ADVERTISEMENT

ಕೌಟುಂಬಿಕ ಕಾನೂನು ರಚನೆಗೆ ಆಗ್ರಹ

​ಪ್ರಜಾವಾಣಿ ವಾರ್ತೆ
Published 14 ಜೂನ್ 2013, 5:57 IST
Last Updated 14 ಜೂನ್ 2013, 5:57 IST

ಬಳ್ಳಾರಿ: ಮುಸ್ಲಿಂ ಕೌಟುಂಬಿಕ ಕಾನೂನನ್ನು ಜಾರಿಗೊಳಿಸುವಂತೆ ಆಗ್ರಹಿಸಿ ಭಾರತೀಯ ಮುಸ್ಲಿಂ ಆಂದೋಲನ (ಬಿಎಂಎ)ದ ಸದಸ್ಯರು ಹಾಗೂ ಬೆಂಬಲಿಗರು ನಗರದಲ್ಲಿ  ಜಿಲ್ಲಾಧಿಕಾರಿ ಕಚೇರಿಯಲ್ಲಿ ಮುಖ್ಯಮಂತ್ರಿಗಳಿಗೆ ಬರೆದ ಮನವಿ ಪತ್ರ ಸಲ್ಲಿಸಿದರು.

ಸ್ಕೈಪ್, ಫೇಸ್‌ಬುಕ್, ಎಸ್ಸೆಮ್ಮೆಸ್, ಇ- ಮೇಲ್, ದೂರವಾಣಿ ಮತ್ತು ಪತ್ರಗಳನ್ನು ಮುಸ್ಲಿಂ ಪುರುಷರು ತಮ್ಮ ಪತ್ನಿಯಿಂದ ವಿಚ್ಛೇದನ ಪಡೆಯಲು ಬಳಸಿಕೊಳ್ಳಲು ಪ್ರಾರಂಭಿಸಿದ್ದಾರೆ. ಈ ಕ್ರಮ ಕಾನೂನು ಬಾಹಿರ ಎಂದು ಸಾರಬೇಕು ಎಂಬ ಮುಸ್ಲಿಂ ಮಹಿಳೆಯರ ನಿರಂತರ ಬೇಡಿಕೆಯ ಬಗ್ಗೆ ಸರ್ಕಾರ ಗಮನ ಹರಿಸಿಲ್ಲ. ಇಂತಹ ಮೌಖಿಕ ವಿಚ್ಛೇದನದ ಸಮಸ್ಯೆ ಅಸ್ತಿತ್ವದಲ್ಲಿ ಇದೆ ಎಂದು ಒಪ್ಪಿಕೊಳ್ಳಲು ನಿರಾಕರಿಸುತ್ತಿರುವ ಸರ್ಕಾರ ಕೂಡಲೇ ಈ ಕುರಿತು ಪರಿಶೀಲನೆ ನಡೆಸಿ ಸೂಕ್ತ ಕ್ರಮಕೈಗೊಳ್ಳಬೇಕು ಎಂದು ಅವರು ಕೋರಿದರು.

ಈ ನಿಟ್ಟಿನಲ್ಲಿ ಭಾರತೀಯ ಮುಸ್ಲಿಂ ಮಹಿಳಾ ಆಂದೋಲನವು ಮುಸ್ಲಿಂ ಕೌಟುಂಬಿಕ ಕಾನೂನನ್ನು ಜಾರಿಗೊಳಿಸುವಂತೆ ಹಾಗೂ ಅನ್ಯಾಯದಿಂದ ಕೂಡಿದ,  ಇಸ್ಲಾಂ ಧರ್ಮಕ್ಕೆ ವಿರುದ್ಧವಾದ ಮೌಖಿಕ ವಿಚ್ಛೇದನದಂತಹ ಕ್ರಮವನ್ನು ಮುಸ್ಲಿಂ ಪುರುಷರು ಪಾಲಿಸದಂತೆ ಹೋರಾಡುತ್ತಿದೆ. ಇದರ ಭಾಗವಾಗಿಯೇ ಇದೀಗ ಮನವಿ ಸಲ್ಲಿಸಲಾಗುತ್ತಿದೆ ಎಂದು ಭಾರತೀಯ ಮುಸ್ಲಿಂ ಆಂದೋಲನದ ಕಾರ್ಯಕರ್ತೆ ನಸ್ರೀನ್ ತಿಳಿಸಿದರು.

ಬಿಎಂಎ ವಿಚ್ಛೇದನ, ಬಹು ಪತ್ನಿತ್ವ, ಮೆಹರ್, ಕುಟುಂಬ ನಿರ್ವಹಣೆ, ಮಕ್ಕಳ ಪಾಲನೆ ಇತ್ಯಾದಿ ನಿರ್ಧಾರಗಳಲ್ಲಿನ ಅನಿಶ್ಚಿತತೆಯನ್ನು ಕೊನೆಗಾಣಿಸುವ ಸಲುವಾಗಿ ಕುರಾನ್‌ನಲ್ಲಿ ಉಲ್ಲೇಖಿಸಿದಂತಹ ಮುಸ್ಲಿಂ ಕೌಟುಂಬಿಕ ಕಾಯ್ದೆಗಾಗಿ ಕರಡನ್ನು ತಯಾರಿಸುವ ಪ್ರಕ್ರಿಯೆಯಲ್ಲಿ ಸಂಘಟನೆ ತೊಡಗಿಸಿಕೊಂಡಿದೆ.

ಭಾರತದಲ್ಲಿನ ಹಿಂದೂ, ಕ್ರೈಸ್ತ ಮತ್ತು ಪಾರ್ಸಿಗಳಿಗೆ ಲೋಕಸಭೆುಲ್ಲಿ ಅನುಮೋದಿಸೊದ ವೈಯಕ್ತಿಕ ಕಾನೂನುಗಳಿವೆ. ಆದರೆ, ಮುಸ್ಲಿಮರಿಗೆ ಕೇವಲ ಮುಸ್ಲಿಂ ಮದುವೆ ರದ್ದತಿ ಕಾಯ್ದೆ- 1939  ಹಾಗೂ ಮುಸ್ಲಿಂ ಮಹಿಳೆಯರ ರಕ್ಷಣಾ ಕಾಯ್ದೆ- 1986 ಮಾತ್ರ ಇದ್ದು, 1937ರ ಶರಿಯತ್ ಕಾಯ್ದೆಯಲ್ಲಿ ಯಾವುದೇ ಆದೇಶಾರ್ಥಕವಾದ ಕಾನೂನಿಲ್ಲ.

ನ್ಯಾಯ ತೀರ್ಮಾನಗಳು ಮುಲ್ಲಾ, ತ್ಯಾಬ್ಜಿಯವರ ವಿವರಣೆಗಳನ್ನು ಅವಲಂಬಿಸಿದ್ದು, ಔಪಚಾರಿಕವಾದ ಕಾನೂನು ವ್ಯವಸ್ಥೆಯ ಹೊರಗಡೆ ಖಾಜಿ, ಉಲೇಮಾಗಳು ನ್ಯಾಯ ತೀರ್ಮಾನಗಳನ್ನು ನಡೆಸಲು, ಫತ್ವಾ ಹೊರಡಿಸಲು ಮುಕ್ತರಾಗಿರುತ್ತಾರೆ.

ಇವು ಕುರಾನ್ ಅನ್ನೂ, ಸಾಂವಿಧಾನಿಕ ಮೌಲ್ಯಗಳನ್ನೂ ಸಂಪೂರ್ಣವಾಗಿ ಉಲ್ಲಂಘಿಸುತ್ತವೆ. ಒಂದು ಸಮುದಾಯಕ್ಕೆ ತನ್ನದೇ ಆದ ಸೂಕ್ತ ಕಾನೂನು ವ್ಯವಸ್ಥೆ ಇದ್ದರೆ, ತಮಗೆ ಬೇಕಾದ ಹಾಗೆ ನಡೆಯುವುದರ ಬದಲು ಆ ಕಾನೂನು ವ್ಯವಸ್ಥೆಗೆ ತಕ್ಕಂತೆ ನಡೆಯಬಹುದಾಗಿದ್ದು, ಸರ್ಕಾರ ಕೂಡಲೇ ಈ ಕುರಿತು ಚಿಂತನೆ ನಡಸಬೇಕಿದೆ ಎಂದು ಮನವಿಯಲ್ಲಿ ತಿಳಿಸಲಾಗಿದೆ.

ಆಂದೋನಲದ ಸದಸ್ಯರು ಹಾಗೂ ಬೆಂಬಲಿಗರಾದ ಖಾತೂನ್ ಶೇಕ್, ಯಾಸ್ಮಿನ್, ಬಷೀರಾ ಬಾನು, ಫಾತೀಮಾ, ರೇಷ್ಮಾ, ಶಬಾನಾ, ಶೈನಾಜ್, ತಬಸ್ಸುಮ್, ಸುಮಯ್ಯ, ಮೇಘನಾ ಮತ್ತಿತರರು ಈ ಸಂದರ್ಭದಲ್ಲಿ ಉಪಸ್ಥಿತರಿದ್ದು, ಮನವಿ ಸಲ್ಲಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.