ADVERTISEMENT

`ತುಂಗಭದ್ರಾ ಅಚ್ಚುಕಟ್ಟು ಪ್ರದೇಶದ ಭೂಮಿ ಕ್ಷಾರಯುಕ್ತ'

​ಪ್ರಜಾವಾಣಿ ವಾರ್ತೆ
Published 20 ಡಿಸೆಂಬರ್ 2012, 6:43 IST
Last Updated 20 ಡಿಸೆಂಬರ್ 2012, 6:43 IST

ಸಿರುಗುಪ್ಪ : ತುಂಗಭದ್ರಾ ಅಚ್ಚುಕಟ್ಟು ಪ್ರದೇಶದ ನೀರಾವರಿ ಜಮೀನುಗಳಲ್ಲಿ ರೈತರು ಯಥೇಚ್ಛವಾಗಿ ನೀರು ಬಳಕೆ ಮಾಡುತ್ತಿರುವುದರಿಂದ ಭೂಮಿ ಕ್ಷಾರಯುಕ್ತವಾಗುತ್ತಿದೆ ಎಂದು ಇಲ್ಲಿಯ ಕೃಷಿ ಸಂಶೋಧನಾ ಕೇಂದ್ರದ ಮುಖ್ಯಸ್ಥ ಡಾ.ಬಸವಣ್ಣೆಪ್ಪ ಕಳವಳ ವ್ಯಕ್ತಪಡಿಸಿದರು.

ತಾಲ್ಲೂಕಿನ ಹಚ್ಚೊಳ್ಳಿ ಗ್ರಾಮದಲ್ಲಿ ಕಾಡ ಇಲಾಖೆ ಕುರುಗೋಡು, ಸಮರ್ಪಣ ಅಭಿವೃಧ್ದಿ ಸಂಸ್ಥೆ ಸಿಂಧನೂರು ಇವರ ಸಹಯೋಗದಲ್ಲಿ ಮಂಗಳವಾರ ಆಯೋಜಿಸಿದ್ದ ನೀರು ನಿರ್ವಹಣೆ ಮತ್ತು ಪರ್ಯಾಯ ಬೆಳೆ ಪದ್ಧತಿಗಳ ಬಗ್ಗೆ ಒಂದು ದಿನದ ರೈತರ ತರಬೇತಿ ಕಾರ್ಯಕ್ರಮದಲ್ಲಿ ಸಮರ್ಥ ನೀರು ನಿರ್ವಹಣೆಯ ಬಗ್ಗೆ ರೈತರಿಗೆ ಮಾಹಿತಿ ನೀಡಿದರು.

ಕಳೆದ 50 ವರ್ಷಗಳಿಂದ ತುಂಗಭದ್ರಾ ಅಚ್ಚುಕಟ್ಟು ಪ್ರದೇಶದಲ್ಲಿ ಬತ್ತಕ್ಕೆ ಅವೈಜ್ಞಾನಿಕ ನೀರು ನಿರ್ವಹಣೆಯಿಂದ ಸಾಕಷ್ಟು ನೀರು ಪೋಲಾಗುವುದು ಕಂಡು ಬರುತ್ತಿದೆ ಇದಕ್ಕೆ ಪರ್ಯಾಯವಾಗಿ ಮಿತ ನೀರಿನಲ್ಲಿ ಬೆಳೆಯುವ ಶ್ರೀ ಬತ್ತದ ಪದ್ಧತಿ ಮತ್ತು ನೇರ ಕೂರಿಗೆ ಬಿತ್ತನೆಯಂತಹ ಪದ್ಧತಿ ಅಳವಡಿಸಿಕೊಳ್ಳುವು ದರಿಂದ ನೀರಿನ ಉಳಿತಾಯ ಮಾಡಬಹುದು ಎಂದು ರೈತರಿಗೆ  ಸಲಹೆ ಮಾಡಿದರು ಬತ್ತಕ್ಕೆ ಪರ್ಯಾಯವಾಗಿ ಬಿಟಿ ಹತ್ತಿ, ಮೆಕ್ಕೆಜೋಳ, ಜೋಳ, ತೊಗರಿ, ಸಜ್ಜೆ, ಮೆಣಸಿನಕಾಯಿ ಮತ್ತು ನವಣೆಯಂತಹ ಬೆಳೆಗಳನ್ನು ಬೆಳೆಯಲು ರೈತರಲ್ಲಿ ಕೋರಿದರು.

ರೈತರನ್ನು ಗಮನಸಳೆಯುತ್ತಿರುವ ಸಮಗ್ರಕೃಷಿ ಪದ್ಧತಿಗಳಾದ ಕೃಷಿ ಬೆಳೆಗಳೊಂದಿಗೆ ತೋಟಗಾರಿಕೆ, ಹೈನುಗಾರಿಕೆ, ಮೀನುಗಾರಿಕೆ, ಮೇಕೆ- ಕುರಿಸಾಕಾಣಿಕೆ ಮತ್ತು ಎರೆಹುಳು ಕೃಷಿ- ಅಜೋಲಾದಂತ ಪದ್ಧತಿಗಳನ್ನು ಅಳವಡಿಸಿಕೊಳ್ಳುವುದರಿಂದ ರೈತರ ಆರ್ಥಿಕ ಮಟ್ಟ ಸುಧಾರಿಸಿ ಕೊಳ್ಳುವುದರೊಂದಿಗೆ ಸ್ವಾಲಂಬಿಗಳಾಗುತ್ತಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.