ADVERTISEMENT

ನಿರಾಶ್ರಿತರಿಗೆ ಪರ್ಯಾಯ ವ್ಯವಸ್ಥೆಗೆ ಆಗ್ರಹಿಸಿ ಧರಣಿ

​ಪ್ರಜಾವಾಣಿ ವಾರ್ತೆ
Published 16 ಜೂನ್ 2012, 5:40 IST
Last Updated 16 ಜೂನ್ 2012, 5:40 IST
ನಿರಾಶ್ರಿತರಿಗೆ ಪರ್ಯಾಯ ವ್ಯವಸ್ಥೆಗೆ ಆಗ್ರಹಿಸಿ ಧರಣಿ
ನಿರಾಶ್ರಿತರಿಗೆ ಪರ್ಯಾಯ ವ್ಯವಸ್ಥೆಗೆ ಆಗ್ರಹಿಸಿ ಧರಣಿ   

ಹೊಸಪೇಟೆ: ಇಲ್ಲಿಯ ಪಟೇಲ್‌ನಗರದಲ್ಲಿ 40ಕ್ಕೂ ಅಧಿಕ ವರ್ಷಗಳಿಂದ ವಾಸವಾಗಿದ್ದು ನ್ಯಾಯಾಲಯದ ಆದೇಶದಂತೆ ತೆರವು ಕಾರ್ಯದಲ್ಲಿ ನಿರಾಶ್ರಿತರಾದವರಿಗೆ ಪರ್ಯಾಯ ವ್ಯವಸ್ಥೆಗಳನ್ನು ನೀಡುವಂತೆ ಆಗ್ರಹಿಸಿ ಸ್ಲಂ ಜನಾಂದೋಲನಾ ಸಮಿತಿ ನೇತೃತ್ವದಲ್ಲಿ ಶುಕ್ರವಾರ ಸಾಂಕೇತಿಕ ಪ್ರತಿಭಟನೆ ಮಾಡಲಾಯಿತು.

ಸಮಿತಿ ನೇತೃತ್ವದಲ್ಲಿ 88 ನಿವಾಸಿ ಕುಟುಂಬಗಳು ಹಾಗೂ ರಾಜಕೀಯ ಪಕ್ಷಗಳ ಮುಖಂಡರು ಬೃಹತ್ ಪ್ರತಿಭಟನೆ ನಡೆಸಿ ತಹಸೀಲ್ದಾರರ ಮೂಲಕ ಸರ್ಕಾರಕ್ಕೆ ಮನವಿ ಸಲ್ಲಿಸಿದರು.ಜನಾಂದೋಲನ ಸಮಿತಿಯ ಶೇಷ, ರಾಮಚಂದ್ರ, ವೆಂಕಟೇಶ್, ಕಾಂಗ್ರೆಸ್ ಮುಖಂಡ ದೀಪಕ್‌ಕುಮಾರಸಿಂಗ್ ಸೇರಿದಂತೆ ಅನೇಕರು ನಿರಾಶ್ರಿತರಾದ ಕುಟುಂಬಗಳ ಪರವಾಗಿ ಮಾತನಾಡಿ ಪುನರ್ ವಸತಿ ನೀಡುವಂತೆ ಆಗ್ರಹಿಸಿದರು.

ನಗರದ 3ನೇ ವಾರ್ಡ್‌ನ ಈ ಪ್ರದೇಶ ಮೂಲತಃ ಸ್ಲಂ ಆಗಿದೆ.  ಸರ್ಕಾರಿ ಜಮೀನಾಗಿದ್ದು  ಸುಮಾರು 70ರಿಂದ 80 ವರ್ಷಗಳಿಂದಲೂ ಈ ಬಡಜನಾಂಗ ವಾಸವಾಗಿದ್ದಾರೆ, 1987ರಿಂದ ನಗರಸಭೆಗೆ ತೆರಿಗೆ ಪಾವತಿಸುತ್ತಾ ಬಂದಿದ್ದಾರೆ ಎಂದರು.

ಆರೋಪ: ಡಿ ಮಧುರೈ ನಾಯ್ಡು ಎಂಬ ವ್ಯಕ್ತಿ ಈ ಪ್ರದೇಶವು ತನ್ನದೆಂದು ಹೇಳಿ 1992ರಲ್ಲಿ ಕೃಷಿ ಭೂಮಿ ಎಂದು ಪಹಣಿ ತೆಗೆದುಕೊಂಡು ತನ್ನದಾಗಿ ಸಿದ್ದಾರೆ, ಅಂದಿನ ಕಂದಾಯ ಅಧಿಕಾರಿ ಗಳು ಯಾವುದೆ ಪರಿಶೀಲನೆ ಇಲ್ಲದೆ ಪಹಣಿ ನೀಡಿದ್ದಾರೆ ಎಂದು ಆರೋಪಿಸಿದರು.

ಈ ಪುರ್ವಾಪರಗಳ ವಿಚಾರಣೆ ಮಾಡದೇ ನ್ಯಾಯಾಲಯ ತೆರವು ಗೊಳಿಸುವಂತೆ ತಿಳಿಸಿದೆ, ಅಧಿಕಾರ ಮತ್ತು ಪೊಲೀಸ್ ದೌರ್ಜನ್ಯದೊಂದಿಗೆ ತೆರವು ಮಾಡಿದ್ದಾರೆ ಎಂದು ದೂರುತ್ತಾ ಪರ್ಯಾಯ ವ್ಯವಸ್ಥೆಗಳನ್ನು ನೀಡುವಂತೆ ಆಗ್ರಹಿಸಿದರು.

ಇಲ್ಲವಾದರೆ ಮುಂದಿನ ದಿನಗಳಲ್ಲಿ ಹೋರಾಟ ಮಾಡುವುದಾಗಿ ಪ್ರತಿಭಟನ ಕಾರರು ಎಚ್ಚರಿಸಿದರು.
ಸಮಿತಿಯ ಅಧ್ಯಕ್ಷ ಎಚ್.ಶೇಷ, ರಾಜ್ಯ ಸಂಚಾಲಕ ಎನ್. ನರಸಿಂಹ ಮೂರ್ತಿ, ಸಂಚಾಲಕರಾದ ಅಲ್ಲಮ ಪ್ರಭು,  ಅಲ್ತಾಫ್, ಮೈಪ್ಪ, ವೀರೇಶ, ಜನಾರ್ದನ, ಡಿ.ವೆಂಕಟ ರಮಣ, ಪರಶುರಾಮ್, ಗಿರೀಶ.ಜಿ, ಎನ್. ಹುಲಿಗೆಮ್ಮ, ಸೇರಿದಂತೆ ನಿರಾಶ್ರಿತ ಕುಟುಂಬದವರು ಪ್ರತಿಭಟನೆಯಲ್ಲಿ ಭಾಗವಹಿಸಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.