ADVERTISEMENT

ದೇವದಾಸಿಯರ ಮಾಸಾಶನ ವಿತರಣೆಗೆ ಮಾಳಮ್ಮ ಆಗ್ರಹ

​ಪ್ರಜಾವಾಣಿ ವಾರ್ತೆ
Published 3 ಜನವರಿ 2012, 5:25 IST
Last Updated 3 ಜನವರಿ 2012, 5:25 IST

ಕುರುಗೋಡು: ದೇವದಾಸಿಯರಿಗೆ ಮಾಸಾಶನ ನಿಗದಿ ಪಡಿಸಿ ವರ್ಷವಾದರೂ ಇದುವರೆಗೆ ವಿತರಣೆಗೆ ಸರಕಾರ ಮುಂದಾಗಿಲ್ಲ. ಸರಕಾರದ ಸೌಲಭ್ಯ ಮತ್ತು ಈ ಪದ್ಧತಿಯ ಬಗ್ಗೆ ಜಾಗೃತಿ ಮೂಡಿಸುವಂತೆ ದೇವದಾಸಿ ವಿಮೋಚನಾ ಸಂಘದ ರಾಜ್ಯ ಘಟಕದ ಅಧ್ಯಕ್ಷ್ಯೆ ಮಾಳಮ್ಮ ಆಗ್ರಹಿಸಿದರು.

ಪಟ್ಟಣದಲ್ಲಿ ಸಂಘದ ನೇತೃತ್ವದಲ್ಲಿ ಶನಿವಾರ ನಡೆದ ದೇವದಾಸಿ ಮಹಿಳೆಯರ ಸಮಾವೇಶ ಉದ್ಘಾಟಿಸಿ ಮಾತನಾಡಿದರು.

ಸೇವೆ ಸಲ್ಲಿಸಲು ನೇಮಕಗೊಳ್ಳುವ ಸ್ವಯಂಸೇವಕರಿಗೆ ದೇವದಾಸಿ ಅಭಿವೃದ್ಧಿ ನಿಗಮ ತಿಂಗಳಿಗೆ 750 ರೂ. ನಿಗದಿಪಡಿಸಿದೆ. ಆದರೆ ಇಂದಿನ ಬೆಲೆ ಏರಿಕೆ ದಿನದಲ್ಲಿ ಸಂಭಾವನೆ ಸಾಲದು ಇದನ್ನು 3000 ರೂಪಾಯಿಗಳಿಗೆ ಏರಿಸಬೇಕು ಎಂದು ಒತ್ತಾಯಿಸಿದರು.

ಮಹಿಳೆಯರು ತಮ್ಮ ಹಕ್ಕುಗಳಿಗಾಗಿ ಜಾಗೃತರಾಗಿ ಉಗ್ರ ಹೋರಾಟ ನಡೆಸಲು ಸಲಹೆ ನೀಡಿದರು. 
ಸ್ಥಳೀಯ ಘಟಕದ ಅಧ್ಯಕ್ಷ ಎಚ್. ಎಂ. ವಿಶ್ವನಾಥ ಸ್ವಾಮಿ,  ಗ್ರಾಮೀಣ ಪ್ರದೇಶದಲ್ಲಿ ಈ ಪದ್ದತಿ ನಿಯಂತ್ರಿಸಲು ಸಂಘಟನೆ ಸಾಕಷ್ಟು ಮುತುವರ್ಜಿ ವಹಿಸಿದ್ದರೂ ಇಂದಿಗೂ ಜಾರಿಯಲ್ಲಿದೆ. ಸಂಘಟನೆಯ ಮುತುವರ್ಜಿಗೆ ಸರಕಾರದ ಅಧಿಕಾರಿಗಳ ಸೂಕ್ತ ಸ್ಪಂದನೆ ಅಗತ್ಯ ಎಂದು ತಿಳಿಸಿದರು.

ಸಮಾವೇಶಕ್ಕೆ ಬೆಂಬಲ ವ್ಯಕ್ತಪಡಿಸಿದ ಉದ್ಯೋಗ ಖಾತರಿ ಕೂಲಿಕಾರರ ಸಂಘದ ಮುಖಂಡ ಎಸ್‌ಪಿ. ಮಹಮದ್ ಖಾನ್, ಉದ್ಯೋಗ ಖಾತರಿ ಯೋಜನೆಯಲ್ಲಿ ದೇವದಾಸಿ ಮಹಿಳೆಯರು ಸಾಕಷ್ಟು ಬಾರಿ ಅರ್ಜಿ ಸಲ್ಲಿಸಿದ್ದರೂ, ಜಿಲ್ಲಾ ಪಂಚಾಯ್ತಿ ಮತ್ತು ಗ್ರಾಮ ಪಂಚಾಯ್ತಿ ಆಡಳಿತ ಉದ್ಯೋಗ ನೀಡುವಲ್ಲಿ ಕಾಳಜಿ ತೋರಿಲ್ಲ.  ಕಾರಣ ಅನೇಕ ಮಹಿಳೆಯರು ಗುಳೆ ಹೋಗುವ ದುಸ್ಥಿತಿಗೆ ಸಿಲುಕಿದ್ದಾರೆ ಎಂದರು.

ಜಿಲ್ಲಾ ಘಟಕದ ಸದಸ್ಯೆ ಯಲ್ಲಾಪುರ ಸೋಮಕ್ಕ, ಚಲುವಾದಿ ಯರ‌್ರೆಮ್ಮ, ಎಮ್ಮಿಗನೂರು ಗುರುಪಾದಮ್ಮ, ಎಚ್. ವೀರಾಪುರ ಕರ‌್ರೆಮ್ಮ ಮತ್ತಿತರರು ಉಪಸ್ಥಿತರಿದ್ದರು.

ಸಮಾವೇಶದಲ್ಲಿ ದಲಿತ ಮಹಿಳಾ ಹಕ್ಕು ಹೋರಾಟ ಸಮಿತಿ ರಚಿಸಲು ಮತ್ತು  ದೇವದಾಸಿ ಮಹಿಳೆಯರ ಬೇಡಿಕೆಯ ಬಗ್ಗೆ ಸರಕಾರಕ್ಕೆ ಒತ್ತಾಯಿ ಸಲು ಜನವರಿ 22ರಂದು ಬಳ್ಳಾರಿ ಗಾಂಧಿ ಭವನದಲ್ಲಿ ಜಿಲ್ಲಾ ಸಮಾವೇಶ ನಡೆಸಲು ತೀರ್ಮಾನಿಸಲಾಯಿತು.

ಸಮಾವೇಶದಲ್ಲಿ ಎಮ್ಮಿಗನೂರು, ಸಿದ್ದಮ್ಮಹಳ್ಳಿ, ಯರಂಗಳಿಗಿ ಮತ್ತು ಕುರುಗೋಡು ಹೋಬಳಿ ವ್ಯಾಪ್ತಿಯ ವಿವಿಧ ಗ್ರಾಮಗಳ ದೇವದಾಸಿ ಮಹಿಳೆಯರು ಪಾಲ್ಗೊಂಡಿದ್ದರು. ಸ್ಥಳೀಯ ಘಟಕದ ಮುಖಂಡೆ ಮಾರೆಮ್ಮ ಕಾರ್ಯಕ್ರಮ ನಿರೂಪಿಸಿದರು. ಹುಲಿಗೆಮ್ಮ ಸ್ವಾಗತಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.