ಬಳ್ಳಾರಿ: ಲೋಕಸಭೆ ಚುನಾವಣೆ ಹಿನ್ನೆಲೆಯಲ್ಲಿ ಗುರುವಾರ ಜಿಲ್ಲಾಧಿಕಾರಿ ಕಚೇರಿಯಲ್ಲಿ ಮೊದಲ ನಾಮಪತ್ರ ಸಲ್ಲಿಕೆಯಾಗಿದ್ದು, ಸೋಷಲಿಸ್ಟ್ ಯೂನಿಟಿ ಸೆಂಟರ್ ಆಫ್ ಇಂಡಿಯಾ (ಎಸ್‌ಯೂಸಿಐ)–ಸಿ ಪಕ್ಷದ ಅಭ್ಯರ್ಥಿಯಾಗಿ ಎ.ದೇವದಾಸ್ ಉಮೇದುವಾರಿಕೆ ಸಲ್ಲಿಸಿದರು.
ನಗರದ ಒಡ್ಡರಬಂಡೆ ಪ್ರದೇಶದಲ್ಲಿರುವ ರಾಧಿಕಾ ಚಿತ್ರಮಂದಿರದ ಮುಂಭಾಗದಿಂದ ನಗರದ ಮುಖ್ಯ ರಸ್ತೆಗಳಲ್ಲಿ ಪಕ್ಷದ ಮುಖಂಡರು ಹಾಗೂ ಬೆಂಬಲಿಗರೊಂದಿಗೆ ಪಾದಯಾತ್ರೆ ಮೂಲಕ ಆಗಮಿಸಿದ ದೇವದಾಸ್, ನಾಲ್ವರು ಪ್ರಮುಖರೊಂದಿಗೆ ತೆರಳಿ ಹೆಚ್ಚುವರಿ ಜಿಲ್ಲಾಧಿಕಾರಿ ವೆಂಕಟೇಶ್ ಅವರಿಗೆ ನಾಮಪತ್ರ ಸಲ್ಲಿಸಿದರು.
‘ಚುನಾವಣೆಗಳು ಬರುತ್ತಿವೆ, ಹೋಗುತ್ತಿವೆ. ಆದರೆ, ಜನತೆ ಎದುರಿಸುತ್ತಿರುವ ಸಮಸ್ಯೆಗಳು ಮಾತ್ರ ಮುಂದುವರಿದೇ ಇವೆ. ಈ ಹಿನ್ನೆಲೆಯಲ್ಲಿ ಕೇವಲ ಆಶ್ವಾಸನೆ ನೀಡಿ ಜನರಿಗೆ ಮೋಸ ಮಾಡುವ ಪಕ್ಷಗಳ ಅಭ್ಯರ್ಥಿಗಳನ್ನು ಮತದಾರರು ತಿರಸ್ಕರಿಸಬೇಕಿದೆ’ ಎಂದು ಅವರು ನಂತರ ಸುದ್ದಿಗಾರ ಎದುರು ಅಭಿಪ್ರಾಯಪಟ್ಟರು.
ಜನರನ್ನು ಪ್ರತಿನಿಧಿಸುವವರು ಸಮಸ್ಯೆಗಳ ನಿವಾರಣೆಗೆ ಶ್ರಮಿಸಬೇಕು. ಜನವಿರೋಧಿ ನೀತಿ ಅನುಸರಿಸುವವರಿಗೆ ತಕ್ಕ ಪಾಠ ಕಲಿಸಬೇಕು. ಜನಪರ ಹೋರಾಟಗಳನ್ನು ರೂಪಿಸಿರುವ ಎಸ್‌ಯುಸಿಐ–ಸಿ ಪಕ್ಷ ಬೆಂಬಲಿಸುವ ಮೂಲಕ ಮತದಾರರು ತಮ್ಮ ಸೇವೆಗೆ ಅನುವು ಮಾಡಿಕೊಡಬೇಕು ಎಂದು ಅವರು ಕೋರಿದರು.
ಪಕ್ಷದ ಮುಖಂಡರಾದ ಕೆ.ಸೋಮಶೇಖರ್, ಆರ್. ಸೋಮಶೇಖರಗೌಡ, ಎಂ.ಎನ್ ಮಂಜುಳಾ, ಜಿ.ಎಂ. ವೀರಭದ್ರಯ್ಯ, ಎಸ್.ಜಿ. ನಾಗರತ್ನಾ ಈ ಸಂದರ್ಭ ಹಾಜರಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.