ADVERTISEMENT

ಕಬ್ಬು ಬಾಕಿ ಪಾವತಿ ನಂತರವೇ ಮಾತುಕತೆ: ಡಿಸಿ ಸ್ಪಷ್ಟನೆ

​ಪ್ರಜಾವಾಣಿ ವಾರ್ತೆ
Published 10 ಅಕ್ಟೋಬರ್ 2011, 5:05 IST
Last Updated 10 ಅಕ್ಟೋಬರ್ 2011, 5:05 IST

ಹೊಸಪೇಟೆ: ರೈತರು ಹಾಗೂ ಕಾರ್ಖಾನೆಯ ನಡುವೆ ನಡೆದ ಒಪ್ಪಂದದಂತೆ ಬಾಕಿ ಪಾವತಿಯಾಗದೆ ಯಾವುದೆ ಮಾತುಕತೆಯ ಪ್ರಶ್ನೆಯೇ ಇಲ್ಲ ಎಂದು ಜಿಲ್ಲಾಧಿಕಾರಿ ಆದಿತ್ಯ ಆಮ್ಲನ್ ಬಿಸ್ವಾಸ್ ಸ್ಪಷ್ಟವಾಗಿ ತಿಳಿಸಿದರು.

ಭಾನುವಾರ ಸಂಜೆ ಹೊಸಪೇಟೆಯ ನಗರಾಭಿವೃದ್ಧಿ ಪ್ರಾಧಿಕಾರದ ಕಚೇರಿಯಲ್ಲಿ 2011ನೇ ಸಾಲಿನ ಕಬ್ಬು ಅರಿಯುವ ಹಂಗಾಮಿನ ಪೂರ್ವ ಭಾವಿ ಅಂತಿಮ ಸುತ್ತಿನ ಮಾತುಕತೆಯಲ್ಲಿ ರೈತರ, ಶಾಸಕ ಆನಂದಸಿಂಗ್ ಹಾಗೂ ಕಾರ್ಖಾನೆಯ ಮಾಹಿತಿ ಪಡೆದ ನಂತರ ಅವರು ಮಾತನಾಡಿದರು.

ಯಾವುದೇ ಒಂದು ನಿರ್ಣಯವನ್ನು ಕೈಗೊಂಡ ನಂತರ ಅದರಂತೆ ನಡೆದು ಕೊಳ್ಳಬೇಕಾಗಿರುವುದು ಪ್ರತಿಯೊಬ್ಬರ ಕರ್ತವ್ಯವಾಗಿದ್ದು ಯಾವುದೇ ಹಂತದಲ್ಲಿ ತನ್ನ ನಿರ್ಣಯದಂತೆ ವರ್ತಿಸಲು ವಿಫಲವಾಗಿರುವ ಕಾರ್ಖಾನೆ ಅನಗತ್ಯ ಕುಂಟು ನೆಪಗಳನ್ನು ತೆಗೆದರೆ ಕಾನೂನಿ ನಂತೆ ನಿರ್ಧಾಕ್ಷಿಣ್ಯ ಕ್ರಮ ಕೈಗೊಳ್ಳ ಬೇಕಾಗುತ್ತದೆ ಎಂದರು.

ಒಂದು ವಾರದಲ್ಲಿ ನೀಡಬೇಕಾಗಿ ರುವ ಬಾಕಿ 86.40 ಲಕ್ಷ ಪಾವತಿಸಿ ಮುಂದಿನ ಮಾತುಕತೆಗೆ ಬರಬೇಕು, ಮುಂದಿನ ಎಲ್ಲ ನಿರ್ಣಯಗಳು ಆಗಿ ಅದರಂತೆ ನಡೆದುಕೊಳ್ಳಬೇಕು, ರೈತರಿಗೆ ನ್ಯಾಯಯುತ ಬೆಲೆ ನೀಡಬೇಕು ರೈತರೊಂದಿಗೆ ಸಹಕಾರ ಮನೋ ಭಾವನೆಯಿಂದ ವರ್ತಿಸಬೇಕು ಒಪ್ಪಂದ ಸಭೆಗೆ ಅಂತಿಮ ನಿರ್ಣಯ ಕೈಗೊಳ್ಳು ವವರು ಹಾಜರಾಗಬೇಕು. ಇಲ್ಲವಾದರೆ ಸಹನೆ ಸಾಧ್ಯವಿಲ್ಲ ಎಂದು ತಾಕೀತು ಮಾಡಿದರು.

ಕಳೆದ ಐದು ವರ್ಷಗಳಿಂದ ಬರ ಬೇಕಾದ ಬಾಕಿ ಬಡ್ಡಿ ಸಮೇತ ನೀಡುವಂತೆ ರೈತರು ಆಗ್ರಹಿಸಿದರು.
ಶಾಸಕ ಆನಂದ ಸಿಂಗ್, ರೈತ ಸಂಘದ ಅಧ್ಯಕ್ಷ ಬಡಕಜ್ಜ, ಬಿ.ಕೆ. ನಾಗರಾಜ ರಾವ್, ಅರಳಿ ಕೊಟ್ರಪ್ಪ, ಬಂಡೆ ರಂಗಪ್ಪ, ಜಿ.ಕೆ.ಹನುಮಂತಪ್ಪ, ಟಿ.ವೆಂಕಟೇಶ, ಜಹಿರುದ್ದೀನ್, ಕಾರ್ತಿಕ್, ನಾರಾಯಣಸಿಂಗ್, ಅಲ್ಲಾಬಕ್ಷಿ, ಎ.ನಾಗರಾಜ್, ಸಿದ್ದೇಶ, ಕುರಟ್ಟಿ, ವೆಂಕಪ್ಪ ಹಾಜರಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.