ADVERTISEMENT

ಜನರ ಅಭಿಪ್ರಾಯ ಪಡೆದು ಮುಂದಿನ ನಡೆ ನಿರ್ಧಾರ

ಕಾಂಗ್ರೆಸ್ ಟಿಕೆಟ್ ಆಕಾಂಕ್ಷಿ ವಿ. ಲೋಕೇಶ ನಾಯಕ ಅಸಮಾಧಾನ

​ಪ್ರಜಾವಾಣಿ ವಾರ್ತೆ
Published 18 ಏಪ್ರಿಲ್ 2018, 5:51 IST
Last Updated 18 ಏಪ್ರಿಲ್ 2018, 5:51 IST

‌ಕೂಡ್ಲಿಗಿ: ಕಾಂಗ್ರೆಸ್ ಪಕ್ಷದ ಟಿಕೆಟ್ ಕೈ ತಪ್ಪಿರುವುದು ಮನಸ್ಸಿಗೆ ನೋವಾಗಿದೆ. ಈ ಬಗ್ಗೆ ಸ್ಥಳೀಯರ ಅಭಿಪ್ರಾಯ ಪಡೆದು ಮುಂದಿನ ನಡೆ ನಿರ್ಧಾರ ಕೈಗೊಳ್ಳಲಾಗುವುದು ಎಂದು ಕಾಂಗ್ರೆಸ್ ಟಿಕೆಟ್ ವಂಚಿತ ಲೋಕೆಶ್ ವಿ.ನಾಯಕ ಹೇಳಿದರು.

ಅವರು ಮಂಗಳವಾರ ಕೂಡ್ಲಿಗಿಯ ತಮ್ಮ ನಿವಾಸದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿ, ಕಾಂಗ್ರೆಸ್ ಪಕ್ಷದಿಂದ ಕೂಡ್ಲಿಗಿ ಕ್ಷೇತ್ರದಲ್ಲಿ ಟಿಕೆಟ್ ಸಿಗುತ್ತದೆ ಎಂಬ ವಿಶ್ವಾಸದ ಮೇಲೆ ಕಳೆದ ಎರಡು ವಷಗಳಿಂದಲೂ ಕೆಲಸ ಮಾಡಿದ್ದೇನೆ. ಕೊನೆ ಕ್ಷಣದಲ್ಲಿ ನಿಮಗೆ ಟಿಕೆಟ್ ತಪ್ಪಿಸಬಹುದು ಎಂದು ಇಲ್ಲಿನ ಜನರು ಮೊದಲೇ ಹೇಳಿದ್ದರು. ಆದರೆ ನಾನು ಟಿಕೆಟ್ ತರುತ್ತೇನೆ ಎಂದು ಹೇಳಿ, ಸಿಗದೆ ಇದ್ದರೆ ಜನ ಹೇಳಿದಂತೆ ಕೇಳುತ್ತೇನೆ ಎಂದು ಭರವಸೆ ನೀಡಿದ್ದೆ. ಇದೀಗ ಟಿಕೆಟ್ ತರುವಲ್ಲಿ ವಿಫಲವಾಗಿದ್ದು, ಜನರ ಅಭಿಪ್ರಾಯದಂತೆ ನಡೆದುಕೊಳ್ಳುತ್ತೇನೆ ಎಂದರು.

ಕಾಂಗ್ರೆಸ್ ಪಕ್ಷದಿಂದ ಕೂಡ್ಲಿಗಿ ವಿಧಾನಸಭಾ ಕ್ಷೇತ್ರದಲ್ಲಿ ಸ್ಪರ್ಧೆ ಮಾಡಲು ಅವಕಾಶ ಸಿಗದಿರುವುದು ನೋವನ್ನುಂಟು ಮಾಡಿದೆ. ಆದರೆ ಯಾವ ಕಾರಣಕ್ಕೂ ಬೇರೆ ಪಕ್ಷಕ್ಕೆ ಹೋಗಲಾರೆ ಎಂದು ಪ್ರಶ್ನೆಯೊಂದಕ್ಕೆ ಸ್ಪಷ್ಟಪಡಿಸಿದ ಅವರು ಪಕ್ಷದಲ್ಲಿ ಸಣ್ಣ ಪುಟ್ಟ ತೊಂದರೆಗಳಾಗಿರುವುದನ್ನು ಪಕ್ಷದ ವರಿಷ್ಠರ ಗಮನಕ್ಕೆ ತರಲಾಗಿದ್ದು, ಎಲ್ಲವೂ ಸರಿಯಾಗಲಿದೆ ಎಂಬ ವಿಶ್ವಾಸ ವ್ಯಕ್ತಪಡಿಸಿದರು.

ADVERTISEMENT

ನಿನ್ನೆಯಿಂದ ಸುಮಾರು 60 ಕ್ಕೂ ಹೆಚ್ಚು ಹಳ್ಳಿಗಳಿಂದ ಜನರು ಬಂದು ತಮ್ಮ ಅಭಿಪ್ರಾಯ ಹಂಚಿಕೊಂಡು ಹೋಗಿದ್ದಾರೆ. ಒಂದೆರಡು ದಿನಗಳಲ್ಲಿ ಉಳಿದ ಹಳ್ಳಿಗಳಿಗೆ ಭೇಟಿ ನೀಡಿ ಅವರ ಅಭಿಪ್ರಾಯವನ್ನು ಕೇಳಲಾಗುವುದು. ಬಿ ಫಾರಂ ತಂದವರೆಲ್ಲ ಗೆಲ್ಲಲಾಗದು, ಮತದಾರರ ತೀರ್ಮಾನವೇ ಅಂತಿಮವಾಗಿರುತ್ತದೆ. ಅದರ ಪ್ರಕಾರ ಚುನಾವಣೆ ನಡೆಯುತ್ತದೆ ಎಂದು ತಿಳಿಸಿದರು.

ಬೈಯಣ್ಣ ಗೊಂಚಿಗಾರ, ಕಾಟಮಲ್ಲಿ ಕೊಟ್ರೇಶ್, ನಲ್ಲಮುತ್ತಿ ದುರುಗೇಶ, ಅಜ್ಜಯ್ಯ, ಮಂಜುನಾಥ, ಮಲ್ಲಾಪುರ ನಾಗರಾಜ, ಗುಪ್ಪಾಲ್ ವಿರುಪಾಕ್ಷ, ಎಲ್.ಎಸ್.ರಫಿಕ್, ಬಂಗಾರಪ್ಪ, ಬಿ.ಶಶಿಧರ ಇದ್ದರು.

ಗುಜ್ಜಲ ಆಯ್ಕೆ ಯಾವ ಮಾನದಂಡ

ಕೂಡ್ಲಿಗಿ ಕ್ಷೇತ್ರದ ಜನರು ನನ್ನೊಂದಿಗೆ ಇದ್ದಾರೆ. ಕ್ಷೇತ್ರದಲ್ಲಿ ನಡೆದ ಸಮೀಕ್ಷೆಯಲ್ಲಿ ನಾನು ಮೂರನೇ ಸ್ಥಾನದಲ್ಲಿದ್ದೇನೆ ಎಂದು ವರದಿ ನೀಡಲಾಗಿದೆ. ಅದ್ದರಿಂದ ನಿಮಗೆ ಟಿಕೆಟ್ ನಿರಾಕರಿಸಲಾಗಿದೆ ಎಂದು ಪಕ್ಷದ ವರಿಷ್ಟರು ಹೇಳಿದ್ದಾರೆ. ಆದರೆ ಗುಜ್ಜಲ್ ರಘು ಅವರು ಹೇಗೆ ಮೊದಲ ಸ್ಥಾನಕ್ಕೆ ಬಂದರು ಎಂಬುವುದು ತಿಳಿಯದಾಗಿದೆ. ಕಾಂಗ್ರೆಸ್‌ನಲ್ಲಿ ಕೊನೆಯ ಕ್ಷಣದವರೆಗೂ ಬದಲಾವಣೆಯ ಸಾಧ್ಯತೆ ಇದ್ದು, ನಾಮಪತ್ರ ಸಲ್ಲಿಸುವ ಕೊನೆ ದಿನದವರೆಗೂ ಕಾಯಲಾಗುವುದು ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.