಿ, ಚಿರತೆ, ಕರಡಿ ನೋಡಿ ಬಾಳ ಕುಷಿ ಪಡ್ತಾನೆ. ನಮ್ಮ ಊರಿನ ಪ್ರಾಣಿ ಸಂಗ್ರಹಾಲಯ ನಮ್ಮೂರ‌್ನಲ್ಲೇ ಇರ‌್ಬೇಕು, ಇದು ಬ್ಯಾರೆ ಕಡೆ ಹೋಗಬಾರದು' ಎಂದು ಸ್ಥಳೀಯ ಪಟೇಲ್ ನಗರ ನಿವಾಸಿ ಅರುಣಮ್ಮ `ಪ್ರಜಾವಾಣಿ' ಎದುರು ತಿಳಿಸಿದರು.

`ಚಿಕ್ಕಂದಿನಿಂದಲೂ ಮೃಗಾಲಯಕ್ಕೆ ಬಿಡುವಿನ ಸಮಯದಲ್ಲಿ ಭೇಟಿ ನೀಡುತ್ತಿದ್ದೇನೆ, ಆದರೆ, ಹಿಂದೆ ಇದ್ದಂತೆ ಪ್ರಾಣಿ, ಪಕ್ಷಿಗಳ ಸಂಖ್ಯೆ ಈಗ ಇಲ್ಲದಾಗಿದೆ' ಎಂದು ಯರಿಸ್ವಾಮಿ ಬೇಸರ ವ್ಯಕ್ತಪಡಿಸಿದ.

ಇದೇ ರೀತಿ ನಗರ ಒಳಗೊಂಡಂತೆ ಜಿಲ್ಲೆಯ ಬಹುತೇಕ ಪ್ರದೇಶಗಳಿಂದ ಪ್ರತಿ ನಿತ್ಯ ಇಲ್ಲಿಗೆ ತಮ್ಮ ಮಕ್ಕಳು, ಮೊಮ್ಮಕ್ಕಳೊಂದಿಗೆ ಆಗಮಿಸುವ ಸಾರ್ವಜನಿಕರು ಒಂದಷ್ಟು ಕಾಲ ಇಲ್ಲಿಯ ಪ್ರಾಣಿ, ಪಕ್ಷಿಗಳ ಗತ್ತು ಗಮ್ಮತ್ತನ್ನು ನೋಡಿದವರ ಮನಸ್ಸು ಪುಳಕಗೊಳ್ಳದೆ ಇರುವುದಿಲ್ಲ.

ಪ್ರತಿ ಶನಿವಾರ ಹಾಗೂ ಭಾನುವಾರ ಮೃಗಾಲಯವು ಪ್ರೇಕ್ಷಕರಿಂದ ಕಿಕ್ಕಿರಿದು ತುಂಬಿರುತ್ತದೆ. ಒಂದೆಡೆ ಪಕ್ಷಿಗಳ ಚಿಲಿಪಿಲಿ, ಮತ್ತೊಂದೆಡೆ ಮೃಗಾಲಯದ ಆಟದ ಮೈದಾನದಲ್ಲಿ ಮಕ್ಕಳ ಕಲರವ ಕೇಳುವುದೇ ಹಬ್ಬ.

ಇಂತಹ ಆಲಯ ಇದೀಗ ಹಂಪಿ ಬಳಿಯ ಕಮಲಾಪುರಕ್ಕೆ ಸ್ಥಳಾಂತರ ಗೊಳ್ಳಲಿದೆ ಎಂಬ ಸುದ್ದಿ ಕೇಳಿರುವ ಜನರಲ್ಲಿ ಆತಂಕ ಮೂಡಿದೆ. ಮಕ್ಕಳು ಮರಿಗಳ ಜತೆ ಪಿಕ್‌ನಿಕ್‌ಗೆ ತೆರಳಲು ತಾಣವೇ ಇಲ್ಲದಂತಾಗುತ್ತದೆ ಎಂಬುದೇ ಅದಕ್ಕೆ ಕಾರಣ. ಪ್ರಾಣಿ ಸಂಗ್ರಹಾಲಯ ಪ್ರಾಧಿಕಾರ ಹುಲಿ, ಚಿರತೆ, ಕರಡಿಯನ್ನು ಹತ್ತಿರದಿಂದ ನೋಡಬೇಕೆನ್ನುವ ಮಕ್ಕಳ ಆಸೆಯನ್ನು ಚಿವುಟದಿದ್ದರೆ ಸಾಕು.

ಪ್ರಾಣಿ ಸಂಗ್ರಹಾಲಯ ಸ್ಥಳಾಂತರ ಗೊಳ್ಳುವುದು ಖಚಿತ. ಕ್ರೂರ ಮೃಗಗಳನ್ನು ಮಾತ್ರ ಇಲ್ಲಿಂದ ಸ್ಥಳಾಂತರಿಸಿ, ಸಸ್ಯಾಹಾರಿ ಪ್ರಾಣಿಗಳನ್ನು ಇಲ್ಲೇ ಇರಿಸಿಕೊಳ್ಳಲಾಗುವುದು ಎಂದು ಅರಣ್ಯ ಇಲಾಖೆಯ ಅಧಿಕಾರಿ ಯೂಬರ್ಟ್ ತಿಳಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.