ADVERTISEMENT

ಚಿರತೆಗಾಗಿ ಟನ್‌ ತೂಕದ ಬೋನು!

​ಪ್ರಜಾವಾಣಿ ವಾರ್ತೆ
Published 15 ಜೂನ್ 2018, 10:31 IST
Last Updated 15 ಜೂನ್ 2018, 10:31 IST

ಬಳ್ಳಾರಿ: ನಗರದ 31ನೇ ವಾರ್ಡಿನ ಎಂ.ಕೆ.ನಗರದ ಮೇಲಿನ ಗುಡ್ಡದಲ್ಲಿ ಸೋಮವಾರ ಸಂಜೆ ಕಾಣಿಸಿಕೊಂಡಿದ್ದ ಚಿರತೆಯನ್ನು ಹಿಡಿಯುವ ಸಲುವಾಗಿ ಅರಣ್ಯ ಇಲಾಖೆ ಸಿಬ್ಬಂದಿ ಗುರುವಾರ ಎರಡನೇ ಬೋನನ್ನು ಅಳವಡಿಸಿದರು.

ಮೊದಲನೇ ಬೋನನ್ನು ಗುಡ್ಡದ ಮಧ್ಯಭಾಗದಲ್ಲಿ ಇಡಲಾಗಿದ್ದು, ಎರಡನೇ ಬೋನನ್ನು ಜಿ.ಜನಾರ್ದನರೆಡ್ಡಿ ಅವರ ಬಂಗಲೆಯ ಹಿಂಭಾಗದ ಪ್ರದೇಶದಲ್ಲಿ ಇಡಲಾಗಿದೆ. 1 ಟನ್‌ ತೂಕದ ಬೋನನ್ನು ಗುಡ್ಡದ ಮೇಲಕ್ಕೆ ಸಾಗಿಸುವ ಕಾರ್ಯ ಬೆಳಿಗ್ಗೆ 11.30ಕ್ಕೆ ಆರಂಭವಾಗಿ ಸಂಜೆ 4.30ಕ್ಕೆ ಪೂರ್ಣಗೊಂಡಿತು.

ಉಪ ವಲಯ ಅರಣ್ಯಾಧಿಕಾರಿ ಶೇಖರ್‌, ಅರಣ್ಯ ರಕ್ಷಕ ಪಾಟೀಲ್‌, ಅರಣ್ಯ ವೀಕ್ಷಕ ನರಸಾರೆಡ್ಡಿ ನೇತೃತ್ವದಲ್ಲಿ ಬೋನು ಸಾಗಿಸುವ ಕಾರ್ಯಕ್ಕೆ ಸ್ಥಳೀಯರಾದ ನೂರಾರು ಮಂದಿ ಭುಜಕೊಟ್ಟಿದ್ದು ಗಮನ ಸೆಳೆಯಿತು. ಬೋನಿಗೆ ಹಗ್ಗಕಟ್ಟಿ ಮೇಲಕ್ಕೆ ಎಳೆದು ತಂದರು.

ADVERTISEMENT

ಕಾರ್ಯಾಚರಣೆ ಆರಂಭದಿಂದ ಪೂರ್ಣಗೊಳ್ಳುವವರೆಗೂ ಶಾಸಕ ಜಿ. ಸೋಮಶೇಖರ ರೆಡ್ಡಿ ಉಪಸ್ಥಿತರಿದ್ದರು.

ಬೋನಿನಲ್ಲಿ ನಾಯಿ!: ’ಗುಡ್ಡದ ಮಧ್ಯಭಾಗದಲ್ಲಿ ಇಟ್ಟಿರುವ ಬೋನಿನಲ್ಲಿ ಬುಧವಾರ ರಾತ್ರಿ ನಾಯಿಯೊಂದು ಸಿಲುಕಿಕೊಂಡಿತ್ತು. ಚಿರತೆಯನ್ನು ಹಿಡಿಯಲೆಂದು ಬೋನಿನಲ್ಲಿ ಮೇಕೆಯೊಂದನ್ನು ಕಟ್ಟಿಹಾಕಲಾಗಿದೆ. ಅದನ್ನು ಕಂಡು ನಾಯಿ ಬಂದಿತ್ತು. ಅದು ಬರದೇ ಹೋಗಿದ್ದರೆ ಚಿರತೆ ಬಂದು ಸಿಲುಕಿಕೊಳ್ಳುವ ಅವಕಾಶವಿತ್ತು’ ಎಂದು ವಲಯ ಅರಣ್ಯಾಧಿಕಾರಿ ಡಿ.ಎಲ್‌ಹರ್ಷ ತಿಳಿಸಿದರು.

‘ಬೋನಿಗೆ ಎರಡು ಕಡೆ ಬಾಗಿಲಿದ್ದು, ಮುಚ್ಚಿರುವ ಬಾಗಿಲ ಒಂದು ತುದಿಯಲ್ಲಿ ಮೇಕೆಯನ್ನು ಕಟ್ಟಿ ಹಾಕಿದ್ದೇವೆ. ಅದನ್ನು ತಿನ್ನಲು ಮತ್ತೊಂದು ಬಾಗಿಲ ಮೂಲಕ ಬರುವ ಚಿರತೆಯು ಅಲ್ಲಿನ ಸ್ಪ್ರಿಂಗ್‌ ಅನ್ನು ತಾಕಿದ ಕೂಡಲೇ ಬಾಗಿಲು ಮುಚ್ಚಿಕೊಂಡು ಚಿರತೆ ಬೋನಿನಲ್ಲಿ ಸಿಕ್ಕಿಬೀಳುತ್ತದೆ’ ಎಂದರು.

ಸಹಕಾರ: ’ಚಿರತೆಯನ್ನು ಹಿಡಿಯಲು ಸ್ಥಳೀಯರ ಸಹಕಾರ ನಿರೀಕ್ಷೆ ಮೀರಿ ದೊರಕುತ್ತಿದೆ. ಬಹುಷಃ ರಾತ್ರಿ ಚಿರತೆ ಬೋನಿಗೆ ಸಿಕ್ಕಿಬೀಳಬಹುದು’ ಎಂದರು.

ಗುಡ್ಡದ ಸುತ್ತಮುತ್ತ ಇರುವ ರಾಜೇಶ್ವರಿ ನಗರ, ಮೇದಾರ ಕೇತಯ್ಯ ನಗರ, ಇಂದಿರಾನಗರ, ಸತ್ಯವಾಣಿ ನಗರ, ಕರಿಮಾರಿಯಮ್ಮ ಗುಡ್ಡದ ಜನರು ಚಿರತೆಯಿಂದಾಗಿ ಆತಂಕಗೊಂಡಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.