ADVERTISEMENT

ಚಿಲವಾರಬಂಡಿ ಯೋಜನೆಗೆ ಅನುದಾನ: ವಿಜಯೋತ್ಸವ

​ಪ್ರಜಾವಾಣಿ ವಾರ್ತೆ
Published 13 ಫೆಬ್ರುವರಿ 2013, 8:08 IST
Last Updated 13 ಫೆಬ್ರುವರಿ 2013, 8:08 IST
ದಲಿತ ರೈತರ ಮೂರು ದಶಕಗಳ ಹಿಂದಿನ ಬೇಡಿಕೆಯಾದ ಚಿಲವಾರ ಬಂಡಿ ಏತ ನೀರಾವರಿ ಯೋಜನೆಯ ಜಾರಿಗೆ ಅಗತ್ಯ ಅನುದಾನ ಒದಗಿಸಿ, ಯೋಜನೆಗೆ ಇದೇ 24ರಂದು ಭೂಮಿಪೂಜೆ ಮಾಡುವುದನ್ನು ನಿಗದಿಪಡಿಸಿದ ಹಿನ್ನೆಲೆಯಲ್ಲಿ ತಾಲ್ಲೂಕಿನ ಕಡ್ಲಬಾಳು ಗ್ರಾಮದ ರೈತರು ಸಂಭ್ರಮ ಆಚರಿಸಿದರು.
ದಲಿತ ರೈತರ ಮೂರು ದಶಕಗಳ ಹಿಂದಿನ ಬೇಡಿಕೆಯಾದ ಚಿಲವಾರ ಬಂಡಿ ಏತ ನೀರಾವರಿ ಯೋಜನೆಯ ಜಾರಿಗೆ ಅಗತ್ಯ ಅನುದಾನ ಒದಗಿಸಿ, ಯೋಜನೆಗೆ ಇದೇ 24ರಂದು ಭೂಮಿಪೂಜೆ ಮಾಡುವುದನ್ನು ನಿಗದಿಪಡಿಸಿದ ಹಿನ್ನೆಲೆಯಲ್ಲಿ ತಾಲ್ಲೂಕಿನ ಕಡ್ಲಬಾಳು ಗ್ರಾಮದ ರೈತರು ಸಂಭ್ರಮ ಆಚರಿಸಿದರು.   

ಹಗರಿಬೊಮ್ಮನಹಳ್ಳಿ: `ದಲಿತ ರೈತರ ಮೂರು ದಶಕಗಳ ಹಿಂದಿನ ಬೇಡಿಕೆಯಾದ, ಚಿಲವಾರ ಬಂಡಿ ಏತ ನೀರಾವರಿ ಯೋಜನೆಯ ಜಾರಿಗೆ ಅಗತ್ಯ ಅನುದಾನ ಒದಗಿಸಿ ಶಾಸಕ ನೇಮಿರಾಜ್‌ನಾಯ್ಕ ಅಚ್ಚುಕಟ್ಟು ಪ್ರದೇಶದ ರೈತರ ಕನಸನ್ನು ನನಸು ಮಾಡಿದ್ದಾರೆ' ಎಂದು ಎಐಕೆಎಸ್ ಮುಖಂಡ ಎ.ಅಡಿವೆಪ್ಪ ಶ್ಲಾಘಿಸಿದರು.

ಚಿಲವಾರ ಬಂಡಿ ಏತ ನೀರಾವರಿ ಯೋಜನೆಗೆ ಇದೇ 24ರಂದು ಭೂಮಿಪೂಜೆ ಮಾಡುವುದನ್ನು ಶಾಸಕರು ನಿಗದಿಪಡಿಸಿದ ಹಿನ್ನೆಲೆಯಲ್ಲಿ ತಾಲ್ಲೂಕಿನ ಕಡ್ಲಬಾಳು ಗ್ರಾಮದ ರೈತರು ಸಂಭ್ರಮಾಚರಣೆ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

ಚಿಲವಾರ ಬಂಡಿ ಸಹಿತ ತಾಲ್ಲೂಕಿನ ಮೂರು ನೂತನ ಏತ ನೀರಾವರಿ ಯೋಜನೆಗಳಿಗೆ ಈ ಬಾರಿಯ ಬಜೆಟ್‌ನಲ್ಲಿ ರೂ 35ಕೋಟಿ ಹಣ ಒದಗಿಸುವ ಮೂಲಕ ನೇಮಿರಾಜ್‌ನಾಯ್ಕ ರೈತ ಪರ ಕಾಳಜಿ ಪ್ರದರ್ಶಿಸಿದ್ದಾರೆ. ಹಿಂದಿನ ಜನಪ್ರತಿನಿಧಿಗಳ ನಿರ್ಲಕ್ಷ್ಯದಿಂದ ಯೋಜನೆಗಳ ವಿಳಂಬಕ್ಕೆ ಕಾರಣವಾಗಿತ್ತು. ಶಾಸಕರು ಆಸಕ್ತಿ ವಹಿಸಿ ಯೋಜನೆ ಜಾರಿಗೊಳಿಸುವ ಮೂಲಕ ಈ ಭಾಗದ ರೈತರ ಹೋರಾಟಕ್ಕೆ ಮನ್ನಣೆ ನೀಡಿದ್ದಾರೆ ಎಂದು ಹರ್ಷ ವ್ಯಕ್ತಪಡಿಸಿದರು.

ಇದೇ 24ರಂದು ವಿವಿಧ ಮಠಾಧೀಶರ ನೇತೃತ್ವದಲ್ಲಿ ಯೋಜನೆಗೆ ಭೂಮಿಪೂಜೆಯನ್ನು ನೆರವೇರಿಸಲಾಗುತ್ತಿರುವ ಹಿನ್ನೆಲೆಯಲ್ಲಿ ನಾನಾ ಗ್ರಾಮಗಳ ಅಚ್ಚುಕಟ್ಟು ಪ್ರದೇಶದ ಎಲ್ಲಾ ರೈತರು ತಮ್ಮ ಎತ್ತಿನ ಬಂಡಿಗಳನ್ನು ಸಿಂಗರಿಸಿಕೊಂಡು ನೇಮಿರಾಜ್‌ನಾಯ್ಕ ಅವರ ಮೆರವಣಿಗೆ ನಡೆಸಬೇಕು ಎಂದು ಬಾರೀಕರ ಬಸವರಾಜ ಕೋರಿದರು. 

ಸಂಭ್ರಮಾಚರಣೆಯ ಅಂಗವಾಗಿ ರೈತರು ಗ್ರಾಮದ ಮಸೀದಿ, ಮಂದಿರಗಳಿಗೆ ಟೆಂಗಿನಕಾಯಿಗಳನ್ನು ಒಡೆದು, ಪರಸ್ಪರ ಸಿಹಿ ತಿನ್ನಿಸಿ ಪಟಾಕಿ ಸಿಡಿಸಿ ಸಂತಸಪಟ್ಟರು. ಪ್ರಗತಿಪರ ರೈತರಾದ ಬ್ಯಾಟಿ ಮಲ್ಲೇಶ್ `ಚಿಲವಾರ ಬಂಡಿ, ಚಿನ್ನದ ಬಂಡಿ. ಸಾವಿರಾರು ರೈತ ಕುಟುಂಬಗಳ ಸ್ವರ್ಗದ ಬಂಡಿ, ಎಲ್ಲರ ಪಾಲಿನ ದುಡಿಮೆಯ ಅನ್ನದ ಬಂಡಿ. ಶಾಸಕರ ಕನಸಿನ ಬಂಡಿ' ಎಂದು ಹಾಡಿ ರಂಜಿಸಿದರು.

ರೈತ ಮುಖಂಡರಾದ ಬ್ಯಾಟಿ ಗಿಡ್ಡಪ್ಪ, ಗುಗ್ರಿ ಹಾಲಪ್ಪ, ಚಲ್ವಾಡಿ ಹೇಮಣ್ಣ, ಬಿ.ಬಸವರಾಜ್, ಎಂ.ಅಂಜಿನಪ್ಪ, ಕಾವಲಿ ಹನಮಂತಪ್ಪ, ಒಂಟೇರ್ ದೇವಪ್ಪ, ಯು.ಸಕ್ರಪ್ಪ, ಎಚ್.ಕೊಟ್ರೇಶ್, ಯು.ಬಸವರಾಜ್, ಸಿ.ಮಲ್ಲೇಶ್, ಶಾಲಿ ಮರಿಯಮ್ಮ, ಒಂಟಿಗೋಡಿ ನಾಗರಾಜ್, ದೊಡ್ಡಪ್ಪ, ಓ.ಶೇಖರಪ್ಪ, ಗುಡ್ಲಾನೂರು ಚಂದ್ರಪ್ಪ, ಗುಡ್ಲಾನೂರು ಈಶಪ್ಪ, ಬ್ಯಾಟಿ ಫಕೀರಪ್ಪ ಹಾಗೂ ಅಗಸರ ನಾಗರಾಜ್ ಸೇರಿದಂತೆ 300ಕ್ಕೂ ಹೆಚ್ಚು ಸಂಭ್ರಮಾಚರಣೆಯಲ್ಲಿ ಪಾಲ್ಗೊಂಡಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.