ADVERTISEMENT

ಜಲಾಶಯ ಇದ್ದೂ ನೀರಿಗಾಗಿ ಹಾಹಾಕಾರ!

ಬಸವರಾಜ ಮರಳಿಹಳ್ಳಿ
Published 24 ಮಾರ್ಚ್ 2014, 8:54 IST
Last Updated 24 ಮಾರ್ಚ್ 2014, 8:54 IST

ಹೊಸಪೇಟೆ: ನಗರದ 20ನೇ ವಾರ್ಡಿನ ಜೆ.ಪಿ.ನಗರದ ಆಶ್ರಯ ಬಡಾವಣೆಗೆ ಒಂದಿ­ಲ್ಲೊಂದು ಸಮಸ್ಯೆ ತಪ್ಪಿದ್ದಲ್ಲ. ಈ ಹಿಂದೆ ಇದ್ದ ಚರಂಡಿ ಸಮಸ್ಯೆ ಈಗ ಬಗೆ ಹರಿಯುವ ನಿಟ್ಟಿನಲ್ಲಿ ಕಾಮಗಾರಿ ನಡೆದಿದ್ದರೂ ಬಡಾವಣೆ ಜನರ ನೀರಿನ ಸಮಸ್ಯೆ ಮಾತ್ರ ಈವರೆಗೂ ನೀಗಿಲ್ಲ.

ಈ ಬಡಾವಣೆಗೆ ಈವರೆಗೂ ನದಿ ನೀರು ಪೂರೈಕೆಯಾಗಿಲ್ಲ. ಅಲ್ಲದೆ ಈಗ ದೊರೆಯುವ ಬೊರ್‌ವೆಲ್‌ ನೀರೂ ಸಮರ್ಪಕವಾಗಿ ದೊರೆಯುತ್ತಿಲ್ಲ. ಅಂದಾಜು 300 ಕುಟುಂಬಗಳು ವಾಸಿ­ಸುವ ಈ ಬಡಾವಣೆಯಲ್ಲಿ ಎರಡೇ ಕೊಳಾಯಿಗಳಿವೆ. ಹಾಗೆಯೇ ಎರಡೂ ಕೊಳವೆಗಳಲ್ಲಿ ಏಕಕಾಲಕ್ಕೆ ನೀರು ಬಿಡಲು ಸಾಧ್ಯವಿಲ್ಲ.

ಇದರಿಂದ ಎರಡೂ ಕೊಳವೆಗಳ ಮೇಲೆ ಅವಲಂಬಿತರಾದ ಜನರು ನೀರಿಗಾಗಿ ಪರಸ್ಪರ ಕಿತ್ತಾಡುವ ಪರಿಸ್ಥಿತಿ ಎದುರಾಗಿದೆ. ಅಲ್ಲದೆ ದಿನವಿಡೀ ತಮ್ಮ ಕೆಲಸ ಕಾರ್ಯಗಳನ್ನು ಬಿಟ್ಟು ನೀರು ತರುವುದೇ ದೊಡ್ಡ ಸಮಸ್ಯೆ­ಯಾಗಿದೆ. ಮಹಿಳೆ­ಯರು, ಮಕ್ಕಳು ಹಾಗೂ ವೃದ್ಧರಾ­ದಿಯಾಗಿ ಬಿಂದಿಗೆ­ಗಳನ್ನು ಹಿಡಿದು­ಕೊಂಡು ಕೊಳಾಯಿ ಬಳಿ ಕಾಯುವ ದೃಶ್ಯ ಬಡಾವಣೆಯಲ್ಲಿ ಸಾಮಾನ್ಯ­ವಾಗಿದೆ.

‘ಬಡಾವಣೆಗೆ ನದಿ ನೀರು ಪೂರೈಸಲು ಕ್ರಮ ಕೈಗೊಳ್ಳಬೇಕು. ಕೊನೆ ಪಕ್ಷ ಈಗ ಪೂರೈಸುತ್ತಿರುವ ಬೊರ್‌ವೆಲ್‌ ನೀರ­ನ್ನಾ­ದರೂ ಸಮರ್ಪಕವಾಗಿ ಪೂರೈಕೆ ಮಾಡುವಂತೆ ಸ್ಥಳೀಯ ಜನಪ್ರತಿನಿಧಿ­ಗಳಿಗೆ ಹಾಗೂ ನಗರಸಭೆ ಅಧಿಕಾರಿ­ಗಳಿಗೆ ಹಲವಾರು ಬಾರಿ ಮನವಿ ಮಾಡಿಕೊಂಡಿದ್ದೇವೆ. ಆದರೆ ನಮ್ಮ ಮನವಿಗೆ ಈವರೆಗೂ ಯಾವುದೆ ಸ್ಪಂದನೆ ಸಿಕ್ಕಿಲ್ಲ’ ಎಂದು ಬಡಾವಣೆಯ ನಿವಾಸಿಗಳು ಅಸಮಾಧಾನ ವ್ಯಕ್ತಪಡಿಸು­ತ್ತಿ­­ದ್ದಾರೆ.

ಕೇವಲ ಚುನಾವಣೆ ಸಮಯ­ದಲ್ಲಿ ಮತ ಕೇಳಲು ಬರುವ ವಿವಿಧ ಪಕ್ಷಗಳ ಮುಖಂಡರು ನಮ್ಮ ಸಮಸ್ಯೆ ಕೇಳಲು ಒಂದು ದಿನವೂ ನಮ್ಮ ಬಳಿ ಬಂದಿಲ್ಲ. ಈ ಕಾರಣದಿಂದ ಮುಂಬರುವ ಲೋಕ­ಸಭಾ ಚುನಾವಣೆ­ಯನ್ನು ಬಹಿಷ್ಕರಿಸು­ತ್ತೇವೆ ಎಂದು ಇಲ್ಲಿನ ನಿವಾಸಿಗಳು ಎಚ್ಚರಿಸಿದ್ದಾರೆ.

ಜಲಾಶಯವಿದ್ದರೂ ನೀರಿಲ್ಲ:   ನಗ­ರದ ಪಕ್ಕದಲ್ಲಿಯೆ ಜೀವನಾಡಿ ತುಂಗ­ಭದ್ರಾ ನದಿ ಹರಿದಿದೆ. ಅಲ್ಲದೆ ಅಪಾರ ನೀರು ಸಂಗ್ರಹಿಸುವ ಸಾಮರ್ಥ್ಯ ಹೊಂದಿದ ತುಂಗಭದ್ರಾ ಡ್ಯಾಂ ಇದೆ. ಈ ಡ್ಯಾಂನಲ್ಲಿ ಸಂಗ್ರಹವಾಗುವ ನೀರನ್ನು ನೂರಾರು ಗ್ರಾಮಗಳು ಹಾಗೂ ನಗರಗಳಿಗೆ ಕುಡಿಯಲು ಸರಬರಾಜು ಮಾಡಲಾಗುತ್ತಿದೆ.

ಆದರೆ, ಹೊಸಪೇಟೆ ನಗರದಿಂದ ಕೂಗಳತೆ ದೂರದಲ್ಲಿರುವ ಈ ಜಲಾಶ­ಯದ ನೀರು ಇಲ್ಲಿನ ಆಶ್ರಯ ಬಡಾವಣೆ ಜನರಿಗೆ ಲಭ್ಯವಿಲ್ಲ. ನಗರದ ಕೆಲವು ಬಡಾವಣೆಗಳಲ್ಲಿ ಬೋರ್‌ವೆಲ್‌ ನೀರೇ ಗತಿಯಾಗಿದೆ.

‘ಇತರ ಬಡಾವಣೆ­ಗಳಿಗೆ ಪೂರೈಕೆ­ಯಾ­ಗು­­ತ್ತಿರುವ ನದಿ ನೀರನ್ನು ನಮಗೂ ಪೂರೈಸುವಂತೆ ಹಲವಾರು ಬಾರಿ ಮನವಿ ಮಾಡಿಕೊಂಡಿದ್ದೇವೆ. ಆದರೆ ಯಾವುದೇ ಪ್ರಯೋಜನ­ವಾಗಿಲ್ಲ. ಅಲ್ಲದೆ ಈಗ ಪೂರೈಕೆ­ಯಾಗುತ್ತಿರುವ ಬೋರ್‌ವೆಲ್‌ ನೀರನ್ನಾದರೂ ಸಮ­ರ್ಪಕ­ವಾಗಿ ಪೂರೈಸುವಂತೆ ಕೇಳಿ­ಕೊಂಡರೂ ನಮ್ಮ ಧ್ವನಿ ಅಧಿಕಾರಿಗಳ ಕಿವಿಗೆ ಬೀಳುತ್ತಿಲ್ಲ’ ಎಂದು ಬಡಾ­ವಣೆಯ ಇಸ್ಮಾಯಿಲ್‌ ಬಡಾವಲಿ ಆರೋಪಿಸುತ್ತಾರೆ.

ಈ ಕುರಿತು ‘ಪ್ರಜಾವಾಣಿ’ಯೊಂದಿಗೆ ಮಾತನಾಡಿದ ನಗರಸಭೆ ಆಯುಕ್ತ ಮಹ್ಮದ್‌ ಮುನೀರ್‌ ಅವರು, ‘ನದಿ ನೀರು ಪೂರೈಕೆಗಾಗಿ ಕಾಮಗಾರಿ ಆರಂಭಿ­ಸಲಾಗುವುದು. ಸದ್ಯಕ್ಕೆ ಕುಡಿ­ಯುವ ನೀರಿನ ಸಮಸ್ಯೆ ಪರಿಹಾರಕ್ಕಾಗಿ ಎರಡು ಕೊಳಾಯಿಗಳ ಮೂಲಕ ಬೋರ್‌ವೆಲ್‌ ನೀರನ್ನು ಸರಬರಾಜು ಮಾಡಲಾಗುತ್ತಿದೆ. ಸಮರ್ಪಕ ನೀರು ಪೂರೈಕೆ ಕುರಿತು ಕ್ರಮ ಜರುಗಿಸಲಾಗು­ವುದು’ ಎಂದು ತಿಳಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.