ADVERTISEMENT

ನೇಪಥ್ಯಕ್ಕೆ ಹಂತಿ ಗುಂಡು

ಡಾ ಪಂಡಿತಾರಾಧ್ಯ
Published 8 ಅಕ್ಟೋಬರ್ 2017, 5:42 IST
Last Updated 8 ಅಕ್ಟೋಬರ್ 2017, 5:42 IST
ಕಂಪ್ಲಿ ಸಮೀಪದ ರಾಮಸಾಗರ ಗ್ರಾಮದಲ್ಲಿ ಮೂಲೆಗುಂಪಾಗಿರುವ ಹಂತಿ ಗುಂಡು
ಕಂಪ್ಲಿ ಸಮೀಪದ ರಾಮಸಾಗರ ಗ್ರಾಮದಲ್ಲಿ ಮೂಲೆಗುಂಪಾಗಿರುವ ಹಂತಿ ಗುಂಡು   

ಕಂಪ್ಲಿ: ಒಂದು ಕಾಲದಲ್ಲಿ ರೈತರು ಬೆಳೆದ ಬೆಳೆಗಳನ್ನು ಒಕ್ಕಣೆ ಮಾಡಲು ಬಳಸುತ್ತಿದ್ದ ‘ಹಂತಿ ಗುಂಡು’ ಇಂದು ಆಧುನಿಕ ಯಂತ್ರಗಳ ಭರಾಟೆಯಿಂದ ತೆರೆಮರೆಗೆ ಸರಿದಿದೆ. ಕಂಪ್ಲಿ ಹೋಬಳಿ ವ್ಯಾಪ್ತಿಯ ಪ್ರತಿ ಹಳ್ಳಿಗಳ ಆಯ್ದ ಸ್ಥಳಗಳಲ್ಲಿ ಈ ಗುಂಡುಗಳು ಅನಾಥವಾಗಿ ಬಿದ್ದಿವೆ.

ಹೇಗಿತ್ತು ಆಗ: ಬೆಳೆದ ಫಸಲುಗಳನ್ನು ರಾಶಿ ಮಾಡಲು ಹೊಲದಲ್ಲಿ ಯೋಗ್ಯ ಸ್ಥಳ ಗುರುತಿಸುತ್ತಿದ್ದರು. ಆ ಸ್ಥಳವನ್ನು ಸಗಣಿಯಿಂದ ಸಾರಿಸಿ ಕಣಕಟ್ಟೆ ಮಾಡಿಕೊಳ್ಳುತ್ತಿದ್ದರು. ಕಣಕಟ್ಟೆ ಮಧ್ಯೆ ಕೇಂದ್ರ ಬಿಂದು ಗುರುತಿಸಿ, ವಿಶಾಲ ಜಾಗ ಶುಚಿಗೊಳಿಸಿ ರಾಶಿ ಗುಂಡಿನಿಂದ ಸಮತಟ್ಟುಗೊಳಿಸುತ್ತಿದ್ದರು. ನಂತರ ಜಮೀನಿನಲ್ಲಿ ಕಟಾವು ಮಾಡಿದ ತೊಗರಿ, ಜೋಳ, ಸಜ್ಜೆ ಬೆಳೆಗಳನ್ನು ಬಂಡಿ ಮೂಲಕ ತಂದು ಕಣದಲ್ಲಿ ಸುರಿದು ಹಂತಿ ಗುಂಡಿಗೆ ಜೋಡು ಎತ್ತುಗಳನ್ನು ಕಟ್ಟಿ ತೆನೆಯಿಂದ ಕಾಳು ಬೇರ್ಪಡುವವರೆಗೆ ವೃತ್ತಕಾರದಲ್ಲಿ ತಿರುಗಿಸುತ್ತಿದ್ದರು.

‘ಹಂತಿ ಗುಂಡು ಬಳಸಿ ಒಕ್ಕಣೆ ಮಾಡಿದ ಕಾಳುಗಳಿಗೆ ನುಸಿ ಮುಟ್ಟುವುದಿಲ್ಲ. ಜತೆಗೆ ಈ ಧಾನ್ಯದಿಂದ ಸಿದ್ಧಪಡಿಸಿದ ಅಡುಗೆಯಲ್ಲಿ ಹೆಚ್ಚು ಪೌಷ್ಟಿಕಾಂಶ ಮತ್ತು ರುಚಿಕರವಾಗಿರುತ್ತಿತ್ತು’ ಎಂದು ಹಳೆ ತಲೆಮಾರಿನ ರೈತ ಮೆಟ್ರಿ ಗ್ರಾಮದ ನಿಡುಗೋಳು ದೊಡ್ಡಬಸಪ್ಪ ಅಂದಿನ ಹಂತಿ ಒಕ್ಕಣೆ ಪದ್ಧತಿಯನ್ನು ನೆನಪಿಸಿಕೊಂಡರು.

ADVERTISEMENT

‘ಇಂದು ಆಧುನಿಕತೆ ಸ್ಪರ್ಶದಿಂದ ಹಂತಿ ಗುಂಡು ಒಕ್ಕಣೆಯನ್ನೇ ರೈತ ಮರೆತೇ ಬಿಟ್ಟಿದ್ದಾರೆ. ಒಕ್ಕಣೆ ಯಂತ್ರಗಳು ಲಭ್ಯವಿಲ್ಲದ ಕಡೆ ರೈತರು ಬೆಳೆದ ಪೈರುಗಳನ್ನು ರಸ್ತೆಯ ಇಕ್ಕೆಲ, ರಾಜ್ಯ ಹೆದ್ದಾರಿಗಳ ಮೇಲೆ, ರಾಷ್ಟ್ರೀಯ ಹೆದ್ದಾರಿಯ ಸರ್ವೀಸ್ ರಸ್ತೆಗಳ ಮೇಲೆ ಎಲ್ಲೆಂದರಲ್ಲಿ ಸಂಗ್ರಹಿಸಿ, ವಾಹನ ಸವಾರರ ಪ್ರಾಣಾಪಾಯಕ್ಕೆ ಕಾರಣವಾಗುತ್ತಿದ್ದಾರೆ.

ಧಾನ್ಯಗಳನ್ನು ತೂರುವಾಗ ಅದರ ಹೊಟ್ಟು ಬೈಕ್‌ ಸವಾರರ ಕಣ್ಣಿಗೆ ಬಿದ್ದು ಅಪಘಾತಗಳು ಸಂಭವಿಸಿದ ಘಟನೆಗಳು ನಡೆದಿವೆ. ವಿಶೇಷವಾಗಿ ಈ ರೀತಿ ಒಕ್ಕಣೆಯಿಂದ ದವಸ-ಧಾನ್ಯಗಳಲ್ಲಿ ಕಲ್ಮಶಗಳು ಸೇರುತ್ತವೆ. ಈ ಕಾರಣದಿಂದ ರೈತರಿಗೆ ಮೂಲ ಸೌಕರ್ಯ ಹೊಂದಿದ ಸುಸಜ್ಜಿತ ಬೃಹತ್‌ ಕಣ ಕಟ್ಟೆಗಳನ್ನು ಪ್ರತಿ ಹಳ್ಳಿಗಳಲ್ಲಿ ನಿರ್ಮಿಸಬೇಕು ಎಂದು ಸುವಂತೆ’ ಕರ್ನಾಟಕ ರಾಜ್ಯ ರೈತ ಸಂಘ ಹಸಿರು ಸೇನೆ(ಹುಚ್ಚವ್ವನಹಳ್ಳಿ ಮಂಜುನಾಥ ಬಣ) ತಾಲ್ಲೂಕು ಅಧ್ಯಕ್ಷ ಬಿ. ಗಂಗಾಧರ ಮನವಿ ಮಾಡಿದರು.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.