ADVERTISEMENT

ಪಂಪ್‌ಸೆಟ್‌ ಕೊಠಡಿ ತೆರವು;ವಿದ್ಯುತ್‌ ಕಡಿತ

ಕಾಲುವೆಯಿಂದ ಅನಧಿಕೃತ ನೀರು ಬಳಕೆ

​ಪ್ರಜಾವಾಣಿ ವಾರ್ತೆ
Published 3 ಜನವರಿ 2014, 9:26 IST
Last Updated 3 ಜನವರಿ 2014, 9:26 IST
ಕಂಪ್ಲಿ ಸಮೀಪದ ದೇವಸಮುದ್ರ, ಹಂಪಾದೇವನಹಳ್ಳಿ ಮತ್ತು ಜವುಕು ಗ್ರಾಮಗಳ ವ್ಯಾಪ್ತಿಯಲ್ಲಿ ಹಲವಾರು ರೈತರು ತುಂಗಭದ್ರಾ ಬಲದಂಡೆ ಕೆಳಮಟ್ಟದ ಕಾಲುವೆಯಿಂದ ಅನಧಿಕೃತವಾಗಿ ನೀರು ಪಡೆ ಯುತ್ತಿದ್ದ ಪಂಪ್‌ಸೆಟ್‌ ಕೊಠಡಿಗಳನ್ನು ಜೆಸಿಬಿ ಯಂತ್ರದ ಮೂಲಕ ಗುರುವಾರ ತೆರವುಗೊಳಿಸಲಾಯಿತು
ಕಂಪ್ಲಿ ಸಮೀಪದ ದೇವಸಮುದ್ರ, ಹಂಪಾದೇವನಹಳ್ಳಿ ಮತ್ತು ಜವುಕು ಗ್ರಾಮಗಳ ವ್ಯಾಪ್ತಿಯಲ್ಲಿ ಹಲವಾರು ರೈತರು ತುಂಗಭದ್ರಾ ಬಲದಂಡೆ ಕೆಳಮಟ್ಟದ ಕಾಲುವೆಯಿಂದ ಅನಧಿಕೃತವಾಗಿ ನೀರು ಪಡೆ ಯುತ್ತಿದ್ದ ಪಂಪ್‌ಸೆಟ್‌ ಕೊಠಡಿಗಳನ್ನು ಜೆಸಿಬಿ ಯಂತ್ರದ ಮೂಲಕ ಗುರುವಾರ ತೆರವುಗೊಳಿಸಲಾಯಿತು   

ಕಂಪ್ಲಿ:ಇಲ್ಲಿಯ ತುಂಗಭದ್ರಾ ಬಲದಂಡೆ ಕೆಳಮಟ್ಟದ ಕಾಲುವೆ(ಎಲ್‌.ಎಲ್‌.ಸಿ)ಯಿಂದ ಅನಧಿಕೃತವಾಗಿ ನೂರಾರು ಕ್ಯೂಸೆಕ್‌ ನೀರು ಬಳಕೆ ಮಾಡುತ್ತಿದ್ದ ರೈತರ ಪಂಪ್‌ಸೆಟ್‌ಗಳ ವಿದ್ಯುತ್‌ ಸಂಪರ್ಕ ಕಡಿತಗೊಳಿಸಿ ಜೆಸಿಬಿ ಯಂತ್ರದಿಂದ ಪಂಪ್‌ಸೆಟ್‌ ಕೊಠಡಿಗಳನ್ನು ಗುರುವಾರ ತೆರವುಗೊಳಿಸಲಾಯಿತು.

ಕಾಲುವೆ 20ನೇ ಕಿ.ಮೀ 30ಕಿ.ಮೀ ವ್ಯಾಪ್ತಿಯ ದೇವಸಮುದ್ರ, ಹಂಪಾದೇವನಹಳ್ಳಿ ಮತ್ತು ಜವುಕು ವ್ಯಾಪ್ತಿಯ ಸುಮಾರು 66 ಪಂಪ್‌ಸೆಟ್‌ ಕೊಠಡಿಗಳನ್ನು ಮತ್ತು ಭೂಮಿಯೊಳಗೆ ಅಳವಡಿಸಿದ್ದ ಪೈಪ್‌ಗಳನ್ನು ಈ ಸಂದರ್ಭದಲ್ಲಿ ತೆರವುಗೊಳಿಸಿದರು.

ಕಾಲುವೆ ಅಕ್ಕಪಕ್ಕದ ಅನೇಕ ರೈತರು ಮುಖ್ಯ ಕಾಲುವೆ ಮುಖಾಂತರ ಅನಧಿಕೃತವಾಗಿ ನೀರು ಪಡೆದು ಸಾವಿರಾರು ಎಕರೆಯಲ್ಲಿ ಭತ್ತ ನಾಟಿ ಮಾಡುವ ಮೂಲಕ ಆಂಧ್ರಪ್ರದೇಶಕ್ಕೆ ನಿಗದಿತ ಪ್ರಮಾಣದಲ್ಲಿ ನೀರು ತಲುಪುತ್ತಿರಲಿಲ್ಲ. ಈ ಹಿನ್ನೆಲೆಯಲ್ಲಿ ಕಾಲುವೆಯಿಂದ ನೀರು ಪಡೆಯದಂತೆ ಪ್ರಥಮ ಹಂತದಲ್ಲಿ ಕರಪತ್ರ ನೀಡಿ ಜಾಗೃತಿ ಮೂಡಿಸಲಾಗಿತ್ತು. ಆದರೆ ಅನಧಿಕೃತ ನೀರು ಬಳಕೆ ಮುಂದುವರಿದಿದ್ದರಿಂದ ನೋಟಿಸ್‌ ಸಹ ಜಾರಿ ಮಾಡಿಲಾಗಿತ್ತು.

ಅಂತಿಮವಾಗಿ ನಿಯಮ ಉಲ್ಲಂಘಿಸಿದ್ದರಿಂದ ಕಾನೂನು ಕ್ರಮ ತೆಗೆದುಕೊಳ್ಳ ಲಾಯಿತು ಎಂದು ಉಪ ವಿಭಾಗಾಧಿಕಾರಿ ಪಿ. ಸುನೀಲ್‌ಕುಮಾರ್‌ ವಿವರಿಸಿದರು. ತಹಶೀಲ್ದಾರ್‌ ರಮೇಶ್‌ ಕೋನರೆಡ್ಡಿ, ತುಂಗಭದ್ರಾ ಮಂಡಳಿ ಎಸ್‌.ಡಿ.ಒ ಪಾರ್ಥಸಾರಥಿ, ಎಸ್‌.ಒ ಸಮ್‌ದಾನಿ, ಉಪ ತಹಶೀಲ್ದಾರ ಕೆ. ಬಾಲಪ್ಪ, ಕಂದಾಯ ಅಧಿಕಾರಿ ರಮೇಶ್‌ನಾಯಕ, ಪಿಎಸ್‌ಐ ಡಿ. ಹುಲುಗಪ್ಪ, ನೀರಾವರಿ ಇಲಾಖೆ ಜೆಇ ತಿಪ್ಪೇಸ್ವಾಮಿ, ಜೆಸ್ಕಾಂ ಜೆಇ ತಿಪ್ಪೇಸ್ವಾಮಿ ಮತ್ತಿತರ ಅಧಿಕಾರಿಗಳು ತೆರವು ಕಾರ್ಯಾಚರಣೆಯಲ್ಲಿ ಭಾಗವಹಿಸಿದ್ದರು.

ರೈತರ ಎಚ್ಚರಿಕೆ
ತುಂಗಭದ್ರಾ ಬಲದಂಡೆ ಕೆಳಮಟ್ಟದ ಕಾಲುವೆ (ಎಲ್‌.ಎಲ್‌.ಸಿ)ಗೆ ನಿಗದಿಪಡಿಸಿದ ಪ್ರಮಾಣಕ್ಕಿಂತ ಹೆಚ್ಚಿನ ನೀರು ಬಿಡುಗಡೆ ಮಾಡಿ ಆಂಧ್ರಪ್ರದೇಶಕ್ಕೆ ಅನುಕೂಲ ಕಲ್ಪಿಸಲಾಗುತ್ತಿದೆ ಎಂದು ರೈತರು ದೂರಿದ್ದಾರೆ. ಈ ಬಗ್ಗೆ ಕರ್ನಾಟಕದ ರೈತರು ಸಂಘಟಿತರಾಗಿ ಹೋರಾಟ ನಡೆಸುವುದಾಗಿ ಎಚ್ಚರಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.