ADVERTISEMENT

ಕಣವಿ ಮಾರಮ್ಮದೇವಿಗೆ ಪೂಜೆ

​ಪ್ರಜಾವಾಣಿ ವಾರ್ತೆ
Published 8 ಏಪ್ರಿಲ್ 2013, 6:25 IST
Last Updated 8 ಏಪ್ರಿಲ್ 2013, 6:25 IST

ಕಂಪ್ಲಿ: ಕಂಪ್ಲಿ ವಿಧಾನಸಭಾಕ್ಷೇತ್ರ ಬಿಜೆಪಿ ಪದಾಧಿಕಾರಿಗಳು, ಮುಖಂಡರು ಮತ್ತು ಕಾರ್ಯಕರ್ತರು ಕ್ಷೇತ್ರ ವ್ಯಾಪ್ತಿಯ ದೇವಲಾಪುರ ಕಣಿವಿ ಮಾರೆಮ್ಮ ದೇವಿಗೆ ಶುಕ್ರವಾರ ವಿಶೇಷ ಪೂಜೆ ಸಲ್ಲಿಸುವುದರೊಂದಿಗೆ ಪಕ್ಷದ ಅಭ್ಯರ್ಥಿ ಪರ ಮನೆಗಳಿಗೆ ತೆರಳಿ ಮತಯಾಚನೆ ಆರಂಭಿಸಿದರು.

ಕಂಪ್ಲಿ ವಿಧಾನಸಭಾಕ್ಷೇತ್ರ ಬಿಜೆಪಿ ಅಧ್ಯಕ್ಷ ಜಿ. ಲಿಂಗನಗೌಡ ಮಾತನಾಡಿ, ಬಿಜೆಪಿ ಅಧಿಕಾರವಧಿಯಲ್ಲಿ ಕೈಗೊಂಡ ಅಭಿವೃದ್ಧಿ ಕಾರ್ಯಗಳೇ ತಮ್ಮ ಅಭ್ಯರ್ಥಿ ಗೆಲುವಿಗೆ ಶ್ರೀರಕ್ಷೆಯಾಗಲಿದೆ. ಕಂಪ್ಲಿ ಕ್ಷೇತ್ರದಲ್ಲಿ ಕಾಂಗ್ರೆಸ್ ಅಭ್ಯರ್ಥಿಯೇ ನಮ್ಮ ನೇರ ಎದುರಾಳಿ ಎಂದು ಸ್ಪಷ್ಟಪಡಿಸಿದರು. ಕೆಜೆಪಿಯಿಂದ ಬಿಜೆಪಿಗೆ ಯಾವುದೇ ರೀತಿಯ ತೊಂದರೆ ಇಲ್ಲ ಎಂದು ಹೇಳಿದರು.

ಬಿಜೆಪಿ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಅಗಳಿ ಪಂಪಾಪತಿ ಮಾತನಾಡಿ, ದಶಕಗಳಿಂದ ನೆನೆಗುದಿಗೆ ಬಿದಿದ್ದ ಕಂಪ್ಲಿ, ಕುರುಗೋಡು ಹೊಸ ತಾಲ್ಲೂಕು ರಚನೆಗೆ ಬಿಜೆಪಿ ಸರ್ಕಾರ ನಾಂದಿ ಹಾಡಿದ್ದು ಇದು ತಮ್ಮ ಪಕ್ಷದ ಅಭ್ಯರ್ಥಿ ಗೆಲುವಿಗೆ ಸಹಕಾರಿಯಾಗಲಿದೆ. ಅದೇ ರೀತಿ ಕಂಪ್ಲಿಯಲ್ಲಿ ಸರ್ಕಾರಿ ಪಾಲಿಟೆಕ್ನಿಕ್ ಸ್ಥಾಪನೆ, 30 ಹಾಸಿಗೆಗಳ ಸಮುದಾಯ ಆರೋಗ್ಯ ಕೇಂದ್ರ, ರಾಮಸಾಗರದಲ್ಲಿ ಪ್ರಾಥಮಿಕ ಆರೋಗ್ಯ ಕೇಂದ್ರ ಸ್ಥಾಪಿಸುವುದರ ಜೊತೆಗೆ ಹಲವಾರು ಅಭಿವೃದ್ಧಿ ಕಾರ್ಯಗಳನ್ನು ಮಾಡಿದ್ದು, ಬಿಜೆಪಿ ಅಭ್ಯರ್ಥಿ ಗೆಲ್ಲುವ ವಿಶ್ವಾಸವಿದೆ ಎಂದರು.

ಬಿಜೆಪಿ ಟಿಕೆಟ್ ಆಕಾಂಕ್ಷಿಗಳಾದ ಬಿಜೆಪಿ ಜಿಲ್ಲಾ ಯುವ ಮೋರ್ಚಾ ಅಧ್ಯಕ್ಷ ಬಿ. ಶಿವಕುಮಾರ ಮತ್ತು ಸುಗ್ಗೇನಹಳ್ಳಿ ಗ್ರಾಪಂ ಸದಸ್ಯ ಬಿ. ಕರಿಯಪ್ಪನಾಯಕ ಜಂಟಿಯಾಗಿ ಮಾತನಾಡಿ, ನಮ್ಮಿಬ್ಬರಲ್ಲಿ ಯಾರಿಗೆ  ಟಿಕೆಟ್ ನೀಡಿದರು ಗೆಲುವಿಗಾಗಿ ಶ್ರಮಿಸುತ್ತೇವಿ ಎಂದರು.
ಬಿಜೆಪಿ ಜಿಲ್ಲಾ ಘಟಕದ ಮಹಿಳಾ ಮೋರ್ಚಾ ಅಧ್ಯಕ್ಷೆ  ಮಂಜಮ್ಮ ಮಲ್ಲೇಶ, ಬಳ್ಳಾರಿ ತಾಲ್ಲೂಕು ಘಟಕದ ಅಧ್ಯಕ್ಷೆ ಸುಗುಣ, ರಾಜ್ಯ ಕಾರ್ಯದರ್ಶಿ ಶಿವ ಕೃಷ್ಣಮ್ಮ, ಕಂಪ್ಲಿ ನಗರ ಘಟಕ ಅಧ್ಯಕ್ಷ ಎಸ್. ನಂದೆಪ್ಪ, ಕ್ಷೇತ್ರದ ಯುವ ಮೋರ್ಚಾ ಅಧ್ಯಕ್ಷ ಡಿ.ಎಚ್.ಎಂ. ರವೀಂದ್ರ, ಯುವ ಮೋರ್ಚಾ ನಗರ ಘಟಕ ಅಧ್ಯಕ್ಷ ಸಿ. ಶರಣಗೌಡ, ಯುವ ಮೋರ್ಚಾ ಉಪಾಧ್ಯಕ್ಷ ಜೆ. ಶಂಕರ, ಎಸ್.ಸಿ ಯುವ ಮೋರ್ಚಾ ಅಧ್ಯಕ್ಷ ವಿ.ಟಿ. ರಾಜು, ಕಂಪ್ಲಿ ವ್ಯ.ಉ.ಮಾ ಸಹಕಾರ ಸಂಘದ ಉಪಾಧ್ಯಕ್ಷ ಬಂಡಿ ಮಾರೆಪ್ಪ, ಮುಖಂಡರಾದ ಗೌಡ್ರ ಅಂಜಿನಪ್ಪ, ಕೆ. ಶಿಲ್ಪ ನಾಗರಾಜ, ಚಾಗಿ ವೆಂಕಟೇಶ ಪ್ರಚಾರ ಕಾರ್ಯದಲ್ಲಿ ಭಾಗವಹಿಸಿದ್ದರು.

ನೀತಿ ಸಂಹಿತೆ ಪಾಲನೆಗೆ ಸೂಚನೆ
ಸಿರುಗುಪ್ಪ:
ವಿಧಾನಸಭಾ ಚುನಾವಣೆ ನೀತಿ ಸಂಹಿತೆಯು ಸಿರುಗುಪ್ಪ ಕ್ಷೇತ್ರ ವ್ಯಾಪ್ತಿಯ ಕೇಟರಿಂಗ್, ಖಾನಾವಳಿ, ಶಾಮಿಯಾನಾ, ಸೌಂಡ್ ಸಿಸ್ಟಂ,  ಬಾಡಿಗೆ ವಾಹನಗಳ ಮಾಲೀಕರಿಗೂ ಅನ್ವಯವಾಗುತ್ತಿದ್ದು, ಅವುಗಳ ಪಾಲನೆ ಮಾಡದಿದ್ದರೆ ಕಾನೂನು ಕ್ರಮ ಜರುಗಿಸಲಾಗುವುದು ಸಹಾಯಕ ಚುನಾವಣಾಧಿಕಾರಿ ಸಿ.ಎಚ್. ಶಿವಕುಮಾರ್ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಚುನಾವಣೆ ಸಮಯದಲ್ಲಿ ಯಾವುದೇ ವ್ಯಕ್ತಿ, ಪಕ್ಷದಿಂದ ಸಾಮೂಹಿಕ ಊಟದ ವ್ಯವಸ್ಥೆಗೆ ಕೇಟರಿಂಗ್ ಸರಬರಾಜು ಮಾಡುವವರಿಗೆ, ಶಾಮಿಯಾನ ಮೈಕ್, ಸೌಂಡ್ ಸಿಸ್ಟಂ ಮತ್ತು ಖಾಸಗಿ ಬಾಡಿಗೆ ವಾಹನ ಮಾಲೀಕರು ಸಕ್ಷಮ ಪ್ರಾಧಿಕಾರದಿಂದ ಪರವಾನಿಗೆ ಪಡೆದು ಚುನಾವಣಾ ಕಾರ್ಯಗಳಿಗೆ ಒದಗಿಸತಕ್ಕದ್ದು. ತಪ್ಪಿದಲ್ಲಿ ಸಂಬಂಧಪಟ್ಟವರ ವಿರುದ್ಧ ಕಾನೂನು ಕ್ರಮ ಜರುಗಿಸಿ, ಮುಟ್ಟುಗೋಲು ಹಾಕಿಕೊಳ್ಳಲಾಗುವುದು ಎಂದು ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.