ADVERTISEMENT

ದ್ವಿತೀಯ ಪಿಯುಸಿ ಪರೀಕ್ಷೆ: ಎಲ್ಲ ಪರೀಕ್ಷಾ ಕೇಂದ್ರ ಸುತ್ತ ನಿಷೇಧಾಜ್ಞೆ

​ಪ್ರಜಾವಾಣಿ ವಾರ್ತೆ
Published 13 ಮಾರ್ಚ್ 2012, 9:10 IST
Last Updated 13 ಮಾರ್ಚ್ 2012, 9:10 IST

ಬಳ್ಳಾರಿ: ಇದೇ 15ರಿಂದ 31ರವರೆಗೆ ಜಿಲ್ಲೆಯಾದ್ಯಂತ ದ್ವಿತೀಯ ಪಿಯುಸಿ ಪರೀಕ್ಷೆ ನಡೆಯಲಿದ್ದು, ಪರೀಕ್ಷೆಗಳನ್ನು ಶಾಂತಿ ಮತ್ತು ಸುವ್ಯವಸ್ಥಿತವಾಗಿ ನಡೆಸುವ ಉದ್ದೇಶದಿಂದ ಎಲ್ಲ 21 ಪರೀಕ್ಷಾ ಕೇಂದ್ರಗಳ ಸುತ್ತ 200 ಮೀಟರ್ ವ್ಯಾಪ್ತಿಯಲ್ಲಿ ನಿಷೇಧಾಜ್ಞೆ ಜಾರಿಗೊಳಿಸಲಾಗಿದೆ ಎಂದು ಜಿಲ್ಲಾಧಿಕಾರಿ ಎ.ಎ. ಬಿಸ್ವಾಸ್ ತಿಳಿಸಿದ್ದಾರೆ.

ಪರೀಕ್ಷೆ ನಡೆಯುವ ದಿನಗಳಂದು ಪರೀಕ್ಷಾ ಕೇಂದ್ರಗಳ ಸುತ್ತಲಿನ ಎಲ್ಲಾ ಝೆರಾಕ್ಸ್ ಅಂಗಡಿಗಳನ್ನು ಬೆಳಿಗ್ಗೆ 7ರಿಂದ ಮಧ್ಯಾಹ್ನ 4 ಗಂಟೆವರೆಗೆ ಮುಚ್ಚಬೇಕು. ನಿಷೇಧಿತ ಪ್ರದೇಶದಲ್ಲಿ ಯಾವುದೇ ವ್ಯಕ್ತಿಯೂ ಶಸ್ತ್ರಾಸ್ತ್ರ ಅಥವಾ ಸ್ಫೋಟಕ ವಸ್ತು ಒಯ್ಯುವುದನ್ನು ನಿರ್ಬಂಧಿಸಲಾಗಿದೆ. ಬಹಿರಂಗವಾಗಿ ಘೋಷಣೆ ಕೂಗುವುದು, ಹಾಡುವುದು, ವಾದ್ಯ ಬಾರಿಸುವುದು, ಸಜ್ಞೆ ಮಾಡುವುದು, ಗುಂಪಾಗಿ ತಿರುಗಾಡುವುದು, ಕಲ್ಲು ಎಸೆಯುವುದು ಮತ್ತಿತರ  ಚಟುವಟಿಕೆಗಳನ್ನು ಪ್ರತಿಬಂಧಿಸಲಾಗಿದೆ. ಅಗತ್ಯ ಪೊಲೀಸ್ ಬಂದೋಬಸ್ತ್ ಅನ್ನು ಪರಿಣಾಮಕಾರಿಯಾಗಿ ಜಾರಿಗೊಳಿಸಲಾಗಿದೆ ಎಂದು ಅವರು ತಿಳಿಸಿದ್ದಾರೆ.

ವೀಕ್ಷಕರ ನೇಮಕ: ದ್ವಿತೀಯ ಪಿಯುಸಿ ಪರೀಕ್ಷೆಗಳನ್ನು ಸುಗಮವಾಗಿ ನಡೆಸಲು ಹಾಗೂ ಸಾಮೂಹಿಕ ನಕಲು ಮತ್ತಿತರ ಅವ್ಯವಹಾರ ತಡೆಗಟ್ಟುವ ನಿಟ್ಟಿನಲ್ಲಿ 21 ಜನರನ್ನು ವೀಕ್ಷಕರನ್ನಾಗಿ ನೇಮಿಸಲಾಗಿದೆ ಎಂದು ಬಿಸ್ವಾಸ್ ತಿಳಿಸಿದ್ದಾರೆ. ಬಳ್ಳಾರಿಯ ಉಪ ವಿಭಾಗಾಧಿಕಾರಿ, ಕ್ಷೇತ್ರ ಶಿಕ್ಷಣಾಧಿಕಾರಿ, ಪೌರಾಯುಕ್ತ, ನಗರಾಭಿವೃದ್ಧಿ ಕೋಶದ ಯೋಜನಾ ನಿರ್ದೇಶಕ, ತಹಶೀಲ್ದಾರರು, ಆಹಾರ ಮತ್ತು ನಾಗರೀಕ ಸರಬರಾಜು ಇಲಾಖೆ ಉಪನಿರ್ದೆಶಕರು, ಸಮಾಜ ಕಲ್ಯಾಣಾಧಿಕಾರಿಯವರು, ತಾ.ಪಂ. ಕಾರ್ಯನಿರ್ವಾಹಕ ಅಧಿಕಾರಿ ಅವರನ್ನು ನೇಮಿಸಲಾಗಿದ್ದು, ವೀಕ್ಷಕರು ಪರೀಕ್ಷೆ ಆರಂಭವಾಗುವ ಮುಂಚೆ ಪರಿಶೀಲಿಸಲು ಆದೇಶಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.