ADVERTISEMENT

ಪಡಗಾಂವ್‌ಕರ್ ವರದಿ ತಿರಸ್ಕರಿಸಲು ಆಗ್ರಹ

​ಪ್ರಜಾವಾಣಿ ವಾರ್ತೆ
Published 10 ಜುಲೈ 2012, 8:30 IST
Last Updated 10 ಜುಲೈ 2012, 8:30 IST

ಬಳ್ಳಾರಿ: ಜಮ್ಮು ಮತ್ತು ಕಾಶ್ಮೀರಕ್ಕೆ ಸಂಬಂಧಿಸಿದಂತೆ ಪತ್ರಕರ್ತ ದಿಲೀಪ್ ಪಡಗಾಂವ್‌ಕರ್ ನೇತೃತ್ವದ ಸಂವಾದಕಾರರು ನೀಡಿರುವ ವರದಿಯನ್ನು ಕೇಂದ್ರ ಸರ್ಕಾರ ಸಾರಾಸಗಟಾಗಿ ತಿರಸ್ಕರಿಸಬೇಕು ಎಂದು ಆಗ್ರಹಿಸಿ ಜಮ್ಮು ಮತ್ತು ಕಾಶ್ಮೀರ ಉಳಿಸಿ ಹೋರಾಟ ಸಮಿತಿ ಕಾರ್ಯಕರ್ತರು ನಗರದಲ್ಲಿ ಸೋಮವಾರ ಪ್ರತಿಭಟನೆ ನಡೆಸಿದರು.

ಜಮ್ಮು ಮತ್ತು ಕಾಶ್ಮೀರದ ಯಾವುದೇ ಭಾಗವನ್ನು ಪ್ರತ್ಯೇಕಿಸುವುದು ಹಾಗೂ ಆ ಭಾಗವನ್ನು ಸ್ವತಂತ್ರ ಎಂದು ಘೋಷಿಸುವುದು ರಾಷ್ಟ್ರದ್ರೋಹದ ಕಾರ್ಯವಾಗಿದೆ. ಕಾಶ್ಮೀರಕ್ಕಾಗಿ ಭಾರತ ಮತ್ತು ಪಾಕಿಸ್ತಾನಗಳ ನಡುವೆ ಯುದ್ಧಗಳೇ ನಡೆದಿದ್ದು, ಪಾಕಿಸ್ತಾನ ಪ್ರಾಯೋಜಿತ ಭಯೋತ್ಪಾದನಾ ಚಟುವಟಿಕೆ ವಿರುದ್ಧ ನಿರಂತರ ಕದನಗಳು ನಡೆದಿವೆ ಎಂದು ಸಮಿತಿಯ ಸಂಚಾಲಕ ಅನಿಲ್ ನಾಯ್ಡು ತಿಳಿಸಿದರು.

ಪಾಕಿಸ್ತಾನ ಪ್ರಚೋದಿತ ಭಯೋತ್ಪಾದನೆ ವಿರುದ್ಧ ನಡೆದ ಕಾಳಗದಲ್ಲಿ ದೇಶದ ಸಾವಿರಾರು ಸೈನಿಕರು ಹೋರಾಟ ನಡೆಸಿದ್ದು, ಸುಮಾರು 6 ಸಾವಿರಕ್ಕೂ ಅಧಿಕ ಸೈನಿಕರು ಪ್ರಾಣ ತ್ಯಾಗ ಮಾಡಿದ್ದಾರೆ. ಈ ತ್ಯಾಗ ಬಲಿದಾನಗ ಮಾಡಿಯೂ ಸಂವಿಧಾನ ಬಾಹಿರ ವರದಿಯನ್ನು ಒಪ್ಪಿಕೊಳ್ಳುವುದು ಸರಿಯಲ್ಲ. ವರದಿಯ ಅನುಷ್ಠಾನದಿಂದ ದೇಶದ ಆಂತರಿಕ ಹಾಗೂ ಬಾಹ್ಯ ಸುರಕ್ಷತೆಗೆ ಧಕ್ಕೆ ಉಂಟಾಗಿ, ಆರ್ಥಿಕ ವಲಯದ ಮೇಲೂ ದುಷ್ಪರಿಣಾಮ ಉಂಟಾಗುವ ಸಾಧ್ಯತೆ ಇದೆ ಎಂದು ಅವರು ಹೇಳಿದರು.

ಭಾರತದ ಸಂಸತ್ತು ಜಮ್ಮು ಮತ್ತು ಕಾಶ್ಮೀರಕ್ಕೆ ಸಂಬಂಧಿಸಿದಂತೆ ಯಾವುದೇ ಕಾನೂನು ರಚಿಸುವಂತಿಲ್ಲ ಎಂಬ ದೇಶ ವಿರೋಧಿ ಅಂಶಗಳು ವರದಿಯಲ್ಲಿದ್ದು,  ಭಾರತದ ಸಾರ್ವಭೌಮತ್ವಕ್ಕೆ ಅಡ್ಡಿ ಉಂಟು ಮಾಡುವ ಹಾಗೂ ಸಂವಿಧಾನಾತ್ಮಕ ಅಂಶಗಳಿಗೆ ಬೆಲೆ ಇಲ್ಲದಂತಹ ವರದಿಯನ್ನು ಜಾರಿಗೊಳಿಸುವುದು ಸರಿಯಲ್ಲ ಎಂದು ಅವರು ಹೇಳಿದರು.

ಕೇಂದ್ರ ಸರ್ಕಾರ ಒಂದೊಮ್ಮೆ ಈ ವರದಿಯ ಅನುಷ್ಠಾನಕ್ಕೆ ಮುಂದಾದರೆ ರಾಷ್ಟ್ರವ್ಯಾಪಿ ಹೋರಾಟ ಕೈಗೆತ್ತಿಕೊಳ್ಳುವುದು ಅನಿವಾರ್ಯ ಎಂದು ಅವರು  ಎಚ್ಚರಿಸಿದರು.

ವರದಿ ತಯಾರಿಕೆಗೆ ಯಾವ ಮಾನದಂಡ ಅನುಸರಿಸಲಾಗಿದೆ. ತಂಡವು ರಾಷ್ಟ್ರವಿರೋಧಿ ಶಕ್ತಿಗಳು ಹಾಗೂ ಪ್ರತ್ಯೇಕವಾದಿಗಳೊಂದಿಗೆ  ಸಂಬಂಧ ಹೊಂದಿದೆಯೇ ಎಂಬುದರ ಕುರಿತು ತನಿಖೆ ನಡೆಸಬೇಕು ಎಂದು ಆಗ್ರಹಿಸಿದ ಪ್ರತಿಭಟನಾಕಾರರು, ಕಾಶ್ಮೀರಕ್ಕೆ ವಿಶೇಷ ಸ್ಥಾನಮಾನ ನೀಡಿರುವ ಸಂವಿಧಾನದ 370ನೇ ವಿಧಿ ಜಾರಿಯಲ್ಲಿರಬೇಕು. ಕಾಶ್ಮೀರದ ಬಹುತೇಕ ಭೂಭಾಗವನ್ನು ಪಾಕಿಸ್ತಾನ ಮತ್ತು ಚೀನಾ ಅಕ್ರಮವಾಗಿ ವಶಪಡಿಸಿಕೊಂಡಿದ್ದು, ಅದನ್ನು ಹಿಂದಕ್ಕೆ ಪಡೆದುಕೊಳ್ಳಬೇಕು ಎಂದು ಆಗ್ರಹಿಸಿದರು.

ನಗರದ ಕನಕ ದುರ್ಗಮ್ಮ ದೇವಸ್ಥಾನದಿಂದ ಪ್ರತಿಭಟನಾ ರ‌್ಯಾಲಿ ನಡೆಸಿದ ನಂತರ ಗಡಗಿ ಚನ್ನಪ್ಪ ವೃತ್ತದಲ್ಲಿ ಮಾನವ ಸರಪಳಿ ನಿರ್ಮಿಸಿ ರಸ್ತೆತಡೆ ನಡೆಸಿದ ಬಳಿಕ ಜಿಲ್ಲಾಧಿಕಾರಿ ಕಚೇರಿಯಲ್ಲಿ ಈ ಕುರಿತ ಮನವಿಯನ್ನು ಸಲ್ಲಿಸಲಾಯಿತು.

ಸಂಘ ಪರಿವಾರದ ಮುಖಂಡರಾದ ನರೇಶ್ ಚಿರಾನಿಯಾ, ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಡಿ.ವಿನೋದ್‌ಕುಮಾರ್, ಬಿಜೆಪಿ ಜಿಲ್ಲಾ ಘಟಕದ ಅಧ್ಯಕ್ಷ ಗುತ್ತಿಗನೂರು ವಿರೂಪಾಕ್ಷಗೌಡ, ಕೇಂದ್ರ ಪರಿಹಾರ ಸಮಿತಿ ಅಧ್ಯಕ್ಷ ಕೆ.ಎ. ರಾಮಲಿಂಗಪ್ಪ, ನಾಗರಾಜ ರೆಡ್ಡಿ, ಸತೀಶ್ ಚಕ್ರವರ್ತಿ, ರಾಜಶೇಖರ್, ಡಾ.ರವೀಂದ್ರ, ಗಿರೀಶ್, ಕೈಲಾಶ್ ಡೊಂಗರ್‌ಚಂದ್, ಮಲ್ಲಪ್ಪ, ಅಡವಿಸ್ವಾಮಿ ಮತ್ತಿತರರು ಉಪಸ್ಥಿತರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.