ADVERTISEMENT

ನೇಮರಾಜಗೆ ಮತಿಭ್ರಮಣೆ: ಟೀಕೆ

‘ನಾನು ಅಭಿವೃದ್ಧಿ ಮಾಡಿಲ್ಲ ಎಂದು ಸಾಬೀತು ಮಾಡಿದರೆ ರಾಜಕೀಯ ಸನ್ಯಾಸ ಪಡೆಯುವೆ’

​ಪ್ರಜಾವಾಣಿ ವಾರ್ತೆ
Published 3 ಏಪ್ರಿಲ್ 2018, 9:43 IST
Last Updated 3 ಏಪ್ರಿಲ್ 2018, 9:43 IST

ಕೊಟ್ಟೂರು: ‘ನಾನು ಶಾಸಕನಾಗಿದ್ದ ಅವಧಿಯಲ್ಲಿ ₹1,500 ಕೋಟಿ ಮೊತ್ತದ ಅಭಿವೃದ್ಧಿ ಕಾರ್ಯ ನಡೆಸಿಲ್ಲ ಎಂದು ಬಿಜೆಪಿ ಮುಖಂಡ ಕೆ.ನೇಮರಾಜ ನಾಯ್ಕ ದಾಖಲೆಗಳೊಂದಿಗೆ ದೃಢಪಡಿಸಿದರೆ ರಾಜಕೀಯ ಸನ್ಯಾಸ ಪಡೆಯುತ್ತೇನೆ’ ಎಂದು ಮುಖಂಡ ಕಾಂಗ್ರೆಸ್ ಎಸ್.ಭೀಮಾನಾಯ್ಕ ಸೋಮವಾರ ಸವಾಲು ಹಾಕಿದರು. ಪಟ್ಟಣದಲ್ಲಿ ಅನೇಕ ಮುಖಂಡರನ್ನು ಭೇಟಿ ಮಾಡಿ ಬೆಂಬಲ ಕೋರಿದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದರು.

‘ನನ್ನ ಅವಧಿಯಲ್ಲಿ ಕ್ಷೇತ್ರದ ಅಭಿವೃದ್ಧಿಗೆ ಮಂಜೂರಾದ ಮತ್ತು ಕೈಗೊಂಡ ಅಭಿವೃದ್ಧಿಗಳ ಕುರಿತು ದಾಖಲೆ ಸಮೇತ ಕೊಟ್ಟೂರು ಕೊಟ್ಟೂರೇಶ್ವರ ಸ್ವಾಮಿ ಸನ್ನಿಧಿಯಲ್ಲಿ ಆಣೆ ಮಾಡುವೆ. ನನ್ನ ವಿರುದ್ಧ ದಾಖಲೆ ಸಮೇತ ಅವರೂ ಆಣೆ ಮಾಡಿ ದೃಢಪಡಿಸಲಿ’ ಎಂದು ಪಂಥಾಹ್ವಾನ ನೀಡಿದರು.‘ಐದು ವರ್ಷಗಳಲ್ಲಿ ಮಾಡಿದ ಸಾಧನೆ ಸಹಿಸಿಕೊಳ್ಳದ ನೇಮರಾಜ ಅವರು ಪೂರ್ಣ ಹತಾಶೆಗೊಂಡು ಚುನಾವಣೆಯಲ್ಲಿ ಸೋಲುವ ಭೀತಿಯಿಂದ ಮತಿ ಭ್ರಮಣೆಗೆ ಒಳಗಾಗಿದ್ದಾರೆ. ಅವರು ಆಸ್ಪತ್ರೆಗೆ ಸೇರಿ ಚಿಕಿತ್ಸೆ ಪಡೆಯುವುದಾದರೆ ತಾವೇ ಅದರ ವೆಚ್ಚ ಭರಿಸಲು ಸಿದ್ಧ’ ಎಂದು ಮೂದಲಿಸಿದರು.

‘ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷವನ್ನು ಮೂರನೇ ಸ್ಥಾನಕ್ಕೆ ತಳ್ಳುವ ಬಗ್ಗೆ ಹೇಳುವ ಅವರು, ಮೊದಲು ತಮಗೆ ಬಿಜೆಪಿ ಟಿಕೆಟ್ ಸಿಗುತ್ತದೆ ಎಂಬುದನ್ನು ಖಚಿತಪಡಿಸಿಕೊಳ್ಳಲಿ. ಒಂದು ವೇಳೆ ಅವರು ಬಿಜೆಪಿ ಅಭ್ಯರ್ಥಿಯಾದರೆ ಖಂಡಿತ ಅವರಿಗೆ ಠೇವಣಿ ಸಿಗದಂತೆ ಮಾಡುತ್ತೇನೆ’ ಎಂದರು.‘ಚುನಾವಣಾ ಸಂದರ್ಭದಲ್ಲಿ ಕೀಳು ಮಟ್ಟದ ರಾಜಕೀಯ ಮಾಡ ಹೊರಟಿರುವ ಬಿಜೆಪಿಯವರಿಗೆ ಮತದಾರರೇ ತಕ್ಕ ಪಾಠ ಕಲಿಸುತ್ತಾರೆ. ಕಾಲ ಮಿಂಚುವ ಮೊದಲು ಅವರು ಕ್ಷೇತ್ರದ ಅಭಿವೃದ್ಧಿ ಕುರಿತು ಸಾರ್ವಜನಿಕ ಸಭೆಯಲ್ಲಿ ಚರ್ಚಿಸಲು ಸಿದ್ಧನಿದ್ದೇನೆ. ಅವರಿಗೆ ಧೈರ್ಯವಿದ್ದರೆ ನನ್ನ ಸವಾಲು ಸ್ವೀಕರಿಸಿ ಕೊಟ್ಟೂರು ಕೊಟ್ಟೂರೇಶ್ವರ ಸ್ವಾಮಿ ಸನ್ನಿಧಿಗೆ ಬಂದು ಎದುರಿಸಲಿ’ ಎಂದು ಗುಡುಗಿದರು.

ADVERTISEMENT

‘ಚುನಾವಣೆ ಪೂರ್ವದಲ್ಲಿ ಕೊಟ್ಟ ಮಾತಿನಂತೆ ಈಗ ಜೆಡಿಎಸ್‍ಗೆ ರಾಜೀನಾಮೆ ನೀಡಿ ಕಾಂಗ್ರೆಸ್ ಸೇರಿದ್ದೇನೆ. ಚುನಾವಣೆಯಲ್ಲಿ ಪಕ್ಷದ ಅಭ್ಯರ್ಥಿಯನ್ನಾಗಿ ಯಾರನ್ನೇ ಹೈಕಮಾಂಡ್‌ ಮಾಡಿದರೂ ಸಾಮಾನ್ಯ ಕಾರ್ಯಕರ್ತನಂತೆ ಪಕ್ಷದ ಗೆಲುವಿನ ಶ್ರಮಿಸುತ್ತೇನೆ. ಸುಳ್ಳು ಹೇಳುವುದನ್ನೇ ಬಂಡವಾಳ ಮಾಡಿಕೊಂಡಿರುವ ಬಿಜೆಪಿಯವರ ಬಣ್ಣ ಬಯಲಾಗಲು ಕ್ಷಣಗಣನೆ ಆರಂಭವಾಗಿದೆ’ ಎಂದರು.

‘ಪರಿವರ್ತನಾ ಯಾತ್ರೆಯಲ್ಲಿ ಕಾರ್ಯಕರ್ತರನ್ನು ಕರೆ ತರಲಾಗದವರು, ಪಕ್ಷದಲ್ಲಿ ಒಗ್ಗಟ್ಟಿನಿಂದ ಇರಲಾರದವರು, ಬಹಿರಂಗವಾಗಿ ಭಿನ್ನಮತ ಸೃಷ್ಟಿಸಿ
ಕೊಂಡವರು, ನನ್ನ ವೈಯಕ್ತಿಕ ತೇಜೋವಧೆಗೆ ಇಳಿಯುವ ಮುನ್ನ ಒಮ್ಮೆ ಯೋಚಿಸಲಿ’ ಎಂದರು.

ಪಟ್ಟಣ ಪಂಚಾಯ್ತಿ ಸದಸ್ಯರಾದ ಬಿ.ಎಸ್.ವೀರೇಶ್, ಕರಡಿ ಕೊಟ್ರಯ್ಯ, ಡಿಶ್ ಮಂಜುನಾಥ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.