ADVERTISEMENT

ಗ್ರಾ.ಪಂ. ಕಚೇರಿ ಎದುರು ಪ್ರತಿಭಟನೆ

​ಪ್ರಜಾವಾಣಿ ವಾರ್ತೆ
Published 15 ಮಾರ್ಚ್ 2012, 8:50 IST
Last Updated 15 ಮಾರ್ಚ್ 2012, 8:50 IST

ಕುರುಗೋಡು: ಪಟ್ಟಣದ ಕುಂಬಾರ ಗುಡ್ಡದ ಬಳಿಯಿರುವ ಮಹಿಳಾ ಸಾಮೂಹಿಕ ಶೌಚಾಲಯ ದುರಸ್ತಿಗೊಳಿಸುವಂತೆ ಆಗ್ರಹಿಸಿ ಮಹಿಳೆಯರು ಬುಧವಾರ ಸ್ಥಳೀಯ ಗ್ರಾಮ ಪಂಚಾಯಿತಿ ಎದುರು ಪ್ರತಿಭಟನೆ ನಡೆಸಿ ಮನವಿ ಸಲ್ಲಿಸಿದರು.

ಪಿಂಜಾರ್‌ಓಣಿ, ಕುರುಬರಓಣಿ ಮತ್ತು 5ನೇ ವಾರ್ಡಿನ ಮಹಿಳೆಯರಿಗೆ ಇದೊಂದೆ ಮಹಿಳಾ ಸಾಮೂಹಿಕ ಶೌಚಾಲಯವಿದ್ದು, ಅನೇಕ ವರ್ಷದಿಂದ ದುರಸ್ತಿ ಕಾಣದೆ ಶೌಚಾಲಯದ ಒಂದು ಮಗ್ಗಲಿನ ಗೋಡೆ ಬಿದ್ದಿದೆ.
ಇದರ ಪಕ್ಕದಲ್ಲಿರುವ ಹುಣಿಸೆ ಗಿಡದ ನೆರಳಲ್ಲಿ ಪುರುಷರು ಗುಂಪು ಸದಾ ಇಸ್ಟೀಟ್‌ನಲ್ಲಿ ಮುಳುಗಿರುತ್ತಾರೆ.
 ಶೌಚಾಲಯದ ಸುತ್ತ ತಿಪ್ಪೆಗಳು ತಲೆ ಎತ್ತಿದ್ದು ಶೌಚಾಲಯಕ್ಕೆ ಹೋಗಲು ಸೂಕ್ತ ರಸ್ತೆ ಇರುವುದಿಲ್ಲ. ಬಹಿರ್ದೆಸೆಗೆ ಹೋಗುವ ಮಹಿಳೆಯರಿಗೆ ಭಯದ ಪರಿಸ್ಥಿತಿ ನಿರ್ಮಾಣವಾಗಿದೆ.  

 ಇಲ್ಲಿ ನಡೆಯುವ ಇಸ್ಪೀಟ್ ಆಟಕ್ಕೆ ಕಡಿವಾಣ ಹಾಕುವಂತೆ ಪೊಲೀಸರಿಗೆ ಮತ್ತು ದುರಸ್ತಿ ಕೈಗೊಳ್ಳುವಂತೆ ಗ್ರಾಪಂ.ಗೆ ಅನೇಕ ಬಾರಿ ಒತ್ತಾಯಿಸಿದರೂ  ಪ್ರಯೋಜವಾಗಿಲ್ಲ.  ನಿರ್ಲಕ್ಷ್ಯ ಮುಂದುವರಿದರೆ ಶೌಚಾಲಯವೇ ಕಾಣದಾಗುತ್ತದೆ, ತಕ್ಷಣ ಗ್ರಾಪಂ. ದುರಸ್ತಿ ಕಾರ್ಯ ಕೈಗೊಳ್ಳಬೇಕು ಎಂದು ಆಗ್ರಹಿಸಿದರು. 

 ಮಹಿಳೆಯರ ಹೋರಾಟಕ್ಕೆ ಬೆಂಬಲಿಸಿ ಕರವೆ ಜಿಲ್ಲಾ ಘಟಕದ ಪ್ರಧಾನ ಕಾರ್ಯದರ್ಶಿ ಚಾನಾಳ್ ಚನ್ನಬಸವರಾಜ್ ಮಾತನಾಡಿ, ಉದ್ಯೋಗ ಖಾತರಿ ಯೋಜನೆಯಡಿ ಕಾಮಗಾರಿ ಕೈಗೊಳ್ಳುವ ಅವಕಾಶವಿದ್ದರೂ. ಗ್ರಾಪಂ. ಮೌನವಾಗಿದೆ. ಮೂರು ವಾರ್ಡಿನ ಮಹಿಳೆಯರು ಸಂಕಟದ ಸ್ಥಿತಿ ಅನುಭವಿಸುವಂತಾಗಿದೆ. ಈ ಬಗ್ಗೆ ಗ್ರಾಮಾಡಳಿತ ತಕ್ಷಣ ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿದರು. 

 ಪ್ರತಿಭಟನಾ ನಿರತರ ಅಹವಾಲು ಸ್ವೀಕರಿಸಿದ ಗ್ರಾಪಂ. ಅಭಿವೃದ್ಧಿ ಅಧಿಕಾರಿ ಎಸ್‌ಎಮ್. ಶಿವರುದ್ರಯ್ಯ, ಸಾಮೂಹಿಕ ಶೌಚಾಲಯ ನಿರ್ಮಾಣ ಮತ್ತು ದುರಸ್ತಿಗೆ ಜಿಲ್ಲಾಡಳಿತ ಪರವಾನಿಗೆ ನೀಡಿಲ್ಲ. ಜಿ.ಪಂ.ನಲ್ಲಿ ನಡೆದ ಸಭೆಗಳಲ್ಲಿ ವೈಯಕ್ತಿಕ ಶೌಚಾಲಯ ಕಡ್ಡಾಯಗೊಳಿಸುವಂತೆ ಅಧಿಕಾರಿಗಳು ಸೂಚಿಸಿದ್ದಾರೆ.

ಸಾಮೂಹಿಕ ಶೌಚಾಲಯ ದುರಸ್ತಿ ಮತ್ತು ನಿರ್ಮಾಣಕ್ಕೆ ಯಾವುದೆ ಅನುದಾನವಿಲ್ಲ ಎಂದು ತಿಳಿಸಿದರು.
ಅಭಿವೃದ್ಧಿ ಅಧಿಕಾರಿಯ ಸಮಜಾಯಿಷಿ ಒಪ್ಪದ ಪ್ರಭಟನಾಕಾರರು ಕೆಲ ಸಮಯದ ವರೆಗೆ ಬಿಸಿ ಬಿಸಿ ಚರ್ಚೆ ನಡೆಸಿದರು.

ಜಿಪಂ. ಅಧಿಕಾರಿಗೊಳೊಂದಿಗೆ ದೂರವಾಣಿಯಲ್ಲಿ ಮಾತನಾಡಿದ ಅವರು, 13ನೇ ಹಣಕಾಸು ಅಥವಾ ಅಭಿವೃದ್ಧಿ ಯೋಜನೆ ಅನುದಾನದಡಿ, ದುರಸ್ತಿ ಕಾಮಗಾರಿ ಕೈಗೊಳ್ಳಲು ಪರವಾನಿಗೆ ಪಡೆಯಲಾಯಿತು.
ಮುಂದಿನ ವಾರದಿಂದ ದುರಸ್ತಿ ಕೈಗೊಳ್ಳುವ ಭರವಸೆ ನೀಡಿದ ನಂತರ ಮಹಿಳೆಯರು ಪ್ರತಿಭಟನೆ ಹಿಂಪಡೆದರು. 

 ಕರವೇ ಸ್ಥಳೀಯ ಘಟಕದ ಅಧ್ಯಕ್ಷ ಬಿ. ಮಲ್ಲಿಕಾರ್ಜುನ, ರೈತ ವಿಭಾಗದ ಅಧ್ಯಕ್ಷ್ಯ ಚನ್ನಪಟ್ಟಣ ಮಲ್ಲಿಕಾರ್ಜುನ, ನಂದಿಕೋಲು ಬಸವರಾಜ್, ಸಿದ್ದಿಸಾಬ್, ಸ್ತ್ರೀಶಕ್ತಿ ಸಂಘದ ಸದಸ್ಯರು ಪ್ರತಿಭಟೆನಯಲ್ಲಿ ಪಾಲ್ಗೊಂಡಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.