ADVERTISEMENT

ಜರ್ಮನಿ ಸಂಬಂಧ ಬೆಸೆದ ವಿವಾಹ

​ಪ್ರಜಾವಾಣಿ ವಾರ್ತೆ
Published 7 ಫೆಬ್ರುವರಿ 2013, 5:14 IST
Last Updated 7 ಫೆಬ್ರುವರಿ 2013, 5:14 IST
ಸಿರುಗುಪ್ಪದಲ್ಲಿ ಬುಧವಾರ ನೋಂದಣಿ ಅಧಿಕಾರಿ ಕಚೇರಿಯಲ್ಲಿ ಜರ್ಮನಿಯ ಅಲೆಕ್ಸಾಂಡರ್ ಜೊತೆ ವಿವಾಹವಾದ ಪರ್ಲಿನ್ ಸ್ಟೆಫಿ ಅವರೊಂದಿಗೆ  ಸಂಭ್ರಮದಲ್ಲಿ  ಪಾಲ್ಗೊಂಡ ವಿದೇಶಿ ಬಂಧು, ಮಿತ್ರರು.
ಸಿರುಗುಪ್ಪದಲ್ಲಿ ಬುಧವಾರ ನೋಂದಣಿ ಅಧಿಕಾರಿ ಕಚೇರಿಯಲ್ಲಿ ಜರ್ಮನಿಯ ಅಲೆಕ್ಸಾಂಡರ್ ಜೊತೆ ವಿವಾಹವಾದ ಪರ್ಲಿನ್ ಸ್ಟೆಫಿ ಅವರೊಂದಿಗೆ ಸಂಭ್ರಮದಲ್ಲಿ ಪಾಲ್ಗೊಂಡ ವಿದೇಶಿ ಬಂಧು, ಮಿತ್ರರು.   

ಸಿರುಗುಪ್ಪ (ಬಳ್ಳಾರಿ ಜಿಲ್ಲೆ): ಇಲ್ಲಿಯ ಸಮಾಜ ಸೇವಕಿ ಪ್ರೇಮಾ ಕುಂದರಗಿ- ಆನಂದ ಕುಂದರಗಿ ದಂಪತಿಯ ಪುತ್ರಿ ಪರ್ಲಿನ್ ಸ್ಟೆಫಿ (22) ಅವರ ಮದುವೆ ಜರ್ಮನಿಯ ಅಲೆಕ್ಸಾಂಡರ್ (34) ಜೊತೆ ಬುಧವಾರ ಇಲ್ಲಿ ನಡೆಯಿತು.

ಇಲ್ಲಿಯ ಉಪ ನೋಂದಣಾಧಿಕಾರಿ ಕಚೇರಿಯಲ್ಲಿ ಭಾರತೀಯ ವಿಶೇಷ ವಿವಾಹ ಕಾಯ್ದೆ ಪ್ರಕಾರ ವಧು-ವರರು ನೋಂದಣಿ ಪುಸ್ತಕದಲ್ಲಿ ಸಹಿ ಮಾಡಿ, ಪರಸ್ಪರ ಹೂಮಾಲೆ ಬದಲಾಯಿಸಿಕೊಳ್ಳುವ ಮೂಲಕ ವಿವಾಹ ಮಾಡಿಕೊಂಡರು. ಉಪ ನೋಂದಣಾಧಿಕಾರಿ ರಾಘವೇಂದ್ರ ವಿವಾಹದ ನೋಂದಣಿ ಪೂರೈಸಿ ಪ್ರಮಾಣ ಪತ್ರ ನೀಡಿ ನೂತನ ದಂಪತಿಯನ್ನು ಹರಸಿದರು.

ಬಿಬಿಎಂ ಪದವೀಧರರಾದ ಅಲೆಕ್ಸಾಂಡರ್ ಜರ್ಮನಿ ಏರ್‌ಲೈನ್ಸ್ ಉದ್ಯೋಗಿ. ಪರ್ಲಿನ್ ನರ್ಸಿಂಗ್ ಶಿಕ್ಷಣ ಪಡೆದಿದ್ದಾರೆ. ವರ್ಷದ ಹಿಂದೆ ವಿವಾಹ ಮಾತುಕತೆ ನಡೆದಿತ್ತು. ಕಳೆದ ನವೆಂಬರ್ 26ರಂದು ವಿವಾಹಕ್ಕಾಗಿ ಅರ್ಜಿ ಸಲ್ಲಿಸಿದ್ದರು. ಬುಧವಾರ ನಡೆದ ವಿವಾಹ ಸಮಾರಂಭದಲ್ಲಿ ನೂರಕ್ಕೂ ಹೆಚ್ಚು ವಿದೇಶಿಯರು ಭಾಗವಹಿಸಿದ್ದರು.

ಇದೇ 9ರಂದು ಬಳ್ಳಾರಿ ಕೋಟೆಯ ಇಂಗ್ಲಿಷ್ ಚರ್ಚ್‌ನಲ್ಲಿ ಕ್ರಿಶ್ಚಿಯನ್ ಸಂಪ್ರದಾಯದಂತೆ ವಿವಾಹ ನಡೆಯಲಿದೆ ಎಂದು ಕುಟುಂಬದ ಸದಸ್ಯರು ತಿಳಿಸಿದ್ದಾರೆ. ಕರವೇ ಕಾರ್ಯದರ್ಶಿ ಕೆ.ಬಸವರಾಜ, ನೋಂದಣಿ ಪತ್ರಗಾರ ಜಿ.ಶಂಭುಲಿಂಗಯ್ಯ, ಟಿ.ಸಿ.ಮೋಹನ್‌ಕುಮಾರ್ ವಿವಾಹ ನೋಂದಣಿ ಕಾರ್ಯಕ್ಕೆ ನೆರವಾದರು.

ಸಮಾಜ ಸೇವಕಿ ಪ್ರೇಮಾ ಕುಂದರಗಿ `ಹೊಸಬಾಳು' ಸಂಸ್ಥೆ ಕಟ್ಟಿ ದೇವದಾಸಿ ಮಕ್ಕಳಿಗೆ ಪುನರ್ವಸತಿ ಕಲ್ಪಿಸಿದ್ದಾರೆ. ಅಲ್ಲದೆ ನವಜೀವನ ಟ್ರಸ್ಟ್ ಮೂಲಕ ಅನಾಥ ಮಕ್ಕಳಿಗೆ ಶಿಕ್ಷಣ, ವಸತಿ ಕಲ್ಪಿಸುವ ಸೇವೆಯಲ್ಲಿ ತೊಡಗಿದ್ದಾರೆ. ಅವರು ಜರ್ಮನಿಗೆ ಭೇಟಿ ನೀಡಿದ್ದಾಗ ಅಲ್ಲಿಯ ಕುಟುಂಬದೊಂದಿಗೆ ಸ್ನೇಹ ಬೆಳೆದು, ಆ ಕುಟುಂಬದೊಂದಿಗೆ ಸಂಬಂಧ ಬೆಳೆಸಿದ್ದಾರೆ.

ಸ್ವದೇಶಿ ಯುವತಿ, ವಿದೇಶಿ ಯುವಕನ ವಿವಾಹಕ್ಕೆ ವಿದೇಶಿಯರ ತಂಡ ಬಂದಾಗ, ಅವರನ್ನು ನೋಡಲು ಜನರು ಮುಗಿಬಿದ್ದಿದ್ದರು. ನೋಂದಣಿ ಮುಗಿಸಿ ಹೊರಬರುತ್ತಿದ್ದ ಯುವಜೋಡಿಗೆ ಬಂಧುಗಳು, ಸ್ನೇಹಿತರು, ಸಾರ್ವಜನಿಕರು ಹಸ್ತಲಾಘವ ಮೂಲಕ ಶುಭ ಹಾರೈಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.