ADVERTISEMENT

ಚುರುಕುಗೊಂಡ ಕೃಷಿ ಚಟುವಟಿಕೆ

ಮುಂಗಾರು ಪೂರ್ವ ಮಳೆ ಉತ್ತಮ; ಸಂಡೂರು ತಾಲ್ಲೂಕಿನಲ್ಲಿ ನಾಲ್ಕು ಬೀಜ ವಿತರಣಾ ಕೇಂದ್ರಗಳು

​ಪ್ರಜಾವಾಣಿ ವಾರ್ತೆ
Published 4 ಜೂನ್ 2018, 10:55 IST
Last Updated 4 ಜೂನ್ 2018, 10:55 IST
ಸಂಡೂರು ತಾಲ್ಲೂಕಿನ ನಿಡಗುರ್ತಿ ಗ್ರಾಮದಲ್ಲಿ ರೈತ ಟಿ. ಗಂಡೆಪ್ಪ ಜೋಳ ಬಿತ್ತನೆಯಲ್ಲಿ ತೊಡಗಿರುವುದು
ಸಂಡೂರು ತಾಲ್ಲೂಕಿನ ನಿಡಗುರ್ತಿ ಗ್ರಾಮದಲ್ಲಿ ರೈತ ಟಿ. ಗಂಡೆಪ್ಪ ಜೋಳ ಬಿತ್ತನೆಯಲ್ಲಿ ತೊಡಗಿರುವುದು   

ಸಂಡೂರು: ವಿವಿಧೆಡೆ ಸುರಿದಿದ್ದ ಮುಂಗಾರು ಪೂರ್ವ ಮಳೆ ತಾಲ್ಲೂಕಿನಲ್ಲಿ ಕೃಷಿ ಚಟುವಟಿಕೆಗಳು ಚುರುಕುಗೊಳ್ಳಲು ನಾಂದಿಯಾಗಿದೆ. ಮುಂಗಾರು ಪೂರ್ವ ಮಳೆಗೆ ಹೊಲಗಳನ್ನು ಹದ ಮಾಡಿಕೊಂಡಿದ್ದ ಹಲವು ರೈತರು ಇದೀಗ ಆರಂಭವಾಗಿರುವ ರೋಹಿಣಿ ಮಳೆಗೆ ಜೋಳ ಬಿತ್ತನೆ ಆರಂಭಿಸಿದ್ದಾರೆ. ಕೆಲವರು ಬಿತ್ತನೆಗೆ ಹೊಲಗಳನ್ನು ಹಸನು ಮಾಡಿಕೊಳ್ಳತೊಡಗಿದ್ದಾರೆ.

ಮುಂಗಾರು ಹಂಗಾಮಿನಲ್ಲಿ ವಿವಿಧ ಬೆಳಗಳ ಬಿತ್ತನೆ ಗುರಿ (ನೀರಾವರಿ ‌ಹಾಗೂ ಖುಷ್ಕಿ ಸೇರಿ): ಭತ್ತ (1,100 ಹೆಕ್ಟೇರ್), ಜೋಳ( 3,750 ಹೆಕ್ಟೇರ್), ರಾಗಿ (550 ಹೆಕ್ಟೇರ್), ಮೆಕ್ಕೆ‌ಜೋಳ (13,000 ಹೆಕ್ಟೇರ್), ಸಜ್ಜೆ (2,400 ಹೆಕ್ಟೇರ್), ತೊಗರಿ (700 ಹೆಕ್ಟೇರ್), ಹುರುಳಿ (210 ಹೆಕ್ಟೇರ್), ಹೆಸರು (55 ಹೆಕ್ಟೇರ್), ಅವರೆ (30 ಹೆಕ್ಟೇರ್), ಶೇಂಗಾ (1600 ಹೆಕ್ಟೇರ್), ಎಳ್ಳು (550 ಹೆಕ್ಟೇರ್), ಸೂರ್ಯಕಾಂತಿ (270 ಹೆಕ್ಟೇರ್), ಔಡಲ (20 ಹೆಕ್ಟೇರ್), ಹತ್ತಿ (4,810 ಹೆಕ್ಟೇರ್), ಕಬ್ಬು (40 ಹೆಕ್ಟೇರ್).

ನಾಲ್ಕು ಬೀಜ ವಿತರಣಾ ಕೇಂದ್ರಗಳು: ತಾಲ್ಲೂಕಿನಲ್ಲಿ ಸಂಡೂರು, ಚೋರುನೂರು, ತೋರಣಗಲ್ ಹಾಗೂ ಬಂಡ್ರಿ ಗ್ರಾಮದಲ್ಲಿ ಬೀಜ ವಿತರಣಾ ಕೇಂದ್ರಗಳನ್ನು ತೆರೆಯಲಾಗಿದೆ. ಈ ಕೇಂದ್ರಗಳಿಂದ ಈಗಾಗಲೆ ರೈತರಿಗೆ ಬೀಜಗಳನ್ನು ವಿತರಿಸಲಾಗುತ್ತಿದೆ.

ADVERTISEMENT

ಬೀಜ ದಾಸ್ತಾನು: ತಾಲ್ಲೂಕಿನ ನಾಲ್ಕು ಬೀಜ ವಿತರಣಾ ಕೇಂದ್ರಗಳಲ್ಲಿ ಒಟ್ಟು 202.30 ಕ್ವಿಂಟಲ್ ಜೋಳ, 1,133 ಕ್ವಿಂಟಲ್ ಮೆಕ್ಕೆಜೋಳ, 201 ಕ್ವಿಂಟಲ್ ಸಜ್ಜೆ, 40 ಕ್ವಿಂಟಾಲ್ ತೊಗರಿ, 31,20 ಕ್ವಿಂಟಲ್ ನವಣೆ, 270 ಕ್ವಿಂಟಾಲ್ ಶೇಂಗಾ ಹಾಗೂ 75 ಕ್ವಿಂಟಲ್ ಭತ್ತದ ಬಿತ್ತನೆ ಬೀಜಗಳನ್ನು ಸಂಗ್ರಹಿಸಲಾಗಿದೆ. ತಾಲ್ಲೂಕಿನ ಚೋರುನೂರು ಹೋಬಳಿಯ ಬಂಡ್ರಿ ಭಾಗದಲ್ಲಿ ಹಾಗೂ ತೋರಣಗಲ್‌ ಭಾಗದ ಲಿಂಗದಹಳ್ಳಿ ಭಾಗದಲ್ಲಿ ಜೋಳ ಮತ್ತು ಹತ್ತಿ ಬಿತ್ತನೆ ಕಾರ್ಯ ನಡೆದಿದೆ. ರೈತರಿಗೆ ಅಗತ್ಯವಿರುವಷ್ಟು ಬಿತ್ತನೆ ಬೀಜ ದಾಸ್ತಾನು ಮಾಡಲಾಗಿದೆ ಎಂದು ತಾಲ್ಲೂಕಿನ ಕೃಷಿ ಇಲಾಖೆಯ ಸಹಾಯಕ ಕೃಷಿ ನಿರ್ದೇಶಕಿ ಗೌರಾ ಮುಕುಂದರಾವ್ ‘ಪ್ರಜಾವಾಣಿ’ಗೆ ತಿಳಿಸಿದರು.

ಒಟ್ಟಿನಲ್ಲಿ ಉತ್ತಮ ಭರವಸೆ ಮೂಡಿಸಿರುವ ಮುಂಗಾರು ಮಳೆಯಿಂದಾಗಿ ತಾಲ್ಲೂಕಿನಲ್ಲಿ ಕೃಷಿ ಚಟುವಟಿಕೆಗಳು ಚುರುಕುಗೊಂಡಿವೆ.

**
ನಮ್ಮ ಭಾಗದಲ್ಲಿ ಉತ್ತಮ ಮಳೆಯಾಗಿರುವ ಕಾರಣ, ಹಲವು ರೈತರು ಈಗಾಗಲೆ ಜೋಳ ಬಿತ್ತನೆ ನಡೆಸಿದ್ದಾರೆ
ಹನುಮಂತಪ್ಪ, ರೈತ, ನಿಡಗುರ್ತಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.