ADVERTISEMENT

ನಿವೇಶನಕ್ಕೆ ಆಗ್ರಹಿಸಿ ಪ್ರತಿಭಟನೆ

​ಪ್ರಜಾವಾಣಿ ವಾರ್ತೆ
Published 3 ಮೇ 2012, 7:50 IST
Last Updated 3 ಮೇ 2012, 7:50 IST

ಸಿರುಗುಪ್ಪ: ಪಟ್ಟಣದಲ್ಲಿ ಬಡವರಿಗೆ ನಿವೇಶನ ಹಂಚಿಕೆಗಾಗಿ ಆಗ್ರಹಿಸಿ ಕರ್ನಾಟಕ ಜನಶಕ್ತಿ ಸಂಘದ ವತಿಯಿಂದ ಬುಧವಾರದಿಂದ ತಾಲ್ಲೂಕು ಕಚೇರಿ ಆವರಣದಲ್ಲಿ  ಉಪವಾಸ ಸತ್ಯಾಗ್ರಹ ವನ್ನು ಆರಂಭಿಸಿದ್ದಾರೆ.

ಪಟ್ಟಣದ ಕೃಷ್ಣನಗರದ ಸಮೀಪ ದಲ್ಲಿ ಬಡವರಿಗೆ ಸೂರು ಕಲ್ಪಿಸಲು ಸರ್ಕಾರ 22 ಎಕರೆ ಜಮೀನು ಖರೀದಿ ಮಾಡಿ ಹತ್ತು ವರ್ಷ ಕಳೆದರೂ ಪುರಸಭೆಯವರು ಮೂಲ ಸೌಲಭ್ಯ ಗಳೊಂದಿಗೆ ನಿವೇಶನಗಳನ್ನು ಬಡವರಿಗೆ ವಿತರಣೆ ಮಾಡದೇ ಕಾಲಹರಣ ಮಾಡುತ್ತಿರುವುದನ್ನು ಖಂಡಿಸಿದರು.

ಕರ್ನಾಟಕ ಜನಶಕ್ತಿ ಸಂಘದ  ರಾಜ್ಯ ಘಟಕದ ಅಧ್ಯಕ್ಷ ವೈ.ಪ್ರತಾಪ್ ರೆಡ್ಡಿ ಮಾತನಾಡಿ, ಈ ಹಿಂದೆ ನಮ್ಮ ಸಂಘವು ಬಡವರ ಪರವಾಗಿ ಅರೆಬೆತ್ತಲೆ ಮೆರವಣಿಗೆ ಮೂಲಕ ಹೋರಾಟ ಮಾಡಿದರೂ ಯಾವುದೇ ಪ್ರಯೋಜನ ವಾಗಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಸಿಪಿಎಂ ಮುಖಂಡರಾದ ಇ.ಆರ್. ಯಲ್ಲಪ್ಪ, ಅಡಿವೆಪ್ಪ, ಸುರೇಶ್  ಮಾತನಾಡಿ ಬಡವರಿಗೆ ನಿವೇಶನ ಹಂಚಬೇಕೆಂದು 1996ರಿಂದಲೂ  ಅನೇಕ ಸಂಘ ಸಂಸ್ಥೆಗಳು ಹೋರಾಟ ಮಾಡುತ್ತ ಬಂದಿದ್ದರೂ ಪುರಸಭೆ ಯವರು ಇಲ್ಲಿಯವರೆಗೂ ಬಡವರಿಗೆ ಸೂರು ಕಲ್ಪಿಸಿಲ್ಲ ಎಂದು ದೂರಿದರು. 

ಕರ್ನಾಟಕ ಜನಶಕ್ತಿ ಸಂಘದ ರಾಜ್ಯ ಕಾರ್ಯದರ್ಶಿ ಎಚ್.ಎಂ. ಕಿರಣ್ ಕುಮಾರ್, ಜ್ಲ್ಲಿಲಾ ಪದಾಧಿಕಾರಿಗಳಾದ ಅಲ್ಲಾ ಸಾಬ್, ಲಕ್ಷ್ಮೀನಾರಾಯಣ ಯಾದವ, ಅಸುಂಡಿ ಸೂರಿ ಮತ್ತು ತ್ಲ್ಲಾಲೂಕು ಪದಾಧಿಕಾರಿಗಳಾದ ಆರ್.ಬಸವರೆಡ್ಡಿ, ಕೆ.ವೆಂಕಟೇಶ್, ನಾಗರಾಜ್, ಕೆ.ದೇವೆಂದ್ರ, ಟಿ.ಭಾಸ್ಕರ್, ಶೇಕಣ್ಣ ಮತ್ತು ನಿವೇಶನ ರಹಿತ ನೂರಾರು ಬಡಕುಟುಂಬಗಳು ಈ ಸತ್ಯಾಗ್ರಹದಲ್ಲಿ ಪಾಲ್ಗೊಂಡಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.