ADVERTISEMENT

ದೇವದಾಸಿಗೆ ಸಿಗದ ಸೌಲಭ್ಯ: ಆರೋಪ

​ಪ್ರಜಾವಾಣಿ ವಾರ್ತೆ
Published 21 ಫೆಬ್ರುವರಿ 2011, 8:25 IST
Last Updated 21 ಫೆಬ್ರುವರಿ 2011, 8:25 IST

ಸಂಡೂರ: ದೇವದಾಸಿ ಹಣೆಪಟ್ಟಿ ಕಟ್ಟಿಕೊಂಡು ಬದುಕುತ್ತಿರುವ ಮಹಿಳೆಯರಿಗೆ ಮುಂಜೂರಾಗಿರುವ ಆಶ್ರಯ ಮನೆಗಳನ್ನು ಕೊಡಲು ಅಧಿಕಾರ ನಡೆಸುತ್ತಿರುವ ಅಧಿಕಾರಿಗಳು ಹಿಂದೇಟು ಹಾಕುತ್ತಿದ್ದಾರೆ. ಇದರಿಂದಾಗಿ ಗ್ರಾಮೀಣ ಭಾಗದಲ್ಲಿರುವ ದೇವದಾಸಿ ಮಹಿಳೆಯರಿಗೆ ಸರ್ಕಾರದ ಸೌಲಭ್ಯ ಸಿಗದೇ ಅನ್ಯಾಯವಾಗಿದೆ ಎಂದು ರಾಜ್ಯ ದೇವದಾಸಿ ಮಹಿಳೆಯರ ವಿಮೋಚನಾ ಸಂಘದ ಅಧ್ಯಕ್ಷೆ ಬಿ. ಮಾಳಮ್ಮ ಅಸಮಾಧಾನ ವ್ಯಕ್ತಪಡಿಸಿದರು.

ಬಾಲ್ಯದಲ್ಲಿಯೇ ದೇವದಾಸಿ ಆಚರಣೆಯ ಅನಿಷ್ಟ ಪದ್ಧತಿಗೆ ಬಲಿಯಾಗಿ ಸಮಾಜದಲ್ಲಿ ಹೀನಾಯ ರೀತಿಯಲ್ಲಿ ಬದುಕುತ್ತಿರುವ ಹೆಣ್ಣು ಜೀವಗಳಿಗೆ ಯಾವ ಸರ್ಕಾರಗಳು ನ್ಯಾಯ ಒದಗಿಸಿ ಕೊಟ್ಟಿಲ್ಲ. 2007ರಲ್ಲಿ ನಡೆಸಿದ ಸಮೀಕ್ಷೆಯಲ್ಲಿ ದೇವದಾಸಿಯರ ಹೊಸಪಟ್ಟಿ ಬಿಡುಗಡೆ ಯಾಗಿಲ್ಲ, ರಾಜ್ಯದ 23 ಸಾವಿರ ದೇವದಾಸಿ ಮಹಿಳೆಯರಿಗೆ ಮಾಸಿಕ 400 ರೂಪಾಯಿ 45 ವರ್ಷ ನಿಗದಿ ಮಾಡಿರುವುದು ಅನ್ಯಾಯ ಎಂದು ಆರೋಪಿಸಿದರು.

ದೇವದಾಸಿ ಮಹಿಳೆಯರಿಗೆ ಹತ್ತು ಸಾವಿರ ಸಹಾಯ ಧನ ಸೇರಿದಂತೆ 20 ಸಾವಿರ ರೂ ಸಾಲ ನೀಡುವ ಯೋಜನೆ ಕೂಡ ಅನುಷ್ಠಾನಕ್ಕೆ ಬಂದಿಲ್ಲ. ಅನೇಕ ಹೋರಾಟಗಳು ವಿಫಲವಾಗಿವೆ. ಸರ್ಕಾರಕ್ಕೆ ದೇವದಾಸಿಯರ ನೋವು, ಸಂಕಷ್ಟ ಕೇಳುತ್ತಿಲ್ಲ ಎಂದು ಹೇಳಿದರು.ದೇವಾದಾಸಿ ಮಹಿಳೆಯರಿಗೆ ಮನೆ ಕಟ್ಟಿಸಿಕೊಡಬೇಕು, ಅಂತ್ಯೋದಯ ಕಾರ್ಡ್ ನೀಡಬೇಕು. ಪಿಂಚಣಿಗೆ ನಿಗದಿ ಪಡಿಸಿರುವ ವಯೋಮಿತಿ ಸಡಿಲಿಸಿ ಕನಿಷ್ಠ ತಲಾ 2 ಎಕರೆ ಕೃಷಿ ಜಮೀನು, ಹೆಣ್ಣು ಮಕ್ಕಳ ಮದುವೆಗೆ ಸಹಾಯಧನ, ಸ್ವಯಂ ಉದ್ಯೋಗ ಕ್ಯೆಗೊಳ್ಳಲು ಸಾಲದ ಸವಲತ್ತು ನೀಡಬೇಕು ಎಂಬಿತ್ಯಾದಿ 12 ಬೇಡಿಕೆಗಳನ್ನು ಈಡೇರಿಸಲು ಹೋರಾಟ ನಡೆಯುತ್ತಿದೆ ಎಂದು ಮಾಳಮ್ಮ ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.