ADVERTISEMENT

ತಜ್ಞರೊಂದಿಗೆ ಚರ್ಚಿಸದೇ ಕೃಷಿ ಬಜೆಟ್ ಸಲ್ಲ

​ಪ್ರಜಾವಾಣಿ ವಾರ್ತೆ
Published 5 ಫೆಬ್ರುವರಿ 2011, 7:20 IST
Last Updated 5 ಫೆಬ್ರುವರಿ 2011, 7:20 IST

ಬಳ್ಳಾರಿ: ರಾಜ್ಯ ಸರ್ಕಾರವು ಕೃಷಿಗೆ ಪ್ರತ್ಯೇಕ ಬಜೆಟ್ ಮಂಡಿಸಲು ಮುಂದಾಗಿರುವ ಕ್ರಮ ಸ್ವಾಗತಾರ್ಹ. ಆದರೆ, ರೈತರು, ಕೃಷಿ ತಜ್ಞರೊಂದಿಗೆ ಚರ್ಚಿಸದೆ, ಅವರ ಸಲಹೆಯನ್ನು ಪಡೆಯದೆ ಕೃಷಿ ಬಜೆಟ್ ಮಂಡಿಸುತ್ತಿರುವ ಸರ್ಕಾರದ ಕ್ರಮ ಸರಿಯಲ್ಲ ಎಂದು ರೈತ ಮುಖಂಡ, ಕೇಂದ್ರದ ಮಾಜಿ ಸಚಿವ ಬಾಬಾಗೌಡ ಪಾಟೀಲ ತಿಳಿಸಿದರು.

ಶುಕ್ರವಾರ ಪತ್ರಿಕಾಗೋಷ್ಠಿಯಲ್ಲಿ ಈ ವಿಷಯ ತಿಳಿಸಿದ ಅವರು, ಪ್ರತ್ಯೇಕ ಕೃಷಿ ಬಜೆಟ್ ಮಂಡಿಸುವಂತೆ ರೈತರ ಅನೇಕ ದಿನಗಳ ಬೇಡಿಕೆ ಇತ್ತು. ಆದರೆ, ಸರ್ಕಾರ ದಿಢಿೀರ್ ಆಗಿ ಪ್ರತ್ಯೇಕ ಬಜೆಟ್ ಮಂಡಿಸಲು ಹೊರಟಿರುವುದರ ಹಿಂದೆ ರಾಜಕೀಯ ತಂತ್ರಗಾರಿಕೆ, ರೈತರನ್ನು ಮರುಳು ಮಾಡುವ ಉದ್ದೇಶ ಅಡಗಿರಬಹುದು ಎಂಬ ಶಂಕೆ ವ್ಯಕ್ತಪಡಿಸಿದರು.ಕೇಂದ್ರವು ರೈಲ್ವೆಗಾಗಿ ಪ್ರತ್ಯೇಕ ಬಜೆಟ್ ಮಂಡಿಸುವಂತೆ ಸಾಮಾನ್ಯ ಬಜೆಟ್‌ಗೆ ಮೊದಲೇ ಕೃಷಿ ಬಜೆಟ್ ಮಂಡಿಸಬೇಕು. ಅದರ ಬದಲಿಗೆ, ಕೃಷಿಗೆ ಕಾದಿರಿಸುವ ಅನುದಾನದ ಮೊತ್ತವನ್ನು ಸಾಮಾನ್ಯ ಬಜೆಟ್‌ನಲ್ಲಿ ಕೃಷಿ ಸಚಿವರು ಓದುವ ಪ್ರಕ್ರಿಯೆ ಸರಿಯಲ್ಲ ಎಂದು ಸಲಹೆ ನೀಡಿದರು.

ಬೇಜವಾಬ್ದಾರಿ ಹೇಳಿಕೆ: ರೈತರ ಒಪ್ಪಿಗೆ ಪಡೆದೇ ಕೃಷಿ ಭೂಮಿಯನ್ನು ಕೈಗಾರಿಕೆ ಗಾಗಿ ವಶಪಡಿಸಿಕೊಳ್ಳಲಾಗುತ್ತಿದೆ ಎಂಬ ಹೇಳಿಕೆ ನೀಡುತ್ತಿರುವ ಸಚಿವರು, ಮುಖ್ಯಮಂತ್ರಿಯವರು ಬೇಜವಾಬ್ದಾರಿಯಿಂದ ವರ್ತಿಸುತ್ತಿದ್ದಾರೆ ಎಂದು ಆರೋಪಿಸಿದರು.ಹಣದ ಅಗತ್ಯವಿರುವ ರೈತರು ಕೃಷಿ ಭೂಮಿ ನೀಡಲು ಒಪ್ಪಿಗೆ ಸೂಚಿಸಿದ್ದಾರೆ ಎಂಬುದನ್ನೇ ಈ ರೀತಿ ಅರ್ಥೈಸಿಕೊಂಡು, ಆಹಾರ ಉತ್ಪಾದನೆಯನ್ನೇ ಮರೆಯುತ್ತಿರುವ ಸರ್ಕಾರದ ಧೋರಣೆ ಸರಿಯಲ್ಲ ಎಂದರು.

ಜನಹಿತ ಮರೆತು, ಜನವಿರೋಧಿ ಧೋರಣೆ ಅನುಸರಿಸುತ್ತಿರುವ ಸಚಿವರು ಜವಾಬ್ದಾರಿಯಿಂದ ವರ್ತಿಸಬೇಕು ಎಂದು ಅವರು ತಿಳಿಸಿದರು.ಪ್ರವಾಸೋದ್ಯಮ, ವಿಮಾನ ನಿಲ್ದಾಣ, ಉದ್ಯಾನವನ, ಕೈಗಾರಿಕೆಗಳ ಹೆಸರಿನಲ್ಲಿ ರೈತರ ಸಾವಿರಾರು ಎಕರೆ ಕೃಷಿ ಭೂಮಿಯನ್ನು ವಶಪಡಿಸಿಕೊಳ್ಳುವುದು ಅಪಾಯಕಾರಿ ಎಂದು ಅವರು ದೂರಿದರು.ಕೃಷಿಕ ಸಮಾಜದ ಜಿಲ್ಲಾ ಘಟಕದ ಅಧ್ಯಕ್ಷ ಎಚ್. ಲಕ್ಷ್ಮಿಕಾಂತರೆಡ್ಡಿ, ರೈತ ಮುಖಂಡ ಹನುಮಗೌಡ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.