ADVERTISEMENT

ನೇತೃತ್ವ ನಿಷ್ಠರಿಗೆ ವಹಿಸಿ: ಹಿರೇಮಠ

ಗಣಿ ಬಾಧಿತ ಪ್ರದೇಶಗಳ ಪುನರ್ವಸತಿ, ಪುನಶ್ಚೇತನ ಅನುಷ್ಠಾನ ಕಾರ್ಯ

​ಪ್ರಜಾವಾಣಿ ವಾರ್ತೆ
Published 26 ಡಿಸೆಂಬರ್ 2012, 6:48 IST
Last Updated 26 ಡಿಸೆಂಬರ್ 2012, 6:48 IST

ಬಳ್ಳಾರಿ: `ರಾಜ್ಯದ ಮೂರು ಜಿಲ್ಲೆಗಳಲ್ಲಿನ ಗಣಿ ಬಾಧಿತ ಪ್ರದೇಶಗಳಲ್ಲಿ ರೂ 30 ಸಾವಿರ ಕೋಟಿ ವೆಚ್ಚದಲ್ಲಿ ನಡೆಯಲಿರುವ ಪುನರ್ವಸತಿ ಮತ್ತು ಪುನಶ್ಚೇತನ (ಆರ್ ಅಂಡ್ ಆರ್) ಅನುಷ್ಠಾನ ಕಾರ್ಯಕ್ಕೆ ನಿವೃತ್ತ ಲೋಕಾಯುಕ್ತ ನ್ಯಾಯಮೂರ್ತಿ ಎನ್.ಸಂತೋಷ್ ಹೆಗ್ಡೆ ಅವರಂಥವರಿಗೆ ನೇತೃತ್ವ ವಹಿಸಬೇಕು' ಎಂದು ಸಮಾಜ ಪರಿವರ್ತನ ಸಮುದಾಯದ ಮುಖ್ಯಸ್ಥ ಎಸ್.ಆರ್. ಹಿರೇಮಠ ಕೋರಿದರು.

ನಗರದಲ್ಲಿ ಮಂಗಳವಾರ ಪತ್ರಿಕಾಗೋಷ್ಠಿಯಲ್ಲಿ ಈ ವಿಷಯ ತಿಳಿಸಿದ ಅವರು, ಭ್ರಷ್ಟ ಅಧಿಕಾರಿಗಳಿಗೆ ಈ ಕಾರ್ಯದ ನೇತೃತ್ವ ನೀಡಿದರೆ ಪ್ರಯೋಜನ ಆಗುವುದಿಲ್ಲ ಎಂದರು.

ಆರ್ ಅಂಡ್ ಆರ್ ಅನುಷ್ಠಾನಕ್ಕಾಗಿ ಸುಪ್ರೀಂ ಕೋರ್ಟ್ ನಿರ್ದೇಶನದ ಮೇರೆಗೆ ಸ್ಪೆಷಲ್ ಪರ್ಪಸ್ ವೆಹಿಕಲ್ (ಎಸ್‌ಪಿವಿ) ರೂಪಿಸುತ್ತಿರುವ ಸರ್ಕಾರ ನ್ಯಾ. ಎನ್.ಸಂತೋಷ್ ಹೆಗ್ಡೆ ಅಥವಾ ಅವರದ್ದೇ ರೀತಿಯ ನಿಷ್ಠಾವಂತರಿಗೆ ನೇತೃತ್ವ ವಹಿಸಬೇಕು. ಇಲ್ಲದಿದ್ದರೆ, ಇಷ್ಟು ಪ್ರಮಾಣದ ಹಣ ಗಣಿ ಬಾಧಿತ ಜನರ ನೆರವಿಗೆ ಬರುವುದಿಲ್ಲ ಎಂದರು.

ಜಾಗೃತಿ ಜಾಥಾ ಜ.17ರಿಂದ: ಚುನಾವಣೆಗಳಿಗೆ ಸಂಬಂಧಿಸಿದಂತೆ ಎನ್‌ಸಿಪಿಎನ್‌ಆರ್ ವತಿಯಿಂದ 2013ರ ಜನವರಿ 17ರಿಂದ 25ರವರೆಗೆ ಮತದಾರರ ಜಾಗೃತಿ ಜಾಥಾ ಹಮ್ಮಿಕೊಳ್ಳಲಾಗಿದೆ ಎಂದು ತಿಳಿಸಿದ ಅವರು, 1999ರಿಂದಲೂ ಸಂಘಟನೆಯಿಂದ ಜನ ಜಾಗೃತಿ ಜಾಥಾ ಏರ್ಪಡಿಸಲಾಗುತ್ತಿದ್ದು, ಈ ಮೂಲಕ ಜನರಲ್ಲಿ ಅರಿವು ಮೂಡಿಸುವ ಕೆಲಸ ನಡೆದಿದೆ. ವಿಧಾನಸಭೆ ಚುನಾವನೆಗಳು ಸಮೀಪಿಸಿರುವ ಹಿನ್ನೆಲೆಯಲ್ಲಿ ಇದೀಗ ಮತ್ತೆ ಜಾಗೃತಿ ಜಾಥಾ ಸಂಘಟಿಸಲಾಗಿದೆ ಎಂದರು.

ಶಿವಮೊಗ್ಗದಿಂದ ಬಳ್ಳಾರಿಯವರೆಗೆ ನಡೆಯಲಿರುವ ಜಾಥಾ, ಗಣರಾಜ್ಯೋತ್ಸವದ  ಮುನ್ನಾದಿನ ಬಳ್ಳಾರಿಗೆ ಆಗಮಿಸಲಿದೆ. ನಗರದ ಪ್ರಮುಖ ಬೀದಿಗಳಲ್ಲಿ ಮೆರವಣಿಗೆ ನಡೆಸಿ ಜಿಲ್ಲಾಧಿಕಾರಿ ಕಚೇರಿ ತಲುಪಲಿದೆ ಎಂದು ಅವರು ಹೇಳಿದರು.

ಹಣ ಮತ್ತು ಹೆಂಡಕ್ಕಾಗಿ ಪವಿತ್ರ ಮತ ಮಾರಾಟ ಮಾಡಿಕೊಳ್ಳುವ ಪ್ರಕ್ರಿಯೆ ನಿಲ್ಲಿಸಬೇಕು. ನೈಸರ್ಗಿಕ ಸಂಪನ್ಮೂಲ ರಕ್ಷಣೆಗೆ ದನಿ ಎತ್ತಬೇಕು, ಭ್ರಷ್ಟ ಅಧಿಕಾರಿಗಳಿಗೆ ಸೂಕ್ತ ಶಿಕ್ಷೆಯಾಗಬೇಕು. ಕೈಗರಿಕೆಗಳಿಗೆ ಭೂಮಿ ನೀಡುವ ಹಾಗೂ ತಿರಸ್ಕರಿಸುವ ಅಧಿಕಾರವನ್ನು ಗ್ರಾಮಸಭೆಗಳಿಗೆ ನೀಡಬೇಕು. ಸಣ್ಣ, ಅತಿ ಸಣ್ಣ ರೈತರು ಹಾಗೂ ಕಾರ್ಮಿಕರ ಹಿತರಕ್ಷಣೆಯಾಗಬೇಕು, ಸಾರ್ವಜನಿಕರ ಭೂಮಿ, ಹಳ್ಳ, ಕೆರೆಗಳ ರಕ್ಷಣೆಗಾಗಿ ಜಿಲ್ಲಾ ಸಮಿತಿ ರಚಿಸಬೇಕು ಎಂಬ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಈ ಜಾಥಾ ನಡೆಯಲಿದೆ ಎಂದು ಅವರು ಹೇಳಿದರು.

ಜಿಲ್ಲೆಯಲ್ಲಿ ಅಪಾರ ಪ್ರಮಾಣದ ಖನಿಜ ಸಂಪತ್ತು ಲೂಟಿಯಾಗಲು ಅಧಿಕಾರಿಗಳೇ ಕಾರಣ. ರೆಡ್ಡಿ ಸಹೋದರರ ಅಕ್ರಮಕ್ಕೆ ಬೆಂಬಲ ನೀಡಿರುವ ಅಂದಿನ ಜಿಲ್ಲಾಧಿಕಾರಿ ಬಿ.ಶಿವಪ್ಪ ಹಾಗೂ ಪೊಲೀಸ್ ಅಧಿಕಾರಿ ಸೀಮಂತಕುಮಾರ್ ಸಿಂಗ್ ಅವಿರಿಗೂ ಶಿಕ್ಷೆ ಆಗಲಿದೆ ಎಂದು ಎಸ್.ಆರ್. ಹಿರೇಮಠ ಒತ್ತಿ ಹೇಳಿದರು.

ರೆಡ್ಡಿ ಸಹೋದರರ ಅಕ್ಷಮ್ಯ ಅಪರಾಧದ ಹಿಂದೆ ಈ ಅಧಿಕಾರಿಗಳು ಕೈಜೋಡಿಸಿದ್ದಾರೆ. ಅಕ್ರಮ ತಡೆಯ ಬೇಕಾದವರೇ ಬೆಂಬಲ ನೀಡಿದ್ದಾರೆ. ಇಂತಹ ಭ್ರಷ್ಟರು ಕಾನೂನಿಂದ ತಪ್ಪಿಸಿಕೊಳ್ಳಲು ಸಾಧ್ಯವಿಲ್ಲ. ಈ ಅಧಿಕಾರಿಗಳು ಮತ್ರವಲ್ಲದೆ, ಹಿಂದೆ ಅರನ್ಯ ಅಧಿಕಾರಿಯಾಗಿದ್ದ ಎಂ.ಸಿ. ಶುಕ್ಲಾ, ಗಣಿ ಮತ್ತು ಭೂ ವಿಜ್ಞಾನ ಇಲಾಖೆ ನಿರ್ದೇಶಕ ಶಿವಲಿಂಗಮೂರ್ತಿ, ಕಾರ್ಯದರ್ಶಿ ಶ್ರೀವಾಸ್ತವ, ರಾಮ್ ಪ್ರಸಾದ್ ಅವರೂ ಅಕ್ರಮದಲ್ಲಿ ಭಾಗಿಗಳಾಗಿದ್ದಾರೆ. ಅಲ್ಲದೆ, ಲೋಕಾ ಯುಕ್ತ ವರದಿಯಲ್ಲಿ ಹೆಸರಿಸಲಾದ 700 ಜನ ಭ್ರಷ್ಟ ಅಧಿಕಾರಿಗಳೂ ಆರೋಪಿ ಸ್ಥಾನಗಳಿದ್ದಾರೆ ಎಂದರು.

ರಾಜ್ಯ ಸರ್ಕಾರಕ್ಕೆ ಭ್ರಷ್ಟಾಚಾರ ನಿಯಂತ್ರಿಸುವ ಯಾವುದೇ ಇಚ್ಛಾಶಕ್ತಿ ಇಲ್ಲ. ಬದಲಿಗೆ ಭ್ರಷ್ಟರ ರಕ್ಷಣೆಯ ಹೊಣೆಯನ್ನು ಸರ್ಕಾರವೇ ವಹಿಸಿ ಕೊಂಡಿದೆ. 13  ಲಕ್ಷ ಟನ್ ಅದಿರು ಅಕ್ರಮ ಗಣಿಗಾರಿಕೆ ಮಾಡಿರುವ ಆರ್. ಪ್ರವೀಣಚಂದ್ ವಿರುದ್ಧ ಕ್ರಮ ಕೈಗೊಳ್ಳ ಬೇಕು. ಇವರಿಗೆ ಗಣಿಗಾರಿಕೆ ನಡೆಸಲು ಅವಕಾಶ ಮಾಡಿ ಕೊಟ್ಟಿರುವುದು ಭಾರಿ ಅಪರಾಧ. ಸರ್ಕಾರ ಕೂಡಲೇ ಎಚ್ಚೆತ್ತು ಕೊಳ್ಳಬೇಕು ಎಂದು ಅವರು ಒತ್ತಾ ಯಿಸಿದರು. ಅರಿವು ಸಂಘಟನೆಯ ಸಿರಿಗೇರಿ ಪನ್ನರಾಜ್ ಉಪಸ್ಥಿತರಿದ್ದರು.

ರೆಡ್ಡಿಗೆ ಜಾಮೀನು ಕಷ್ಟಸಾಧ್ಯ 
ಅಕ್ರಮ ಗಣಿಗಾರಿಕೆ ಆರೋಪದಲ್ಲಿ ಸಿಬಿಐನಿಂದ ಬಂಧನಕ್ಕೆ ಒಳಗಾಗಿರುವ ಮಾಜಿ ಸಚಿವ ಜನಾರ್ದನ ರೆಡ್ಡಿ ಅವರಿಗೆ ಜಾಮೀನು ಸಿಗುವುದು ಸುಲಭದ ಮಾತಲ್ಲ ಎಂದು ಎಸ್.ಆರ್. ಹಿರೇಮಠ ಹೇಳಿದರು.

ಜನಾರ್ದನ ರೆಡ್ಡಿ ಸಣ್ಣ ತಪ್ಪು ಮಾಡಿಲ್ಲ. ಇಡೀ ದೇಶ ಬೆಚ್ಚಿ ಬೀಳುವಂತಹ ಅಪರಾಧ ಎಸಗಿರುವ ಅವರ ವಿರುದ್ಧ ತನಿಖೆ ನಡೆಯಬೇಕಿದೆ. ದಿನದಿನಕ್ಕೆ ತನಿಖೆ ವಿಸ್ತಾರಗೊಳ್ಳುತ್ತಿದೆ ಎಂದ ಅವರು, ನೈಸರ್ಗಿಕ ಸಂಪತ್ತು ಲೂಟಿ ಮಾಡಿದವರು ಜೈಲಿನಲ್ಲಿರುವುದೇ ಒಳಿತು ಎಂದರು.

ಅಕ್ರಮ ಗಣಿಗಾರಿಕೆ ಆರೋಪದಲ್ಲಿ ಸಿಬಿಐನಿಂದ ಬಂಧನಕ್ಕೆ ಒಳಗಾಗಿರುವ ಮಾಜಿ ಸಚಿವ ಜನಾರ್ದನ ರೆಡ್ಡಿ ಅವರಿಗೆ ಜಾಮೀನು ಸಿಗುವುದು ಸುಲಭದ ಮಾತಲ್ಲ ಎಂದು ಎಸ್.ಆರ್. ಹಿರೇಮಠ ಹೇಳಿದರು.

ಜನಾರ್ದನ ರೆಡ್ಡಿ ಸಣ್ಣ ತಪ್ಪು ಮಾಡಿಲ್ಲ. ಇಡೀ ದೇಶ ಬೆಚ್ಚಿ ಬೀಳುವಂತಹ ಅಪರಾಧ ಎಸಗಿರುವ ಅವರ ವಿರುದ್ಧ ತನಿಖೆ ನಡೆಯಬೇಕಿದೆ. ದಿನದಿನಕ್ಕೆ ತನಿಖೆ ವಿಸ್ತಾರಗೊಳ್ಳುತ್ತಿದೆ ಎಂದ ಅವರು, ನೈಸರ್ಗಿಕ ಸಂಪತ್ತು ಲೂಟಿ ಮಾಡಿದವರು ಜೈಲಿನಲ್ಲಿರುವುದೇ ಒಳಿತು ಎಂದರು.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT