ADVERTISEMENT

ಗೆಣಿಕೆಹಾಳು: ಬಯಲು ಶೌಚಮುಕ್ತ ಪ್ರಶಸ್ತಿ

ವಾಗೀಶ ಕುರುಗೋಡು
Published 17 ಅಕ್ಟೋಬರ್ 2017, 5:41 IST
Last Updated 17 ಅಕ್ಟೋಬರ್ 2017, 5:41 IST

ಕುರಗೋಡು: ಇಲ್ಲಿಗೆ ಸಮೀಪದ ಗೆಣಿಕೆಹಾಳು ಗ್ರಾಮ ಪಂಚಾಯ್ತಿಗೆ ಬಯಲು ಶೌಚ ಮುಕ್ತ ಪ್ರಶಸ್ತಿ ಬಂದಿದೆ. ಕೇಂದ್ರ ಸರ್ಕಾರದ ಕನಸಿನ ಯೋಜನೆಯಾದ ಸ್ವಚ್ಛ ಭಾರತ ಮಿಷನ್ ಅಡಿಯಲ್ಲಿ ವೈಯಕ್ತಿಕ ಶೌಚಾಲಯ ನಿರ್ಮಿಸಿಕೊಡುವಲ್ಲಿ ಯಶಸ್ವಿಯಾದ ಕಾರಣ ಪ್ರಶಸ್ತಿ ಮತ್ತು ₹5 ಲಕ್ಷ ನಗದು ಬಹುಮಾನ ದೊರೆತಿದೆ.

ಈಚೆಗೆ ಬೆಂಗಳೂರಿನಲ್ಲಿ ನಡೆದ ಕಾರ್ಯಕ್ರಮದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆ ಸಚಿವ ಎಚ್.ಕೆ. ಪಾಟೀಲ್ ಅವರು ಗ್ರಾಮ ಪಂಚಾಯ್ತಿ ಅಧ್ಯಕ್ಷ ಎಸ್. ಶಾಂತನ ಗೌಡ ಮತ್ತು ಗ್ರಾಮ ಪಂಚಾಯ್ತಿ ಅಭಿವೃದ್ಧಿ ಅಧಿಕಾರಿ ಜಯಲಕ್ಷ್ಮಿ ಅವರನ್ನು ಸನ್ಮಾನಿಸಿ ಗೌರವಿಸಿದರು.

ಕೇಂದ್ರ ಸರ್ಕಾರದ ಸ್ವಚ್ಛ ಭಾರತ ಮಿಷನ್ ಯೋಜನೆ ಅಡಿಯಲ್ಲಿ ವೈಯಕ್ತಿಕ ಶೌಚಾಲಯ ನಿರ್ಮಿಸಿಕೊಳ್ಳಲು ಪರಿಶಿಷ್ಟ ಜಾತಿ ಮತ್ತು ಪಂಗಡಕ್ಕೆ ₹15 ಸಾವಿರ ಮತ್ತು ಸಾಮಾನ್ಯ ವರ್ಗದ ಫಲಾನುಭವಿಗಳಿಗೆ ₹12 ಸಾವಿರ ಸಹಾಯಧನ ದೊರೆಯುತ್ತದೆ.

ADVERTISEMENT

ಗ್ರಾಮ ಪಂಚಾಯಿತಿಯಲ್ಲಿ ವೈಯಕ್ತಿಕ ಶೌಚಾಲಯರಹಿತರ ಪಟ್ಟಿ ಯಲ್ಲಿ ಹೆಸರು ನೊಂದಾಯಿಸಿದ ಫಲಾನುಭವಿಗಳು ಸ್ವಂತ ವೆಚ್ಚದಲ್ಲಿ ಶೌಚಾಲಯ ನಿರ್ಮಿಸಿಕೊಂಡ ನಂತರ ಸ್ವಚ್ಛ ಭಾರತ ಮಿಷನ್ ಯೋಜನೆಯ ಮೂಲಕ ಗ್ರಾಮ ಪಂಚಾಯ್ತಿಯಿಂದ ಸಹಾಯಧನ ಪಡೆಯಬಹುದಾಗಿದೆ. ಬಹತೇಕ ಫಲಾುಭವಿಗಳು ಕೃಷಿ ಕಾರ್ಮಿಕರಾಗಿರುವುದರಿಂದ ಮೊದಲೇ ಹಣ ವೆಚ್ಚ ಮಾಡಿ ಶೌಚಾಲಯ ನಿರ್ಮಿಸಿಕೊಳ್ಳಲು ಸಾಧ್ಯವಾಗಿರುವುದಿಲ್ಲ.

ಜನರು ಎದುರಿಸುತ್ತಿರುವ ಸಮಸ್ಯೆ ಅರಿತ ಅಧ್ಯಕ್ಷ ಮತ್ತು ಅಭಿವೃದ್ಧಿ ಅಧಿಕಾರಿ, ಸ್ಥಳೀಯ ಕನಕಚಲ ಸಹಕಾರಿ ಬ್ಯಾಂಕಿನ ಆರ್ಥಿಕ ಸಹಾಯದಿಂದ ಫಲಾನುಭವಿಗಳಿಗೆ ಸಾಲ ಮಂಜೂರು ಮಾಡಿಸಿ ಶೌಚಾಲಯ ನಿರ್ಮಾಣಕ್ಕೆ ಸಹಕರಿಸಿದ್ದಾರೆ. ಪರಿಶಿಷ್ಟ ಪಂಗಡದ ಮತ್ತು ಸಾಮಾನ್ಯ ವರ್ಗದ ಫಲಾನುಭವಿಗಳು ಸೇರಿ ಒಟ್ಟು 511 ಫಲಾನುಭವಿಗಳಿಗೆ ವೈಯಕ್ತಿಕ ಶೌಚಾಲಯ ನಿರ್ಮಿಸುವ ಮೂಲಕ ಬಯಲು ಶೌಚಮುಕ್ತ ಗ್ರಾಮವನ್ನಾಗಿ ಮಾಡಲು ಶ್ರಮಿಸುತ್ತಿದ್ದಾರೆ.

2019ರಲ್ಲಿ ದೇಶವನ್ನು ಬಯಲು ಶೌಚಮುಕ್ತ ದೇಶವನ್ನಾಗಿಸುವ ಗುರಿ ಪ್ರಧಾನಿ ನರೇಂದ್ರ ಮೋದಿ ಹೊಂದಿದ್ದಾರೆ. ಆದರೆ 2017 ಅಕ್ಟೋಬರ್‌ನಲ್ಲಿಯೇ ಗೆಣಿಕೆಹಾಳು ಗ್ರಾಮ ಪಂಚಾಯ್ತಿ ವ್ಯಾಪ್ತಿಯ ಹಳ್ಳಿಗಳನ್ನು ಬಯಲು ಶೌಚಮುಕ್ತ ಗ್ರಾಮ ಮಾಡಿರುವ ಹೆಮ್ಮೆ ಇದೆ ಎನ್ನುತ್ತಾರೆ ಅಧ್ಯಕ್ಷ ಎಸ್. ಶಾಂತನ ಗೌಡ.

ಗೆಣಿಕೆಹಾಳು ಗ್ರಾಮ ಪಂಚಾಯ್ತಿ ವ್ಯಾಪ್ತಿಯ ಗೆಣಿಕಹಾಳು, ಹೊಸ ಗೆಣಿಕೆಹಾಳು, ಕ್ಯಾಂಪ್, ಕ್ಯಾದಿಗೆಹಾಳು ಗ್ರಾಮ ಸೇರಿ ಒಟ್ಟು 1442 ಜನರು ಸ್ವಚ್ಛ ಭಾರತ ಮಿಷನ್ ಯೋಜನೆಯಲ್ಲಿ ವೈಯಕ್ತಿಕ ಶೌಚಾಲಯ ನಿರ್ಮಿಸಿಕೊಳ್ಳಲು ಅರ್ಜಿ ಸಲ್ಲಿಸಿದ್ದಾರೆ. ಅವರಲ್ಲಿ 511 ವೈಯಕ್ತಿಕ ಶೌಚ ನಿರ್ಮಿಸಲಾಗಿದೆ. ಉಳಿದ ಫಲಾನುಭವಿಗಳಿಗೆ ಮುಂದಿನ ದಿನಗಳಲ್ಲಿ ಅವಕಾಶ ಕಲ್ಪಿಸಲಾಗುವುದು ಎಂದು ಗ್ರಾಮ ಪಂಚಾಯ್ತಿ ಅಭಿವೃದ್ಧಿ ಅಧಿಕಾರಿ ಜಯಲಕ್ಷ್ಮಿ ಹೇಳುತ್ತಾರೆ.

ಸರ್ಕಾರಿ ಯೋಜನೆಗಳು ಪರಿಣಾಮಕಾರಿ ಅನುಷ್ಟಾನಕ್ಕೆ ಸರ್ಕಾರಿ ಅಧಿಕಾರಿಗಳೊಂದಿಗೆ ಸಾರ್ವಜನಿಕರು ಮತ್ತು ಸಂಘ ಸಂಸ್ಥೆಗಳ ಸಹಭಾಗಿತ್ವ ಅಗತ್ಯ ಎನ್ನುವುದಕ್ಕೆ ಈ ಗ್ರಾಮ ಉತ್ತಮ ಉದಾಹರಣೆಯಾಗಿದೆ.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.