ಬಳ್ಳಾರಿ: ಸ್ಥಳೀಯ ಸಿರುಗುಪ್ಪ ರಸ್ತೆಯಲ್ಲಿನ ಬ್ರಿಲಿಯಂಟ್ ಪಬ್ಲಿಕ್ ಶಾಲೆಯಲ್ಲಿ ತಾಲ್ಲೂಕು ಗೃಹರಕ್ಷಕ ದಳದ ವತಿಯಿಂದ ವಿಶ್ವಪರಿಸರ ದಿನ ಆಚರಿಸಲಾಯಿತು.
ಅಧ್ಯಕ್ಷತೆ ವಹಿಸಿದ್ದ ದಳದ ಸಮಾದೇಷ್ಟ ಎಂ.ಎ. ಷಕೀಬ್ ಅವರು ಸಸಿ ನೆಡುವ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದರು. ಗಿಡಮರಗಳನ್ನು ಬೆಳೆಸಿ ಪರಿಸರ ಉಳಿಸಿ ಎಂದ ಅವರು, ಪರಿಸರ ರಕ್ಷಣೆಯಿಂದ ವಿಶ್ವದ ರಕ್ಷಣೆ ಸಾಧ್ಯ ಎಂದರು.
2012-13ನೇ ಸಾಲಿನಲ್ಲಿ ನಡೆದ ಮಕ್ಕಳ ವನ ಕಾರ್ಯಕ್ರಮದಲ್ಲಿ ಉತ್ತಮ ಕಾರ್ಯ ಸಾಧನೆ ಮಾಡಿದ ಹೂವಿನ ಹಡಗಲಿ ತಾಲ್ಲೂಕಿನ ಗೃಹರಕ್ಷಕ ದಳದ ಘಟಕಕ್ಕೆ ರೂ 3 ಸಾವಿರ ಬಹುಮಾನ ಘೋಷಿಸಿದರು.
ಶಾಲೆಯ ಆವರಣದಲ್ಲಿ ನೆಡಲಾದ ಸಸಿಗಳನ್ನು ಕಾಲಕಾಲಕ್ಕೆ ನೀರು ಹಾಕಿ ಉತ್ತಮ ರೀತಿಯಲ್ಲಿ ಪೋಷಿಸಬೇಕು ಎಂದು ಶಾಲೆಯ ಮುಖ್ಯಾಧ್ಯಾಪಕ ಬಸರೆಡ್ಡಿ ಸಲಹೆ ನೀಡಿದರು.
ಇದಕ್ಕೂ ಮುನ್ನ ವಿಶ್ವ ಪರಿಸರ ದಿನಾಚರಣೆ ಅಂಗವಾಗಿ ಏರ್ಪಡಿಸಿದ್ದ ಚಿತ್ರಕಲಾ ಸ್ಪರ್ಧೆಯ ವಿಜೇತರಿಗೆ ಬಹುಮಾನ ವಿತರಿಸಲಾಯಿತು.
ಜೆ.ಸುರೇಶ್ ಪ್ರಾರ್ಥಿಸಿದರು. ಸಿ.ಎಂ. ಗಂಗಾಧರಯ್ಯ ಸ್ವಾಗತಿಸಿ ಕಾರ್ಯಕ್ರಮ ನಿರೂಪಿಸಿದರು. ಸೆಕೆಂಡ್ ಇನ್ ಕಮಾಂಡ್ ಎನ್.ಎಸ್. ಲಕ್ಷ್ಮಿನರಸಿಂಹ ವರದಿ ವಾಚಿಸಿದರು.
ರಾಷ್ಟ್ರಪತಿ ಪದಕ ಪುರಸ್ಕೃತ ಡಾ. ಸುರೇಶ ಧಾರವಾಡಕರ್, ಜಿ. ಬಸವರಾಜ್, ಬಿ.ಕೆ. ಬಸವಲಿಂಗ, ಶಿಕ್ಷಕ ಹಾಗೂ ಸಿಬ್ಬಂದಿ, ವಿದ್ಯಾರ್ಥಿಗಳು, ಗೃಹರಕ್ಷಕರು ಉಪಸ್ಥಿತರಿದ್ದರು.
ಸಚಿವರ ಜಿಲ್ಲಾ ಪ್ರವಾಸ
ಬಳ್ಳಾರಿ: ಕಾರ್ಮಿಕ ಸಚಿವರು ಹಾಗೂ ಜಿಲ್ಲಾ ಉಸ್ತುವಾರಿ ಸಚಿವರಾದ ಪಿ.ಟಿ. ಪರಮೇಶ್ವರ ನಾಯ್ಕ ಅವರು ಇದೇ 14ರಂದು ಹಡಗಲಿಯಲ್ಲಿ ಪ್ರವಾಸ ಕೈಗೊಂಡು ವಾಸ್ತವ್ಯ ಮಾಡಲಿದ್ದಾರೆ.
ಜೂ. 15ರಂದು ಬೆಳಿಗ್ಗೆ 11 ಗಂಟೆಗೆ ಹಡಗಲಿಯಿಂದ ದಾವಣಗೆರೆಗೆ ಹೊರಡಲಿದ್ದು, 16ರಂದು ಬೆಳಿಗ್ಗೆ 10-30ಕ್ಕೆ ಹಡಗಲಿಗೆ ಆಗಮಿಸಿ ಸಾರ್ವಜನಿಕರ ಕುಂದುಕೊರತೆ ಸ್ವೀಕರಿಸಲಿದ್ದಾರೆ. ನಂತರ ಮಧ್ಯಾಹ್ನ 12-30ಕ್ಕೆ ಹಡಗಲಿಯಿಂದ ಹೊರಟು ಮಧ್ಯಾಹ್ನ 3 ಗಂಟೆಗೆ ಬಳ್ಳಾರಿಗೆ ಆಗಮಿಸಿ ಖಾಸಗಿ ಕಾರ್ಯಕ್ರಮದಲ್ಲಿ ಭಾಗವಹಿಸಲಿದ್ದಾರೆ. 17ರಂದು ಬೆಳಿಗ್ಗೆ 11 ಗಂಟೆಗೆ ಜಿಲ್ಲಾಧಿಕಾರಿಗಳ ಕಚೇರಿಯಲ್ಲಿ ಜಿಲ್ಲಾ ಮಟ್ಟದ ಅಧಿಕಾರಿಗಳ ಸಭೆ ನಡೆಸಿ ಮಧ್ಯಾಹ್ನ 3-30 ಗಂಟೆಗೆ ಬೆಂಗಳೂರಿಗೆ ನಿರ್ಗಮಿಸಲಿದ್ದಾರೆ ಎಂದು ಪ್ರಕಟಣೆ ತಿಳಿಸಿದೆ.
ವಿದ್ಯುತ್ ವ್ಯತ್ಯಯ ನಾಳೆ
ಕುರುಗೋಡು: ಪಟ್ಟಣದ 110ಕೆವಿ ವಿದ್ಯುತ್ ವಿತರಣಾ ಕೇಂದ್ರದಲ್ಲಿ ವರಿವರ್ತಕಗಳ ದುರಸ್ತಿ ಕಾರ್ಯ ಕೈಗೊಳ್ಳುವುದರಿಂದ ಜೂನ್ 15ರಂದು ಬೆಳಿಗ್ಗೆಯಿಂದ 24 ತಾಸು ವಿದ್ಯುತ್ ಸರಬರಾಜಿನಲ್ಲಿ ವ್ಯತ್ಯಯ ಉಂಟಾಗಲಿದೆ. ಕುರುಗೋಡು ಮತ್ತು ಎಮ್ಮಿಗನೂರು ವ್ಯಾಪ್ತಿಯ ಎ್ಲ್ಲಲ ಹಳ್ಳಿಗಳಲ್ಲಿ ಅಂದು ವಿದ್ಯುತ್ ಸರಬರಾಲು ಇರುವುದಿಲ್ಲ. ಗ್ರಾಹಕರು ಸಹಕರಿಸಬೇಕು ಎಂದು ಎಇಇ ವೈದ್ಯನಾಥ್ ತಿಳಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.