ಕೂಡ್ಲಿಗಿ: ತಾಲ್ಲೂಕಿನಾದ್ಯಂತ ಬುಧವಾರ ರಾತ್ರಿ ಸುರಿದ ಗಾಳಿ ಹಾಗೂ ಆಲಿಕಲ್ಲು ಮಳೆಗೆ 3 ಪ್ರತ್ಯೇಕ ಹಿಂಡುಗಳಲ್ಲಿದ್ದ 80 ಕುರಿಗಳು ಸಾವಿಗೀಡಾದ ಘಟನೆ ರಾಮದುರ್ಗದ ಬಳಿ ಜರುಗಿದೆ.
ಕುರಿಗಳು ಪ್ರತ್ಯೇಕ ಹಿಂಡುಗಳಲ್ಲಿದ್ದು, ಬುಧವಾರ ರಾತ್ರಿ ಧಿಡೀರನೇ ಆಣಿಕಲ್ಲು ಮಳೆ ಸುರಿದುದೇ ಕುರಿಗಳ ಸಾವಿಗೆ ಕಾರಣವಾಗಿದೆ ಎಂದು ಪಶುವೈದ್ಯ ಇಲಾಖೆಯ ಸಹಾಯಕ ನಿರ್ದೇಶಕ ಡಾ.ಶ್ರೀನಿವಾಸ್ ತಿಳಿಸಿದ್ದಾರೆ.
ಕುದುರೆಡವು ಗೊಲ್ಲರಹಟ್ಟಿಯ ಕರಿನಾಗಪ್ಪ, ದೊಡ್ಡನಾಗಪ್ಪ, ಅಜ್ಜಪ್ಪ, ಓಬಪ್ಪ, ಕರಿಓಬಪ್ಪ, ಕರಿಯಪ್ಪ, ಪೂಜಾರ ನಾಗಪ್ಪ, ಬಡನಾಗಪ್ಪ, ಮುದ್ದಪ್ಪ ಇವರಿಗೆ ಸೇರಿದ 900 ಕುರಿಗಳಲ್ಲಿ 45 ಮೃತಪಟ್ಟಿವೆ.
ರಾಮದುರ್ಗ ಗೊಲ್ಲರಹಟ್ಟಿಯ ಬಸಪ್ಪ, ಗೋವಪ್ಪ, ಪೂಜಾರಿ ಚಿಕ್ಕಪ್ಪ, ಪೂಜಾರಿ ಪಾಲಪ್ಪ ಅವರಿಗೆ ಸೇರಿದ 15 ಕುರಿಗಳು, ರಾಮದುರ್ಗದ ಪೂಜಾರ ಸೂರಪ್ಪ, ದೊಡ್ಡಚಿತ್ತಪ್ಪ ಇವರ 18 ಕುರಿಗಳು ಸಾವಿಗೀಡಾಗಿವೆ ಎಂದು ತಹಸೀಲ್ದಾರ್ ವೀರಮಲ್ಲಪ್ಪ ಪೂಜಾರ್ ತಿಳಿಸಿದ್ದಾರೆ.
ತಾಲ್ಲೂಕಿನಾದ್ಯಂತ ಬುಧವಾರ ರಾತ್ರಿ ಸರಾಸರಿ 29.5 ಮಿ.ಮೀ.ನಷ್ಟು ಮಳೆಯಾಗಿದೆ. ಕೊಟ್ಟೂರು ಭಾಗದಲ್ಲಿ 28 ಮಿ.ಮೀ, ಕೂಡ್ಲಿಗಿ ಭಾಗದಲ್ಲಿ 23 ಮಿ.ಮೀ, ಹೊಸಹಳ್ಳಿ ಭಾಗದಲ್ಲಿ 10 ಮಿ.ಮೀ, ಗುಡೇಕೋಟೆ ಭಾಗದಲ್ಲಿ 13 ಮಿ.ಮೀನಷ್ಟು ಮಳೆಯಾಗಿದೆ ಎಂದು ತಾಲ್ಲೂಕು ಆಡಳಿತ ತಿಳಿಸಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.