ADVERTISEMENT

ಡೆಂಗೆಯಿಂದ ತತ್ತರವಾದ ಗಡಿಗ್ರಾಮ ಊಳೂರು

​ಪ್ರಜಾವಾಣಿ ವಾರ್ತೆ
Published 15 ಅಕ್ಟೋಬರ್ 2012, 5:05 IST
Last Updated 15 ಅಕ್ಟೋಬರ್ 2012, 5:05 IST

ಸಿರುಗುಪ್ಪ: ತಾಲ್ಲೂಕಿನ ಗಡಿಭಾಗದ ಊಳೂರು ಗ್ರಾಮಲ್ಲಿ ಶಂಕಿತ ಡೆಂಗೆ ಜ್ವರ ಉಲ್ಬಣದಿಂದ ಇಬ್ಬರು ಮಕ್ಕಳು ಬಲಿಯಾಗಿ ನೂರಾರು ಜನರಿಗೆ ತೀವ್ರ ಜ್ವರದಿಂದ ಬಳಲುತ್ತಿರುವ ಪ್ರಕರಣ ತಡವಾಗಿ ಬೆಳಕಿಗೆ ಬಂದಿದೆ.

ಶಂಕಿತ ಜ್ವರದಿಂದ ಭೀಮೇಶ (4) ಮಹಾಂತೇಶ (10 ತಿಂಗಳು) ಎಂಬ ಬಾಲಕರು ಈಗಾಗಲೇ ಬಲಿ ಆಗಿದ್ದಾರೆ ಎನ್ನಲಾಗಿದೆ.   ಕಳೆದ ಒಂದು ತಿಂಗಳಿಂದ ಈ ಗ್ರಾಮದ ಪ್ರತಿಯೊಂದು ಕುಟುಂಬದಲ್ಲಿ ಹಲವಾರು ಮಂದಿಗೆ ಈ ಜ್ವರ ಕಾಣಿಸಿಕೊಂಡು ರೋಗ ಬಾಧೆಯಿಂದ ನರಳುತ್ತಿರುವುದು ಸಾಮಾನ್ಯವಾಗಿದೆ.

ಗ್ರಾಮದ 60 ಕ್ಕೂ ಹೆಚ್ಚು ಜ್ವರ ಪೀಡಿತರು ಬಳ್ಳಾರಿಯ ಖಾಸಗಿ ಮತ್ತು ಸರ್ಕಾರಿ ಆಸ್ಪತ್ರೆಗಳಿಗೆ ತೆರಳಿ ಚಿಕಿತ್ಸೆ ಪಡೆದಿದ್ದಾರೆ, ಭಾನುವಾರವೂ ಸಹ ಗ್ರಾಮದ 4ಜನರು ತೀವ್ರ ಜ್ವರದಿಂದ ಬಳಲುತ್ತಿರುವ ರೋಗಿಗಳನ್ನು ಬಳ್ಳಾರಿ ಯಲ್ಲಿ ಚಿಕಿತ್ಸೆಗೆ ದಾಖಲಿಸಲಾಗಿದೆ ಎಂದು ಗ್ರಾಮಸ್ಥರು ಅತಂಕ ವ್ಯಕ್ತಪಡಿಸಿದರು.

ಇಲ್ಲಿಯ ಗ್ರಾಮ ಪಂಚಾಯ್ತಿ ಅಧ್ಯಕ್ಷರ ಮನೆಯಲ್ಲಿಯೇ 5 ಜನರಿಗೆ ಶಂಕಿತ ಡೆಂಗೆ ಜ್ವರದಿಂದ ಬಳಲುತ್ತಿ ರುವುದು ಸಾಕ್ಷಿಯಾಗಿದೆ. ಆರೋಗ್ಯ ಇಲಾಖೆಯವರು ಬಂದ್ರು ನೋಡಿದ್ರು ತಿಳುವಳಿಕೆ ಹೇಳಿ ಹೋದ್ರು ಅಂತ ಗ್ರಾಮದ ರಂಗಪ್ಪ ತಿಳಿಸಿದರು.

ಕಳೆದ ಒಂದು ತಿಂಗಳಿನಿಂದ ಜ್ವರದಿಂದ ಬಳಲುವವರ ಸಂಖ್ಯೆ ದಿನದಿಂದ ದಿನಕ್ಕೆ ಹೆಚ್ಚುತ್ತಿದೆ ಎಂದು ಗ್ರಾ.ಪಂ. ಅಧ್ಯಕ್ಷ ನೆಣಿಕೆಪ್ಪ ಸ್ಪಷ್ಟಪಡಿಸಿ ಈ ಬಗ್ಗೆ ಜಿಲ್ಲಾ ಆರೋಗ್ಯಾಧಿಕಾರಿಗೆ ಮಾಹಿತಿ ಒದಗಿಸಿದ್ದೇವೆ ಆದರೆ ಏನು ಪ್ರಯೋಜನವಾಗಿಲ್ಲ ಎಂದರು. 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.