ADVERTISEMENT

ತುಂಗಭದ್ರಾ ಹೂಳು: ಶ್ರೀರಾಮುಲು ತಂತ್ರ

​ಪ್ರಜಾವಾಣಿ ವಾರ್ತೆ
Published 7 ಜುಲೈ 2012, 3:15 IST
Last Updated 7 ಜುಲೈ 2012, 3:15 IST

ಕಂಪ್ಲಿ: ಮಾಜಿ ಸಚಿವ ಬಿ. ಶ್ರೀರಾಮುಲು ಅವರಿಗೆ ಇದ್ದಕ್ಕಿದ್ದಂತೆ ತುಂಗಭದ್ರಾ ಜಲಾಶಯ ಹೂಳೆತ್ತುವ ವಿಚಾರ ಹೊಳೆದಿರುವುದು ರೈತಪರ ಕಾಳಜಿಯಿಂದ ಅಲ್ಲ. ಇದೊಂದು ಕೇವಲ ರಾಜಕೀಯ ತಂತ್ರ ಎಂದು ಕೆಪಿಸಿಸಿ ಕಾನೂನು ಮತ್ತು ಮಾನವ ಹಕ್ಕುಗಳ ವಿಭಾಗದ ರಾಜ್ಯ ಪ್ರಧಾನ ಕಾರ್ಯದರ್ಶಿ ಗುಜ್ಜಲ ನಾಗರಾಜ ಟೀಕಿಸಿದರು.

ಶ್ರೀರಾಮುಲು ಸಚಿವರಾಗಿದ್ದಾಗ ರೈತರ ಫಲವತ್ತಾದ 1200 ಎಕರೆ ಭೂಮಿ ವಶಪಡಿಸಿಕೊಳ್ಳುವಾಗ ರೈತರು ನೆನಪಾಗಲಿಲ್ಲವೆ. ಇದಕ್ಕಾಗಿ ರೈತರು ಬಂಡಿ ನೊಗ ಹೊತ್ತು ಹೋರಾಟ ನಡೆಸಿದಾಗ ಅನ್ನದಾತನ ನೆನಪು ಎಲ್ಲಿ ಹೋಗಿತ್ತು ಎಂದು ಪ್ರಶ್ನಿಸಿದರು. ಇದೀಗ ಅನುಕಂಪ ಗಳಿಸಲು ಆಡುತ್ತಿರುವ ನಾಟಕ ಇದು. ಇದಕ್ಕೆಲ್ಲ  ಮತದಾರರು, ರೈತರು ತಕ್ಕ ಪಾಠ ಕಲಿಸಲಿದ್ದಾರೆ ಎಂದು ಗುರುವಾರ ತಮ್ಮನ್ನು ಭೇಟಿಯಾದ ಸುದ್ಧಿಗಾರರಿಗೆ ತಿಳಿಸಿದರು.

ರಾಜ್ಯದಲ್ಲಿ ತೀವ್ರ ಬರ ವ್ಯಾಪಿಸಿದ್ದು, ವಿದ್ಯುತ್ ಸಮಸ್ಯೆ ಬಿಗಡಾಯಿಸಿ ಕುಡಿಯುವ ನೀರಿಗೆ ಆಹಾಹಾಕಾರ ಉಂಟಾಗಿದೆ. ರೈತರು ಮಳೆ ಇಲ್ಲದೆ ಕಂಗೆಟಿದ್ದಾರೆ. ಜೊತೆಗೆ ಜಾನುವಾರು ಮೇವು ಇಲ್ಲದೆ ಕಟುಗರ ಕಸಾಯಿ ಖಾನೆ ಪಾಲಾಗುತ್ತಿವೆ. ಇಂಥ ಸಂದಿಗ್ಧ ಸ್ಥಿತಿಯಲ್ಲಿ ಕುರ್ಚಿಗಾಗಿ ಕಚ್ಚಾಡುತ್ತಿ ರುವ ಬಿಜೆಪಿ ಸರ್ಕಾರ ಸಂಪೂರ್ಣ ಪ್ರಜಾಹಿತ ಮರೆತಿದೆ ಎಂದು ಆರೋಪಿಸಿದರು.

ಬಿಜೆಪಿ ಹೈಕಮಾಂಡ್ ಸಹ ರಾಜ್ಯದ ಹಿತ ಮರೆತು ಬೇಜವಾಬ್ದಾರಿಯಿಂದ ವರ್ತಿಸುತ್ತಿದೆ ಎಂದು ದೂರಿದರು.
ಮಾಜಿ ಸಚಿವ ಜಿ. ಜನಾರ್ದನರೆಡ್ಡಿ `ಬೇಲ್ ಡೀಲ್~ ಪ್ರಕರಣದಲ್ಲಿ ಬಳ್ಳಾರಿ ಶಾಸಕ ಜಿ. ಸೋಮಶೇಖರ ರೆಡ್ಡಿ ಅವರು ತಮ್ಮ ಪಾತ್ರ ಇಲ್ಲ ಎಂದು ಹೇಳಿದ್ದರು. ಆದರೆ ಇದೀಗ ಸಂಬಂಧಪಟ್ಟವರ ವಿಚಾರಣೆಯಿಂದ ಸತ್ಯ ಬಹಿರಂಗವಾಗಿದ್ದ, ಇದಕ್ಕೆ ಶಾಸಕರು ಉತ್ತರಿಸಬೇಕಿದೆ ಎಂದರು.

ಕಂಪ್ಲಿ ಪುರಸಭೆ ವ್ಯಾಪ್ತಿಯ ಶಿಬಿರದಿನ್ನಿ ಬಲಭಾಗದ ನಿವೇಶನಕ್ಕಾಗಿ ಕಳೆದ 25ವರ್ಷಗಳ ಹಿಂದೆ ರೂ. 350 ಪಾವತಿಸಿದವರಿಗೇ ನಿವೇಶನಗಳನ್ನು ಹಂಚಬೇಕು. ಇಲ್ಲವಾದಲ್ಲಿ ಹೋರಾಟ ಹಮ್ಮಿಕೊಳ್ಳುವುದಾಗಿ ಎಚ್ಚರಿಸಿದರು.

ತಾರಿಹಳ್ಳಿ ಹನುಮಂತಪ್ಪ, ಶ್ರೀನಿವಾಸ್,  ಆರ್. ಸೋಮಶೇಖರ ಗೌಡ, ಭೀಮಪ್ಪ, ರಾಮು, ನಾಗೇಶ್ವರರಾವ್,  ಕಲ್ಗುಡಿ ಭೀಮಪ್ಪ ಇತರರು ಹಾಜರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.