ADVERTISEMENT

ಜಿಲ್ಲೆಯಲ್ಲಿ ಕಾಂಗ್ರೆಸ್‌ ಪಲ್ಟಿ ಹೊಡೆಯಲಿದೆ

ವಿರೋಧ ಪಕ್ಷದ ನಾಯಕ ಕೆ.ಎಸ್‌.ಈಶ್ವರಪ್ಪ ಭವಿಷ್ಯ

​ಪ್ರಜಾವಾಣಿ ವಾರ್ತೆ
Published 7 ಮೇ 2018, 8:09 IST
Last Updated 7 ಮೇ 2018, 8:09 IST

ಸಿರುಗುಪ್ಪ: ‘ಬಳ್ಳಾರಿ ಜಿಲ್ಲೆಯಲ್ಲಿ ಈ ಬಾರಿ ಕಾಂಗ್ರೆಸ್ ಪಲ್ಟಿ ಹೊಡೆಯಲಿದೆ. 9 ಕ್ಷೇತ್ರಗಳಲ್ಲಿಯೂ ಬಿಜೆಪಿ ಅಭ್ಯರ್ಥಿಗಳು ಜಯಗಳಿಸಲಿದ್ದಾರೆ’ ಎಂದು ವಿರೋಧ ಪಕ್ಷದ ನಾಯಕ ಕೆ.ಎಸ್‌.ಈಶ್ವರಪ್ಪ ವಿಶ್ವಾಸ ವ್ಯಕ್ತಪಡಿಸಿದರು.

ತಾಲ್ಲೂಕಿನ ರಾರಾವಿ ಗ್ರಾಮದಲ್ಲಿ ಭಾನುವಾರ ಬಿಜೆಪಿ ಅಭ್ಯರ್ಥಿ ಎಂ.ಎಸ್‌.ಸೋಮಲಿಂಗಪ್ಪ ಪರ ರೋಡ್‌ ಷೋ ನಡೆಸಿ ಅವರು ಮಾತನಾಡಿದರು.

‘ಕಳೆದ ಚುನಾವಣೆಯಲ್ಲಿ ಪಕ್ಷದಲ್ಲಿನ ಭಿನ್ನಭಿಪ್ರಾಯಗಳಿದ್ದವು. ಬಲಿಷ್ಠ ನಾಯಕ ಯಡಿಯೂರಪ್ಪ ಹಾಗೂ ಶ್ರೀರಾಮುಲು ಪ್ರತ್ಯೇಕವಾಗಿ ಚುನಾವಣೆಗೆ ತೆರಳಿದ್ದರು. ಇದರಿಂದ ಕಾಂಗ್ರೆಸ್ ಅಧಿಕಾರಕ್ಕೆ ಬರಲು ಸಾಧ್ಯವಾಯಿತು' ಎಂದು’ ಹೇಳಿದರು.

ADVERTISEMENT

‘ಈ ಇಬ್ಬರು ನಾಯಕರು ಮರಳಿ ಬಿಜೆಪಿಗೆ ಬಂದಿದ್ದಾರೆ. ಪಕ್ಷ ಕಲ್ಲು ಬಂಡೆಯಷ್ಟು ಗಟ್ಟಿಯಾಗಿದೆ. ಯಾವ ಮಾಧ್ಯಮಗಳು ಎಷ್ಟೇ ಸಮೀಕ್ಷೆ ಮಾಡಿದರೂ ಅವು ತಲೆಕೆಳಗೆ ಆಗಲಿವೆ. ರಾಜ್ಯದಲ್ಲಿ ಬಿಜೆಪಿ ಅಧಿಕಾರಕ್ಕೆ ಬರುವುದು ಖಚಿತ’ ಎಂದು ಪ್ರತಿಪಾದಿಸಿದರು.

‘ಕಳೆದ ಚುನಾವಣೆಯಲ್ಲಿ ಬಿಜೆಪಿಯಲ್ಲಿನ ಭಿನ್ನಮತ ಹಾಗೂ ಕೆಜೆಪಿ. ಬಿಎಸ್ಆರ್ ಪಕ್ಷಗಳಾಗಿ ಮತ ವಿಭಜನೆಗೊಂಡಿದ್ದವು. ಲಾಟರಿ ಹೊಡೆದಂತೆ ಸಿದ್ದರಾಮಯ್ಯ ಮುಖ್ಯಮಂತ್ರಿಯಾಗಿದ್ದಾರೆ. ದೇಶದ 21 ರಾಜ್ಯದಲ್ಲಿ ಬೇಡವಾಗಿರುವ ಕಾಂಗ್ರೆಸ್ ನಮಗೂ ಬೇಡ ಎಂದು ಪ್ರತಿಯೊಬ್ಬ ಮತದಾರರು ನಿರ್ಧಾರ ಮಾಡಿದ್ದಾರೆ’ ಎಂದರು.

‘ಹಣ ಇದೆ ಎಂದು ದೂರದ ಬೆಂಗಳೂರಿನಿಂದ ಇಲ್ಲಿಗೆ ಬಂದು ಚುನಾವಣೆಗೆ ನಿಂತಿರುವ ಕಾಂಗ್ರೆಸ್ ಅಭ್ಯರ್ಥಿ ಮುರಳಿ ಕೃಷ್ಣರನ್ನು ಕ್ಷೇತ್ರದ ಜನತೆ ಯಲಹಂಕಕ್ಕೆ ವಾಪಾಸ್ ಕಳುಹಿಸುವುದು ಖಚಿತ. ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಹಣದಿಂದ ಮತ ಪಡೆದು ಅಧಿಕಾರಕ್ಕೆ ಬರಬಹುದು ಎನ್ನುವ ಭ್ರಮೆಯಲ್ಲಿರುವ ಕಾಂಗ್ರೆಸ್‌ಗೆ ಜನತೆ ತಕ್ಕ ಪಾಠ ಕಲಿಸಬೇಕಾಗಿದೆ’ ಎಂದು ಮನವಿ ಮಾಡಿದರು.

ನಂತರ ಪತ್ರಕರ್ತರೊಂದಿಗೆ ಮಾತನಾಡಿದ ಅವರು, ‘ರಾಜ್ಯದಲ್ಲಿ ಬಿಜೆಪಿ ಅಧಿಕಾರಕ್ಕೆ ತರುವಲ್ಲಿ ಪಕ್ಷದ ಅಮಿತ್‌ ಶಾ ನರೇಂದ್ರ ಮೋದಿ ಇಬ್ಬರೂ ಅಖಾಡಕ್ಕೆ ಇಳಿದಿದ್ದಾರೆ. ‘ಮಿಷನ್ 150’ಗಿಂತಲೂ ಹೆಚ್ಚು ಸ್ಥಾನಗಳಲ್ಲಿ ಬಿಜೆಪಿ ಜಯಗಳಿಸುವುದು ಖಚಿತ’ ಎಂದರು.

ಬಿಜೆಪಿ ಜಿಲ್ಲಾ ಅಧ್ಯಕ್ಷ ಚನ್ನಬಸವನಗೌಡ, ತಾಲ್ಲೂಕು ಘಟಕದ ಅಧ್ಯಕ್ಷ ಕೆ.ನಾಗರಾಜಗೌಡ, ವಿಭಾಗೀಯ ಸಂಘಟನಾ ಕಾರ್ಯದರ್ಶಿ ಅನಿಲ್‌ನಾಯ್ಡು,ಮುಖಂಡರಾದ ಚೊಕ್ಕಬಸವನಗೌಡ, ಮುರಾರಿಗೌಡ, ತಿಮ್ಮಾರೆಡ್ಡಿ, ಎಂ.ಪಂಪಾಪತಿಶೆಟ್ಟಿ, ಡಿ.ಸೋಮಪ್ಪ, ಗಂಗಾರಾಮ್‌ಸಿಂಗ್‌, ಶಿವರುದ್ರಗೌಡ, ಕೆ.ಕ್ರಿಷ್ಣ, ಜಿ.ಸಿದ್ದಪ್ಪ, ಕೆ.ನಾಗೇಶಪ್ಪ, ವೆಂಕಟಪ್ಪನಾಯಕ ಇದ್ದರು.

**
ಕಳೆದ ಬಾರಿ ಮತ ವಿಭಜನೆ ಆಗಿತ್ತು. ಬಿಜೆಪಿ, ಕೆಜೆಪಿ, ಬಿಎಸ್‌ಆರ್‌ ಕಾಂಗ್ರೆಸ್‌ಗೆ ಮತ ಹಂಚಿಹೋಗಿದ್ದವು. ಈ ಬಾರಿ ಪರಿಸ್ಥಿತಿ ನಮಗೆ ಅನುಕೂಲವಾಗಿದೆ
- ಕೆ.ಎಸ್‌.ಈಶ್ವರಪ್ಪ, ವಿರೋಧ ಪಕ್ಷದ ನಾಯಕ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.