ADVERTISEMENT

ಕಳ್ಳ ಅಂಬೋದು, ಬಡಿಯೋದು!

ಮಕ್ಕಳ ಕಳ್ಳರು ಬಂದಿದ್ದಾರೆ ಎಂಬ ಶಂಕೆ: ಅಪರಿಚಿತರ ಮೇಲೆ ಹಲ್ಲೆ

ಕೆ.ನರಸಿಂಹ ಮೂರ್ತಿ
Published 17 ಮೇ 2018, 8:22 IST
Last Updated 17 ಮೇ 2018, 8:22 IST

ಬಳ್ಳಾರಿ: ‘ಕಳ್ಳ ಅಂಬೋದು, ಬಡಿಯೋದು, ಯಾರು ಎತ್ತ ಅಂತ ವಿಚಾರಿಸಂಗಿಲ್ಲ. ಹಿಂಗಾಗೆ ಯಾರೂ ಬರ್ದೇ ಇರೋ ಹಂಗಾತು....’ ನಗರದ ಭತ್ರಿ ಹುಲಿಗೆಮ್ಮ ಗುಡಿಯ ಮುಂದೆ ಬುಧವಾರ ಸಂಜೆ ಕುಳಿತಿದ್ದ ಜಾನಕಮ್ಮ ಅಸಮಾಧಾನದಿಂದ ಹೀಗೆ ಹೇಳಿದರು.

ಮಧ್ಯಾಹ್ನ ಮೂರೂವರೆ ವೇಳೆ ಗುಡಿಯ ಆವರಣದಲ್ಲೇ ಯುವಕನೊಬ್ಬನನ್ನು ಮಕ್ಕಳ ಕಳ್ಳನೆಂದು ಶಂಕಿಸಿ ನೂರಾರು ಮಂದಿ ಮನಸೋ ಇಚ್ಛೆ ಥಳಿಸಿದ್ದರು.

ಅದನ್ನು ಸ್ಮರಿಸಿದ ಜಾನಕಮ್ಮ, ಅಲ್ಲಿಂದ ಒಂದು ಕಿ.ಮೀ ದೂರವಿರುವ ದುರ್ಗಮ್ಮ ಗುಡಿಯಿಂದ ಆತನನ್ನು ಅಟ್ಟಿಸಿಕೊಂಡು ಬಂದಿದ್ದರು ಎಂದು ಹೇಳಿದರು. ಆದರೆ, ‘ಯುವಕ ದೇವಿನಗರದ ಓಣಿಗೆ ಊಟ ಕೇಳುವ ನೆಪದಲ್ಲಿ ನುಗ್ಗಿ ಮಗುವೊಂದಕ್ಕೆ ಚಾಕು ತೋರಿಸುತ್ತಿದ್ದಾಗ ಜನರಿಗೆ ಸಿಕ್ಕಿಬಿದ್ದ’ ಎಂಬ ಸುಳ್ಳು ವದಂತಿ ಹರಡಿತ್ತು!

ADVERTISEMENT

ವದಂತಿ ಪ್ರಭಾವ:
ನವದೆಹಲಿಯ ಬಟ್ಟೆ ವ್ಯಾಪಾರಿಯೊಬ್ಬರು ನಗರದ ಲಿಟ್ಲ್‌ ಏಂಜಲ್‌ ಶಾಲೆಯ ಬಳಿ ಹದಿನೈದು ದಿನದ ಹಿಂದೆ ಬಾಡಿಗೆಗೆ ಮನೆ ಮಾಡಿದ್ದರು. ಮನೆಯಲ್ಲಿ ಅವರ ಮಗುವೂ ಇತ್ತು. ಆದರೆ, ‘ಅಪಹರಣಕಾರರು ಮನೆ ಮಾಡಿ ಮಕ್ಕಳನ್ನು ಕೂಡಿ ಹಾಕಿದ್ದಾರೆ’ ಎಂಬ ವದಂತಿ ಬುಧವಾರ ಹಬ್ಬಿ ಅವರ ಮನೆ ಮೇಲೆ ಸ್ಥಳೀಯರು ದಾಳಿ ಮಾಡಿ ಪೊಲೀಸರಿಗೆ ಒಪ್ಪಿಸಿದರು. ವಿಚಾರಣೆ ಬಳಿಕ ಪೊಲೀಸರು ಅವರನ್ನು ಬಿಟ್ಟು ಕಳಿಸಿದರು.

ಮೇ 14ರಂದು ಕೂಡ ವದಂತಿಯಿಂದ ಗಾಬರಿಗೊಂಡಿದ್ದ ಬಳ್ಳಾರಿ ತಾಲ್ಲೂಕಿನ ಸಂಗನಕಲ್ಲು ಮತ್ತು ಸಿರುಗುಪ್ಪ ತಾಲ್ಲೂಕಿನ ತೆಕ್ಕಲಕೋಟೆಯ ಗ್ರಾಮಸ್ಥರು ಅನುಮಾನಾಸ್ಪದ ಎಂದು ಎಂಟು ಮಂದಿಯ ಮೇಳೆ ಹಲ್ಲೆ ನಡೆಸಿ ಪೊಲೀಸರಿಗೆ ನೀಡಿದ್ದರು.

‘ಅವರೆಲ್ಲ ಸಿರಿಗೇರಿ ಗ್ರಾಮದ ಸುತ್ತ ಮುತ್ತ ಭಿಕ್ಷಾಟನೆ ಮಾಡಿಕೊಂಡು ಟೆಂಟ್‌ಗಳಲ್ಲಿ ವಾಸ ಮಾಡುತ್ತಿದ್ದವರು’ ಎಂದು ಪೊಲೀಸರು ಆಗ ತಿಳಿಸಿದ್ದರು. ಆದರೆ ಈಗ ಅವರ ಮೇಲೆ ಸಿಆರ್‌ಪಿಸಿ 109 (ಅನುಮಾನಾಸ್ಪದ ಓಡಾಟ, ಅಪರಾಧ ಎಸಗುವ ಸಾಧ್ಯತೆ) ಪ್ರಕರಣ ದಾಖಲಿಸಿ ಜೈಲಿಗೆ ಕಳಿಸಲಾಗಿದೆ.

ಸಂಗನಕಲ್ಲು ಗ್ರಾಮದಲ್ಲಿ ಸಿಕ್ಕವರು ಆಂಧ್ರಪ್ರದೇಶದ ರಾಜ್ಯದ ಕರ್ನೂಲ್ ಜಿಲ್ಲೆಯ ಶ್ರೀನಿವಾಸನಗರದ ಹುಸೀನ್‌ಬೀ ಮತ್ತು ಮಾಬುಜಾನ್. ಜೂನ್‌ ತಿಂಗಳಿನಲ್ಲಿ ರಂಜಾನ್‌ ಹಬ್ಬವಿರುವುದರಿಂದ ಭಿಕ್ಷೆ ಬೇಡಲು ಬಂದಿದ್ದವರು. ಅವರ ವಿರುದ್ಧ ಗ್ರಾಮೀಣ ಠಾಣೆಯಲ್ಲಿ ಪ್ರಕರಣ ದಾಖಲಾಗಿಲ್ಲ. ಸಂತ್ರಸ್ತರೂ ದೂರು ನೀಡಿಲ್ಲ.

ಇಂದು ಕೆಲವೆಡೆ: ನಗರದ ಎಚ್‌.ಆರ್‌.ಗವಿಯಪ್ಪ ವೃತ್ತದಲ್ಲಿ ಯುವಕನೊಬ್ಬನ ಮೇಲೆ, ಎಪಿಎಂಸಿ ಮಾರುಕಟ್ಟೆಯಲ್ಲಿ ಭಿಕ್ಷೆ ಬೇಡುತ್ತಿದ್ದ ಮಹಿಳೆಯ ಮೇಲೂ ಕೆಲವರು ಹಲ್ಲೆ ನಡೆಸಿದರು. ಆದರೆ ಯಾವುದೇ ಠಾಣೆಯಲ್ಲಿ ಪ್ರಕರಣ ದಾಖಲಾಗಿಲ್ಲ.‌‌

ಅಲೆಮಾರಿ, ಭಿಕ್ಷುಕರಿಗೆ ಸಂಕಷ್ಟ

ಬಳ್ಳಾರಿ: ‘ಮಕ್ಕಳ ಕಳ್ಳರು ಬಂದಿದ್ದಾರೆ’ ಎಂಬ ವದಂತಿಯಿಂದ ಜನರಲ್ಲಿ ಭೀತಿ ಮೂಡಿದ್ದರೂ, ಅದರಿಂದ ನಿಜವಾಗಿ ತೊಂದರೆಗೆ ಒಳಗಾಗಿರುವವರು ಅಲೆಮಾರಿಗಳು ಮತ್ತು ಭಿಕ್ಷುಕರು. ಅವರ ವೇಷಭೂಷಣ, ನಡೆ–ನುಡಿಗಳು ಬಹುತೇಕರಿಗೆ ಅನುಮಾನಾಸ್ಪದವಾಗಿಯೇ ಕಾಣುವುದರಿಂದ, ವದಂತಿಯೂ ಅದಕ್ಕೆ ಪೂರಕವಾಗಿರುವುದರಿಂದ ಜನರ ಥಳಿತಕ್ಕೆ ಗುರಿಯಾಗುತ್ತಿದ್ದಾರೆ.

ಹಲ್ಲೆ: ಹೊಣೆ ಹೊರೋರು ಯಾರು?

ಬಳ್ಳಾರಿ: ದೇವಿನಗರದ ಬಳಿ ನೂರಾರು ಮಂದಿಯಿಂದ ಥಳಿತಕ್ಕೆ ಒಳಗಾದ ಯುವಕನನ್ನು ವಿಚಾರಣೆ ಬಳಿಕ ಕೌಲ್‌ಬಜಾರ್‌ ಠಾಣೆ ಪೊಲೀಸರು ಬಿಟ್ಟು ಕಳಿಸಿದ್ದಾರೆ. ‘ಯಾರೂ ದೂರು ನೀಡಿಲ್ಲ. ಹಲ್ಲೆಗೊಳಗಾದ ಯುವಕನೂ ದೂರು ನೀಡಿಲ್ಲ’ ಎಂದು ಪೊಲೀಸರು ತಿಳಿಸಿದರು. ಹಲ್ಲೆಯ ಹೊಣೆ ಹೊರುವವರು ಯಾರು ಎಂಬ ಪ್ರಶ್ನೆಗೆ ಉತ್ತರವಿಲ್ಲ

**
ಮಕ್ಕಳ ಅಪಹರಣಕಾರರು ಜಿಲ್ಲೆಯಲ್ಲಿ ಎಲ್ಲಿಯೂ ಕಂಡು ಬಂದಿಲ್ಲ. ಈ ರೀತಿಯ ವದಂತಿಯನ್ನು ಜನ ನಂಬಬಾರದು. ನೆರೆಯ ಆಂಧ್ರದಲ್ಲೂ ಇಂಥ ಘಟನೆ ನಡೆದಿಲ್ಲ
ಅರುಣ್‌ ರಂಗರಾಜನ್‌, ಎಸ್ಪಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.