ADVERTISEMENT

ಜಿಲ್ಲೆಯಾದ್ಯಂತ ವಿಶ್ವ ತಂಬಾಕು ವಿರೋಧಿ ದಿನಾಚರಣೆ

​ಪ್ರಜಾವಾಣಿ ವಾರ್ತೆ
Published 1 ಜೂನ್ 2018, 12:15 IST
Last Updated 1 ಜೂನ್ 2018, 12:15 IST

ಬಳ್ಳಾರಿ: ವಿಶ್ವ ತಂಬಾಕು ರಹಿತ ದಿನಾಚರಣೆ ಅಂಗವಾಗಿ ನಗರದ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಅಧಿಕಾರಿಗಳ ಕಚೇರಿ ಆವರಣದಿಂದ ಗುರುವಾರ ಹಮ್ಮಿಕೊಂಡಿದ್ದ ದುಷ್ಪರಿಣಾಗಳ ಕುರಿತು ಅರಿವು ಮೂಡಿಸುವ ಜಾಗೃತಿ ರ್‍ಯಾಲಿಗೆ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಎಸ್.ಬಿ.ಹಂದ್ರಾಳ್ ಮತ್ತು ಹೆಚ್ಚುವರಿ ಜಿಲ್ಲಾಧಿಕಾರಿ ಸತೀಶಕುಮಾರ್ ಅವರು ಚಾಲನೆ ನೀಡಿದರು.

ಕಚೇರಿ ಆವರಣದಿಂದ ಆರಂಭವಾದ ರ್‍ಯಾಲಿ ಕೆಸಿ ರಸ್ತೆ, ಮೀನಾಕ್ಷಿ ವೃತ್ತ, ಜಿಲ್ಲಾಧಿಕಾರಿ ಕಚೇರಿ, ರಾಯಲ್ ವೃತ್ತ, ಅನಂತಪುರ ರಸ್ತೆ, ಸಂಗಮ್ ವೃತ್ತ ಮರಳಿ ಕುಟುಂಬ ಕಲ್ಯಾಣ ಅಧಿಕಾರಿಯ ಕಚೇರಿ ಆವರಣದಲ್ಲಿ ಸಮಾಪ್ತಿಗೊಂಡಿತು.

ರ‍್ಯಾಲಿಯಲ್ಲಿ ತಂಬಾಕು ಆರೋಗ್ಯಕ್ಕೆ ಮಾರಕ, ತಮ್ಮ ಜೀವನ ಸಿಗರೇಟಿಗೆ ತಂಬಾಕಿಗೆ ನೀಡದಿರಿ, ನೀನು ಸಿಗರೇಟು ಸುಡಬೇಡ;ಅದು ನಿನ್ನನ್ನು ಸುಡುತ್ತದೆ,ಹೊಗೆ ಬಿಡಲು ಹೊಗೆ ಹಾಕಿಸಿಕೊಳ್ಳಬೇಡಿ, ತಂಬಾಕು ಶಿಶುವಿನ ಬೆಳವಣಿಗೆಗೆ ಮಾರಕ, ತಂಬಾಕು ಕ್ಯಾನ್ಸ್‌ರ್‌ಗೆ ಕಾರಣ ಎಂಬುದು ಸೇರಿದಂತೆ ತಂಬಾಕಿನಿಂದ ಉಂಟಾಗುವ ವಿವಿಧ ದುಷ್ಪರಿಣಾಮಗಳ ಫಲಕಗಳನ್ನು ನರ್ಸಿಂಗ್ ಹಗೂ ಆಶಾ ಕಾರ್ಯಕರ್ತೆಯರು ಹಿಡಿದುಕೊಂಡು ನಡೆದದ್ದು ಗಮನ ಸೆಳೆಯಿತು.

ADVERTISEMENT

ನಂತರದಲ್ಲಿ ನಗರದ ಹಳೆ ಬಸ್‌ನಿಲ್ದಾಣದಲ್ಲಿ ಬಾಯಿ ಕ್ಯಾನ್ಸರ್ ತಪಾಸಣಾ ಶಿಬಿರವನ್ನು ನಡೆಸಲಾಯಿತು. ಸುಮಾರು ನೂರಕ್ಕೂ ಹೆಚ್ಚು ಪ್ರಯಾಣಿಕರಿಗೆ ಹಾಗೂ ಸಾರಿಗೆ ಇಲಾಖೆಯ ಸಿಬ್ಬಂದಿಗಳಿಗೆ ಬಾಯಿ ಕ್ಯಾನ್ಸರ್ ಮಧುಮೇಹ ಸಕ್ಕರೆ ಇತ್ಯಾಧಿ ಆರೋಗ್ಯ ತಪಾಸಣೆಯನ್ನು ಸ್ಥಳದಲ್ಲಿಯೆ ಕೈಗೊಂಡು ಆರೋಗ್ಯ ಜಾಗೃತಿಯನ್ನು ಮೂಡಿಸಲಾಯಿತು. ಜಿಲ್ಲಾ ಸರ್ವೆಲೆನ್ಸ್ ಅಧಿಕಾರಿ ಡಾ. ಆರ್. ಅನಿಲ್ ಕುಮಾರ್ ಪ್ರಾಸ್ತಾವಿಕವಾಗಿ ಮಾತನಾಡಿದರು.ಡಾ. ಸುರೇಶ ಉಪನ್ಯಾಸ ನೀಡಿದರು.

ಜಿಲ್ಲಾ ಆಡಳಿತ, ಜಿಲ್ಲಾ ಪಂಚಾಯಿತಿ, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ, ವಿಮ್ಸ್, ಜಿಲ್ಲಾ ಆಸ್ಪತ್ರೆ ಹಾಗೂ ಜಿಲ್ಲಾ ತಂಬಾಕು ನಿಯಂತ್ರಣ ಕೋಶ ಜಂಟಿಯಾಗಿ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಡಿಎಚ್‍ಒ ಡಾ.ಜಿ.ರಮೇಶ್ ಬಾಬು ಅಧ್ಯಕ್ಷತೆ ವಹಿಸಿದ್ದರು. ವಿಮ್ಸ್ ನಿರ್ದೇಶಕ ಡಾ.ಪ್ರಭಂಜನ ಕುಮಾರ, ಚಂದ್ರಶೇಖರ್, ಡಾ.ಎನ್ ಬಸರೆಡ್ಡಿ, ಡಾ.ರವೀಂದ್ರ ನಾಥ ಡಾ.ರಾಜಶೇಖರ ರೆಡ್ಡಿ. ಡಾ. ಕಟ್ಟಿಮನಿ. ಡಾ.ಸಮೀನಾ, ಡಾ.ನೀತಾ, ಡಾ.ಪೂರ್ಣಿಮಾ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.