ADVERTISEMENT

ಕನ್ನಡ ಪರ ಜಾಗೃತಿ ಮೂಡಿಸಲು ಶ್ರಮಿಸಿ: ಡಾ.ಮಂಜಪ್ಪ

​ಪ್ರಜಾವಾಣಿ ವಾರ್ತೆ
Published 19 ಜೂನ್ 2011, 8:50 IST
Last Updated 19 ಜೂನ್ 2011, 8:50 IST

ಬಳ್ಳಾರಿ: ಕನ್ನಡ ಭಾಷೆಯ ಅಭಿವೃದ್ಧಿಗಾಗಿ ಶ್ರಮಿಸುತ್ತಿರುವ ಕನ್ನಡ ಸಾಹಿತ್ಯ ಪರಿಷತ್ತು ವೈದ್ಯಕೀಯ, ವಿಜ್ಞಾನ ಮತ್ತು ತಂತ್ರಜ್ಞಾನ ವಿಷಯದ ಪುಸ್ತಕಗಳನ್ನು ಪ್ರಕಟಿಸಲು ಮುಂದಾಗಬೇಕಿದೆ ಎಂದು ವಿಜಯನಗರ ಶ್ರೀ ಕೃಷ್ಣದೇವರಾಯ ವಿಶ್ವವಿದ್ಯಾಲಯದ ಕುಲಪತಿ ಡಾ. ಮಂಜಪ್ಪ ಹೊಸಮನೆ ಅಭಿಪ್ರಾಯಪಟ್ಟರು.

ನಗರದ ಜೋಳದರಾಶಿ ಡಾ.ದೊಡ್ಡನಗೌಡ ರಂಗಮಂದಿರದಲ್ಲಿ ಶನಿವಾರ ಕನ್ನಡ ಸಾಹಿತ್ಯ ಪರಿಷತ್‌ನ 96ನೇ ವಾರ್ಷಿಕೋತ್ಸವ ಸಮಾರಂಭ ಉದ್ಘಾಟಿಸಿ ಅವರು  ಮಾತನಾಡಿದರು.

ಕನ್ನಡ ಕೇವಲ ಭಾಷೆಯಷ್ಟೇ ಅಲ್ಲ ಅದು ಸಂಸ್ಕೃತಿಯ ಭಾಗ. ಜಾಗತೀಕರಣದಿಂದಾಗಿ ಕನ್ನಡ ಭಾಷೆ ಸೋರಗುತ್ತಿದೆ. ಇಂತಹ ಸ್ಥಿತಿಯಲ್ಲಿ ಕನ್ನಡಿಗರು ಹೆಚ್ಚಿನ ಕಾಳಜಿ ವಹಿಸುವುದರ ಜತೆ ಕನ್ನಡಪರ ಜಾಗೃತಿ ಮೂಡಿಸಲು ಶ್ರಮಿಸಬೇಕು ಎಂದು ಅವರು ಸಕಹೆ ನೀಡಿದರು.

ಈ ನಿಟ್ಟಿನಲ್ಲಿ ವಿಶ್ವವಿದ್ಯಾಲಯವೂ ಕಾರ್ಯ ಪ್ರವೃತ್ತವಾಗಲಿದೆ. ಅದಕ್ಕೆ ಕನ್ನಡ ಸಾಹಿತ್ಯ ಪರಿಷತ್ ಸೇರಿದಂತೆ ಅನೇಕ ಕನ್ನಡ ಪರ ಸಂಘಟನೆಗಳು ಸಹಕಾರ ನೀಡಬೇಕು ಎಂದು ಅವರು ಮನವಿ ಮಾಡಿದರು.

ಅಂದು ಅನೇಕ ಕನ್ನಡಾಭಿಮಾನಿಗಳು ಕಟ್ಟಿ ಬೆಳಿಸಿದ ಕನ್ನಡ ಸಾಹಿತ್ಯ ಪರಿಷತ್ತು ನಿರಂತರವಾಗಿ 96 ವರ್ಷಗಳಿಂದ ತನ್ನ ಪಾಲಿನ ಕೆಲಸವನ್ನು ಶ್ರದ್ದೆ, ಕಾಳಜಿಯಿಂದ ಮಾಡುತ್ತ ಬಂದಿದೆ. ಇದೀಗ ಆ ಕಾರ್ಯ ಇನ್ನೂ ಅಚ್ಚುಕಟ್ಟಾಗಿ ನಡೆಯಬೇಕಿದೆ.  ನಾಡಿನ ಪ್ರತಿ ಕನ್ನಡಿಗ ಕನ್ನಡದ ಅಭಿವೃದ್ಧಿಯ ಜವಾಬ್ದಾರಿ ಹೊರಬೇಕಿದೆ ಎಂದು ಅವರು ತಿಳಿಸಿದರು.

ಕನ್ನಡ ಸಾಹಿತ್ಯ ಪರಿಷತ್ತು ವಿಜ್ಞಾನ, ತಂತ್ರಜ್ಞಾನ, ವೈದ್ಯಕೀಯ ಹಾಗೂ ಉನ್ನತ ಶಿಕ್ಷಣದತ್ತ ಗಮನ ಹರಿಸಿ, ಆ ಮೂಲಕ ತಾಂತ್ರಿಕ ಕ್ಷೇತ್ರದ ಶಬ್ದಗಳ ಕೊರತೆ ನಿವಾರಿಸಲು ಯತ್ನಿಸಬೇಕು. ಅದಕ್ಕೆ ಅಗತ್ಯ ನೆರವು ನೀಡಲು ಕನ್ನಡ ವಿಶ್ವ ವಿದ್ಯಾಲಯವಿದೆ. ಅದರ ಧನಸಹಾಯ ಪಡೆದು ಸಂಶೋಧನೆಯಲ್ಲಿ ತೋಡಗಿದಲ್ಲಿ ಕನ್ನಡದ ವ್ಯಾಪ್ತಿ ಇನ್ನಷ್ಟು ವಿಸ್ತೀರ್ಣಗೊಳ್ಳಲಿದೆ ಎಂದು ಹೊಸಮನೆ ಹೇಳಿದರು.

ವಿಶ್ವವಿದ್ಯಾಲಯದ ಕುಲಸಚಿವ ಡಾ.ರಂಗರಾಜ ವನದುರ್ಗ ಉಪನ್ಯಾಸ ನೀಡಿ, ಗಡಿ ಒತ್ತುವರಿಯಿಂದ ಈಗಾಗಲೇ ಕರ್ನಾಟಕ ತನ್ನ ಪ್ರಾದೇಶಿಕತೆಯನ್ನು ಕಳೆದುಕೊಳ್ಳುತ್ತಿದೆ. ಪ್ರಾದೇಶಿಕ ಅಸಮತೋಲನ ದಿನದಿಂದ ದಿನಕ್ಕೆ ಹೆಚ್ಚುತ್ತಿದೆ. ಇಂತಹ ಸಂದರ್ಭದಲ್ಲಿ ಆಯ್ಕೆ ಮತ್ತು ನಿಲುವುಗಳ ಮೇಲೆ ಕನ್ನಡ- ಕನ್ನಡಿಗ ಮತ್ತು ಕರ್ನಾಟಕ ಅವಲಂಬಿತವಾಗಿದ್ದು, ಇಂತಹ ಚರ್ಚೆಗಳನ್ನು ಹುಟ್ಟುಹಾಕುವ ಮೂಲಕ   ಹಿರಿಯರು ಕಲ್ಪಿಸಿದ ಕರ್ನಾಟಕವನ್ನು ಕಟ್ಟಿ ಬೆಳಸಬೇಕಿದೆ ಎಂದು ತಿಳಿಸಿದರು.

ಕನ್ನಡ ಮತ್ತು ಇಂಗ್ಲಿಷ್ ಭಾಷೆಯ ನಡುವೆ ಸಂಘರ್ಷ ನಡೆದಿದ್ದು, ಕನ್ನಡ ಸಂಕಷ್ಟ ಎದುರಿಸುತ್ತಿದೆ.  ಆದರೂ ಕನ್ನಡವು ತನ್ನತನವನ್ನು ಕಳೆದುಕೊಳ್ಳದೆ, ಅಸ್ತಿತ್ವ ಉಳಿಸಿಕೊಂಡಿದೆ. ಇದನ್ನು ಎಲ್ಲರೂ ಉಳಿಸಿ ಬೆಳಸಬೇಕು ಎಂದು ಅವರು ಸಲಹೆ ನೀಡಿದರು.

ರಂಗಭೂಮಿ ಕಲಾವಿದೆ ಸುಭದ್ರಮ್ಮ ಮನ್ಸೂರ್, ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕ ಚೋರನೂರು ಕೋಟ್ರಪ್ಪ, ಕನ್ನಡ ಸಾಹಿತ್ಯ ಪರಿಷತ್‌ನ ಜಿಲ್ಲಾ ಘಟಕದ ಅಧ್ಯಕ್ಷ ನಿಷ್ಠಿ ರುದ್ರಪ್ಪ ಉಪಸ್ಥಿತರಿದ್ದರು. ಕನ್ನಡ ಪರ ಸಂಘಟನೆಗಳ ಮುಖಂಡರನ್ನು ಇದೇ ಸಂದರ್ಭದಲ್ಲಿ ಸತ್ಕರಿಸಿ ಗೌರವಿಸಲಾಯಿತು. ಎ.ಎಂ. ಜಯಶ್ರೀ ಸ್ವಾಗತಿಸಿದರು. ಸಿದ್ದೇಶ್ವರಿ ವಂದಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.