ADVERTISEMENT

ನಾಲೆ ಅಂಚಿನ ಭೂಮಿಗೆ ನೀರು ಕೊಡಿ

ಕಾಲುವೆ ಬಳಿ ನಡೆದ ರೈತರ ಸಭೆಯಲ್ಲಿ ಆಗ್ರಹ; ಕಠಿಣ ಹೋರಾಟದ ಎಚ್ಚರಿಕೆ

​ಪ್ರಜಾವಾಣಿ ವಾರ್ತೆ
Published 25 ಮೇ 2018, 6:14 IST
Last Updated 25 ಮೇ 2018, 6:14 IST

ಕಂಪ್ಲಿ: ತುಂಗಭದ್ರಾ ಬಲದಂಡೆ ಕೆಳಮಟ್ಟದ ಮುಖ್ಯ ಕಾಲುವೆ ವ್ಯಾಪ್ತಿಯ ಮುದ್ದಾಪುರ–1 ವಿತರಣಾ ನಾಲೆ ಮತ್ತು ಸಣಾಪುರ ವಿತರಣಾ ನಾಲೆ ಕೊನೆ ಅಂಚಿನ ಅಚ್ಚುಕಟ್ಟು ಭೂಮಿಗಳಿಗೆ ಮುಂಬರುವ ಮುಂಗಾರು ಹಂಗಾಮಿನಲ್ಲಿ ಸಮರ್ಪಕ ನೀರು ಪೂರೈಸಬೇಕು ಎಂದು ರೈತರು ಆಗ್ರಹಿಸಿದರು.

ಗುರುವಾರ ಕೊಟ್ಟಾಲು ಸಮೀಪದ ವಿತರಣಾ ನಾಲೆ ಬಳಿ ನಡೆದ ರೈತರ ಸಭೆಯಲ್ಲಿ ಈ ಒತ್ತಾಯ ಕೇಳಿ ಬಂತು. ರೈತ ಮುಖಂಡ ಪೂರ್ಣಚಂದ್ರ ರಾವ್‌ ಮಾತನಾಡಿ, ‘ಸಣಾಪುರ ಮತ್ತು ಮುದ್ದಾಪುರ–1 ವಿತರಣಾ ನಾಲೆ ಕೆಳ ಹಂತದ ರೈತರಿಗೆ ಕೆಲ ವರ್ಷಗಳಿಂದ ನೀರು ದೊರೆಯುತ್ತಿಲ್ಲ’ ಎಂದರು.

‘ಎಂ–1ನಾಲೆ 10 ಕಿ.ಮೀ ಉದ್ದವಿದ್ದು, 39 ಕ್ಯುಸೆಕ್‌ ನೀರು ನಿಗದಿಯಾಗಿದೆ. ಆದರೆ ನಾಲೆ ಮೊದಲ 4 ಕಿ.ಮೀ ವರೆಗೆ ಮಾತ್ರ ಸಮರ್ಪಕವಾಗಿ ಹರಿಯುತ್ತಿದೆ. ಕಾಲುವೆ ಮೇಲ್ಭಾಗದಲ್ಲಿರುವ ಸುಮಾರು 40ಕ್ಕೂ ಹೆಚ್ಚು ಅನಧಿಕೃತ ಬಾವಿ ಮತ್ತು ಪಂಪ್‌ಸೆಟ್‌ ಹೊಂದಿರುವ ರೈತರು ಕಾಲುವೆಯಿಂದ ಅನುಮತಿ ಇಲ್ಲದೆ ನೀರು ಪಡೆಯುತ್ತಿರುವುದರಿಂದ ಸಮಸ್ಯೆಯಾಗುತ್ತಿದೆ’ ಎಂದರು.

ADVERTISEMENT

ತಾಲ್ಲೂಕು ಪಂಚಾಯಿತಿ ಸದಸ್ಯ ಓಬಳೇಶ್‌ ಮಾತನಾಡಿ, ‘ನಾಲೆ ಕೊನೆಭಾಗದ ಅಚ್ಚುಕಟ್ಟು ರೈತರಿಗೆ ನೀರು ಒದಗಿಸುವಂತೆ ಅಧಿಕಾರಿಗಳಿಗೆ ಅನೇಕ ಬಾರಿ ಹೇಳಿದರೂ ಪ್ರಯೋಜನವಾಗಿಲ್ಲ’ ಎಂದರು.

‘ಎಂ–1 ಮತ್ತು ಸಣಾಪುರ ವಿತರಣಾ ನಾಲೆ ನಿರ್ವಹಣೆಗಾಗಿ ಕೂಡಲೇ ಎಂಜಿನಿಯರ್‌ ನೇಮಿಸಬೇಕು. ಕಂಪ್ಲಿ ನೀರಾವರಿ ನಿಗಮ ಕಚೇರಿಯಲ್ಲಿ ಖಾಲಿ ಇರುವ ಎಂಜಿನಿಯರ್‌ ಹುದ್ದೆಗಳ ನೇಮಕಕ್ಕೆ ಕ್ರಮ ತೆಗೆದುಕೊಳ್ಳಬೇಕು’ ಎಂದು ಆಗ್ರಹಿಸಿದರು. ಸಮಸ್ಯೆ ಪರಿಹರಿಸದೇ ಹೋದರೆ ಹೋರಾಟ ಅನಿವಾರ್ಯ ಎಂದು ಎಚ್ಚರಿಸಿದರು.

ಮನ ಗೋಳ್ ನಾರಾಯಣಪ್ಪ, ಚಿನ್ನಿ ಸುರೇಶ್, ವೆಂಕಟರಾಮರಾಜು, ಮೆಹ ಬೂಬ್, ಜಿ. ರವಿ, ಶೇಖರಗೌಡ, ಎಲ್. ರಾಮನಾಯ್ಡು, ಕೇಶವರೆಡ್ಡಿ, ಕೆ. ರವಿ, ಬಿ. ಶ್ರೀನಿವಾಸ್, ಅಮಿತ್, ಕೆ. ಮಂಜುನಾಥ, ಕಾಕರ್ಲ ಭಾಸ್ಕರ ಭಾಗವಹಿಸಿದ್ದರು.

ಸ್ಥಳಕ್ಕೆ ಎಸಿ ಭೇಟಿ: ಪರಿಶೀಲನೆ

ಅಚ್ಚುಕಟ್ಟು ಭೂಮಿಗಳಿಗೆ ನೀರು ತಲುಪುತ್ತಿಲ್ಲ ಎನ್ನುವ ರೈತರ ದೂರಿನ ಹಿನ್ನೆಲೆಯಲ್ಲಿ ಹೊಸಪೇಟೆ ಉಪ ವಿಭಾಗಾಧಿಕಾರಿ ಗಾರ್ಗಿ ಜೈನ್‌ ಗುರುವಾರ ಕಾಲುವೆಗೆ ಭೇಟಿ ನೀಡಿ ಪರಿಶೀಲಿಸಿದರು.

ಬಳಿಕ ಅವರು ಮಾತನಾಡಿ, ‘ಕಾಲುವೆ ವ್ಯಾಪ್ತಿಯ ಅಲ್ಲಲ್ಲಿ ಅನಧಿಕೃತ ಕೊಳವೆ, ಪಂಪ್‌ಸೆಟ್‌ಗಳ ಮೂಲಕ ನೀರು ಪಡೆಯುತ್ತಿದ್ದು, ಇದು ಹಲವಾರು ವರ್ಷಗಳಿಂದ ಮುಂದುವರಿದಿದೆ. ಈ ಗಂಭೀರ ಸಮಸ್ಯೆಯನ್ನು ಬಳ್ಳಾರಿ ಜಿಲ್ಲಾಧಿಕಾರಿ ಮತ್ತು ತುಂಗಭದ್ರಾ ಮಂಡಳಿ ಅಧಿಕಾರಿಗಳ ಗಮನಕ್ಕೆ ತರುತ್ತೇನೆ. ಸಮಸ್ಯೆ ಇತ್ಯರ್ಥ್ಯ ಪಡಿಸಿ ರೈತರಿಗೆ ನ್ಯಾಯ ಒದಗಿಸಿಕೊಡುತ್ತೇನೆ. ಅಲ್ಲಿಯವರೆಗೂ ತಾಳ್ಮೆಯಿಂದ ಇರಬೇಕು’ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.