ADVERTISEMENT

ನನಸಾಗದ ವಿಶಾಲ ಕರ್ನಾಟಕದ ಕನಸು

​ಪ್ರಜಾವಾಣಿ ವಾರ್ತೆ
Published 19 ಅಕ್ಟೋಬರ್ 2012, 4:50 IST
Last Updated 19 ಅಕ್ಟೋಬರ್ 2012, 4:50 IST

ಬಳ್ಳಾರಿ: ರಾಜ್ಯ ಏಕೀಕರಣಗೊಂಡು ಅರ್ಧ ಶತಮಾನ ಕಳೆದಿದ್ದರೂ, ಕನ್ನಡ ಹೋರಾಟಗಾರರು ಕಂಡಿದ್ದ ವಿಶಾಲ ಮತ್ತು ಸಂಪೂರ್ಣ ಕರ್ನಾಟಕದ ಕನಸು ಇದುವರೆಗೂ ನನಸಾಗಿಲ್ಲ ಎಂದು ಕನ್ನಡ ವಿದ್ವಾಂಸ ಡಾ.ಜಿ.ಎಸ್. ಸಿದ್ದಲಿಂಗಯ್ಯ ಅಭಿಪ್ರಾಯಪಟ್ಟರು.

ಲೋಹಿಯಾ ಪ್ರಕಾಶನ ಹಾಗೂ ನಾಡಹಬ್ಬ ಸಮಿತಿಗಳ ಸಹಯೋಗದಲ್ಲಿ ಗುರುವಾರ ನಗರದಲ್ಲಿ ಏರ್ಪಡಿಸಲಾಗಿದ್ದ ಜಯದೇವಿ ತಾಯಿ ಲಿಗಾಡೆ ಜನ್ಮಶತಮಾನೋತ್ಸವ ಸಮಾರಂಭ ಉದ್ಘಾಟಿಸಿ ಅವರು ಮಾತನಾಡಿದರು.

ಮಹಾರಾಷ್ಟ್ರದ ಸೊಲಾಪುರದಲ್ಲಿ ಜನಿಸಿದ್ದರೂ, ವಿವಾಹದ ನಂತರ ಕರ್ನಾಟಕಕ್ಕೆ ಬಂದು, ಕನ್ನಡ ಕಲಿತು, ಕನ್ನಡದಲ್ಲಿ ಅಮೋಘವಾದ ತ್ರಿಪದಿಗಳನ್ನು ರಚಿಸಿರುವ ಜಯದೇವಿ ತಾಯಿ ಅವರ ಸೇವೆ ಸ್ಮರಣೀಯ ಎಂದು ಅವರು ಹೇಳಿದರು.

ರಾಘವಾಂಕನಿಗಿಂತಲೂ ಭಿನ್ನವಾಗಿ ಸಿದ್ದರಾಮ ಚರಿತೆ ರಚಿಸಿದ್ದಲ್ಲದೆ, ಕನ್ನಡದ ವಚನಗಳನ್ನು ಮರಾಠಿಗೆ ಅನುವಾದಿಸಿ, ಮಹಾರಾಷ್ಟ್ರಕ್ಕೆ ವಚನಗಳನ್ನು ಪರಿಚಯಿಸಿದ ಶ್ರೇಯಸ್ಸು ಜಯದೇವಿತಾಯಿ ಅವರಿಗೆ ಸಲ್ಲುತ್ತದೆ. ಅವರ ಕಾವ್ಯದಲ್ಲಿ ಅಪಾರ ಶಕ್ತಿ ಇತ್ತು, ಅವರ ತ್ರಿಪದಿಗಳು ಅಗಾಧವಾಗಿದ್ದವು. ಮನೆತನದ ಮಿತಿಯನ್ನು ಮೀರಿ, ಕರ್ನಾಟಕದ ಸಂಸ್ಕೃತಿಯ ಹಿರಿಮೆಯಾಗಿ ಕಂಗೊಳಿಸಿರುವ ಅವರು, ಜ್ಞಾನದಂತೆ, ಪುಣ್ಯದಂತೆ ಬದುಕಿ, ಮುಕ್ತಿಯಂತೆ ಹೊರಟುಹೋದರು ಎಂದು ಅವರು ತಿಳಿಸಿದರು.

ಕನ್ನಡ ಸಾಹಿತ್ಯ, ಭಾಷೆ ಮತ್ತು ಸಂಸ್ಕೃತಿಗೆ ಉತ್ತರ ಕರ್ನಾಟಕದ ಕೊಡುಗೆ ಅಪಾರ. `ಅಂತಃಕರಣ~ದ, `ಕರುಳ ಸಾಹಿತ್ಯ~ ಎನ್ನಿಸಿಕೊಂಡಿರುವ ಜಾನಪದ, ವಚನ, ತತ್ವಪದಗಳು ಉತ್ತರ ಕರ್ನಾಟಕದಲ್ಲೇ ರೂಪುಗೊಂಡಿವೆ. ಕೀರ್ತನ, ವಚನಗಳು ಸಿದ್ಧಗೊಂಡಿದ್ದು ಇಲ್ಲೇ ಎಂದು ಜಯದೇವಿ ತಾಯಿ ಅವರ ಸೃಜನ ಸಾಹಿತ್ಯ ಕುರಿತು ಮಾತನಾಡಿದ ಡಾ.ಬಸವರಾಜ ಬಲ್ಲೂರ ಹೇಳಿದರು. `ಜಯದೇವಿ ತಾಯಿ ಅವರ ಜೀವನ ಮತ್ತು ಹೋರಾಟ~ ಕುರಿತು ಪತ್ರಕರ್ತ ದೇವು ಪತ್ತಾರ ಉಪನ್ಯಾಸ ನೀಡಿದರು.

ಡಾ.ರಾಮಕೃಷ್ಣ ಮರಾಠೆ  ರಚಿಸಿದ `ಜಯದೇವಿ ತಾಯಿ ಲಿಗಾಡೆ~ ಪುಸ್ತಕವನ್ನು ಇದೇ ಸಂದರ್ಭದಲ್ಲಿ ಬಿಡುಗಡೆ ಮಾಡಲಾಯಿತು.ಸಾಹಿತಿ ಸರೋಜಿನಿ ಚವಲಾರ ಅಧ್ಯಕ್ಷತೆವಹಿಸಿದ್ದರು. ಡಾ.ರಾಮಕೃಷ್ಣ ಮರಾಠೆ, ಡಾ.ಮಧುಬಾಲಾ ಲಿಗಾಡೆ ಉಪಸ್ಥಿತರಿದ್ದರು. ಲೋಹಿಯಾ ಪ್ರಕಾಶನದ ಚೆನ್ನಬಸವಣ್ಣ ಸ್ವಾಗತಿಸಿ, ಪ್ರಾಸ್ತಾವಿಕವಾಗಿ ಮಾತನಾಡಿದರು. ಶರಣ ಸಾಹಿತ್ಯ ಪರಿಷತ್‌ನ ಕೆ.ಬಿ. ಸಿದ್ದಲಿಂಗಪ್ಪ ಕಾರ್ಯಕ್ರಮ ನಿರೂಪಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.