ADVERTISEMENT

ತಹಶೀಲ್ದಾರ್‌ ವಿರುದ್ಧ ನ್ಯಾಯಾಧೀಶರು ಗರಂ

ತಂಬಾಕು ರಹಿತ ಜನಜಾಗೃತಿ ಜಾಥಾದಲ್ಲಿ ಭಾಗವಹಿಸದ ಹಿನ್ನೆಲೆ

​ಪ್ರಜಾವಾಣಿ ವಾರ್ತೆ
Published 1 ಜೂನ್ 2018, 12:16 IST
Last Updated 1 ಜೂನ್ 2018, 12:16 IST

ಹಗರಿಬೊಮ್ಮನಹಳ್ಳಿ: ಇಲ್ಲಿನ ತಹಶೀಲ್ದಾರ್ ಕಚೇರಿ ಬಳಿ ತಾಲ್ಲೂಕು ಆಡಳಿತದಿಂದ ಗುರುವಾರ ಹಮ್ಮಿಕೊಂಡಿದ್ದ ವಿಶ್ವ ತಂಬಾಕು ರಹಿತ ದಿನಾಚರಣೆಯ ಜನ ಜಾಗೃತಿ ಜಾಥಾ ಕಾರ್ಯಕ್ರಮದಲ್ಲಿ ಭಾಗವಹಿಸದ ಹಿನ್ನೆಲೆಯಲ್ಲಿ ಸಿವಿಲ್‌ ನ್ಯಾಯಾಲಯದ ನ್ಯಾಯಾಧೀಶ ವಿಜಯಕುಮಾರ್ ಜಟ್ಲಾ ಅವರು ತಹಶೀಲ್ದಾರ್‌ ಎಸ್‌.ಮಹಾಬಲೇಶ್ವರ್‌ ಅವರನ್ನು ತರಾಟೆಗೆ ತೆಗೆದುಕೊಂಡರು.

ತಹಶೀಲ್ದಾರ್‌ ಕಚೇರಿಯ ಪಕ್ಕದಲ್ಲೇ ಕಾರ್ಯಕ್ರಮ ನಡೆಯುತ್ತಿದ್ದರೂ ಭಾಗವಹಿಸದಿದ್ದಕ್ಕೆ ಅಸಮಾಧಾನ ವ್ಯಕ್ತಪಡಿಸಿದರು. ಹಿರಿಯ ಶ್ರೇಣಿ ನ್ಯಾಯಾಧೀಶ ಬಿ.ಚಂದ್ರಶೇಖರ್‌, ನ್ಯಾಯಾಧೀಶ ವಿಜಯಕುಮಾರ್ ಜಟ್ಲಾ ಚಾಲನೆ ನೀಡಿದರು. ಅಧಿಕಾರಿಗಳು ಜನಸಾಮಾನ್ಯರ ಹಿತಕ್ಕಾಗಿ ಕೆಲಸ ಮಾಡಬೇಕು. ಎಲ್ಲ ಇಲಾಖೆಗಳ ಅಧಿಕಾರಿಗಳು ಸರ್ಕಾರ ಹಮ್ಮಿಕೊಳ್ಳುವ ಸಾಮಾಜಿಕ ಕಳಕಳಿ ಹೊಂದಿರುವ ಕಾರ್ಯಕ್ರಮಗಳಲ್ಲಿ ಕಡ್ಡಾಯವಾಗಿ ಭಾಗವಹಿಸುವಂತೆ ನ್ಯಾಯಾಧೀಶರು ಸೂಚಿಸಿದರು.

ಕಾರ್ಯಕ್ರಮದಲ್ಲಿ ಕೇವಲ ಫೋಟೊ ಪೋಸ್ ಕೊಡೋದಲ್ಲ, ಸಂಪೂರ್ಣ ಜಾಥಾದಲ್ಲಿ ಪಾಲ್ಗೊಳ್ಳಬೇಕು ಎಂದು ತಾಕೀತು ಮಾಡಿದರು. ಪಟ್ಟಣದ ಪ್ರಮುಖ ಬೀದಿಗಳಲ್ಲಿ ಜಾಥಾ ಸಂಚರಿಸಿತು. ಆಗ ಸ್ಥಳಕ್ಕೆ ಬಂದ ಹೊಸಪೇಟೆ ಉಪವಿಭಾಗಾಧಿಕಾರಿ ಗಾರ್ಗಿ ಜೈನ್‌ ಮತ್ತೊಮ್ಮೆ ಕಾರ್ಯಕ್ರಮಕ್ಕೆ ಚಾಲನೆ ನೀಡಿ ನ್ಯಾಯಾಲಯದ ಕಲಾಪ ಇದ್ದುದರಿಂದ ತಹಶೀಲ್ದಾರ್ ಕಚೇರಿಗೆ ತೆರಳಿದರು. ತಾಲ್ಲೂಕು ಪಂಚಾಯಿತಿ ಕಾರ್ಯನಿರ್ವಾಹಕ ಅಧಿಕಾರಿ ಬಿ.ಮಲ್ಲಾನಾಯ್ಕ ಮಾತನಾಡಿ, ತಂಬಾಕು ಸೇವನೆ ಆರೋಗ್ಯಕ್ಕೆ ಹಾನಿಕರ. ಶಾಲಾ ಮತ್ತು ಕಾಲೇಜುಗಳ ಆವರಣದಲ್ಲಿ ತಂಬಾಕು ಮಾರಾಟ ಮಾಡಬಾರದು ಎಂದು ತಿಳಿಸಿದರು.

ADVERTISEMENT

ಪುರಸಭೆ ಮುಖ್ಯಾಧಿಕಾರಿ ಪ್ರಕಾಶ್ ಚನ್ನಪ್ಪನವರ್‌, ತಾಲ್ಲೂಕು ಆರೋಗ್ಯಾಧಿಕಾರಿ ಡಾ.ಸುಲೋಚನಾ, ಶಿಶು ಅಭಿವೃದ್ಧಿ ಅಧಿಕಾರಿ ಚನ್ನಪ್ಪ, ಹಿರಿಯ ಆರೋಗ್ಯ ಸಹಾಯಕ ಪರುಸಪ್ಪ, ವಕೀಲರಾದ ಸಿ.ಬಸವರಾಜ, ಟಿ.ಜಿ.ಎಂ.ಕೊಟ್ರೇಶ್‌, ಸುಭಾಷ್‌, ಪ್ರಹ್ಲಾದ್‌, ಜಿ.ಎಂ.ದೀಪಕ್‌, ಚಂದ್ರಶೇಖರ್‌, ಹುಲುಗಪ್ಪ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.