ADVERTISEMENT

ಪತಿಗಿಂತ ಸತಿಯೇ ಶ್ರೀಮಂತೆ...!

ನೂರಾರು ಕೋಟಿಗಳ ಒಡೆಯ ಮೊಹ್ಮದ್‌ ಇಕ್ಬಾಲ್‌ ಹೊತುರ್

​ಪ್ರಜಾವಾಣಿ ವಾರ್ತೆ
Published 20 ಏಪ್ರಿಲ್ 2018, 5:28 IST
Last Updated 20 ಏಪ್ರಿಲ್ 2018, 5:28 IST
ಬಳ್ಳಾರಿ ನಗರ ಕ್ಷೇತ್ರದ ಜೆಡಿಸ್‌ ಅಭ್ಯರ್ಥಿ ಮೊಹ್ಮದ್‌ ಇಕ್ಬಾಲ್‌ ಹೊತುರ್ ಗುರುವಾರ ನಾಮಪತ್ರ ಸಲ್ಲಿಸಲು ಪಕ್ಷದ ಕಚೇರಿಯಿಂದ ಪಾಲಿಕೆ ಕಚೇರಿಗೆ ನಡೆದು ಬರುವಾಗ ಮಹಿಳಾ ಘಟಕದ ಮುಖಂಡರು ಅವರೊಂದಿಗೆ ಹೆಜ್ಜೆ ಹಾಕಿದರು
ಬಳ್ಳಾರಿ ನಗರ ಕ್ಷೇತ್ರದ ಜೆಡಿಸ್‌ ಅಭ್ಯರ್ಥಿ ಮೊಹ್ಮದ್‌ ಇಕ್ಬಾಲ್‌ ಹೊತುರ್ ಗುರುವಾರ ನಾಮಪತ್ರ ಸಲ್ಲಿಸಲು ಪಕ್ಷದ ಕಚೇರಿಯಿಂದ ಪಾಲಿಕೆ ಕಚೇರಿಗೆ ನಡೆದು ಬರುವಾಗ ಮಹಿಳಾ ಘಟಕದ ಮುಖಂಡರು ಅವರೊಂದಿಗೆ ಹೆಜ್ಜೆ ಹಾಕಿದರು   

ಬಳ್ಳಾರಿ: ನಗರ ಕ್ಷೇತ್ರದಲ್ಲಿ ಬಿ.ಫಾರಂ ಇಲ್ಲದೆ ಗುರುವಾರ ಎರಡು ನಾಮಪತ್ರ ಸಲ್ಲಿಸಿದ ಜೆಡಿಎಸ್‌ ಅಭ್ಯರ್ಥಿ, 61 ವಯಸ್ಸಿನ ಮೊಹ್ಮದ್‌ ಇಕ್ಬಾಲ್‌ ಹೊತುರ್ ನೂರಾರು ಕೋಟಿಗಳ ಒಡೆಯ.

ಅಕ್ರಮ ಗಣಿಗಾರಿಕೆ ಆರೋಪ ಸಂಬಂಧ ಅವರ ವಿರುದ್ಧ ಎಸ್‌ಐಟಿಯಲ್ಲಿ ಎರಡು ಪ್ರಕರಣಗಳು ದಾಖಲಾಗಿವೆ. ಈ ಎರಡೂ ಪ್ರಕರಣಗಳಲ್ಲಿ ಜಿ.ಜನಾರ್ದನರೆಡ್ಡಿ ಮೊದಲನೇ ಆರೋಪಿಯಾಗಿದ್ದಾರೆ. ಹೊತುರ್ ಕೊನೆಯ ಆರೋಪಿಯಾಗಿದ್ದಾರೆ.

ಹೊತುರ್ ಅವರಿಗಿಂತ ಅವರ ಪತ್ನಿಯೇ ಹೆಚ್ಚು ಶ್ರೀಮಂತೆ. ಅವರು ಹಿಂದಿನ ವರ್ಷದ ಆದಾಯ ₹ 1.04 ಕೋಟಿ ಇದ್ದರೆ, ಅವರ ಪತ್ನಿ ನಾದಿರಾ ಆದಾಯ ₹ 23.92 ಕೋಟಿಯಷ್ಟಿದೆ.

ADVERTISEMENT

ಆಸ್ತಿ ವಿವರ: ಹೊತುರ್ ಬಳಿ ₹ 12,75 ಲಕ್ಷ ನಗದು ಇದೆ. ಪತ್ನಿ ನಾದಿರಾ ಬಳಿ ₹ 53.88 ಲಕ್ಷ ನಗದು, ಪುತ್ರ ಶರ್ಮೀನ್‌ ಇಕ್ಬಾಲ್‌ ಬಳಿ ₹ 3.70 ಲಕ್ಷ ಹಾಗೂ ಪುತ್ರಿ ಜಹಾನ್‌ ಬಳಿ ₹ 17 ಸಾವಿರವಿದೆ.

ವಿವಿಧೆಡೆ ಹೊತುರ್ ₹ 17.05 ಲಕ್ಷ, ನಾದಿರಾ ₹ 69.12 ಲಕ್ಷ, ಶರ್ಮೀನ್‌ ₹ 9.39 ಲಕ್ಷ ಹಾಗೂ ಜಹಾನ್‌ ₹ 96 ಸಾವಿರ ಠೇವಣಿ ಹೊಂದಿದ್ದಾರೆ.

ವಿವಿಧ ಕಂಪೆನಿಗಳಲ್ಲಿ ಹೊತುರ್ ₹ 22.94 ಕೋಟಿ, ನಾದಿರಾ, ₹ 17.78 ಕೋಟಿ, ಶರ್ಮೀನ್‌ ₹ 12.30 ಕೋಟಿ, ಜಹಾನ್‌ ₹ 17.86 ಕೋಟಿ ಬಂಡವಾಳ ಹೂಡಿದ್ದಾರೆ. ಶರ್ಮೀನ್‌ ₹ 3 ಲಕ್ಷ ಹಾಗೂ ಜಹಾನ್‌ ₹ 13.54 ಲಕ್ಷ ಉಳಿತಾಯ ಪ್ರಮಾಣ ಪತ್ರ ಹೊಂದಿದ್ದಾರೆ.

ವಿವಿಧ ಕಂಪೆನಿ ಹಾಗೂ ವ್ಯಕ್ತಿಗಳಿಗೆ ಹೊತುರ್ ₹ 22.66 ಕೋಟಿ ಸಾಲ ನೀಡಿದ್ದರೆ, ನಾದಿರಾ 58.82 ಕೋಟಿ ಹಾಗೂ ಶರ್ಮೀನ್‌ ₹ 2.50 ಲಕ್ಷ ಸಾಲ ನೀಡಿದ್ದಾರೆ.

ಹೊತುರ್ ₹ 2.02ಕೋಟಿ ಮೌಲ್ಯದ ವಾಹನ, ₹ 1.14 ಕೋಟಿ ಮೌಲ್ಯದ ಆಭರಣ ಹೊಂದಿದ್ದರೆ, ನಾದಿರಾ ಬಳಿ ₹ 90.32 ಲಕ್ಷ ಮೌಲ್ಯದ ವಾಹನ ಹಾಗೂ ₹ 9.80 ಕೋಟಿ ಮೌಲ್ಯದ ಆಭರಣಗಳಿವೆ. ಸಂಡೂರು ತಾಲ್ಲೂಕಿನ ಹುಲಿಕುಂಟೆಯಲ್ಲಿ ಹೊತೂರ್‌ ₹ 12 ಲಕ್ಷ ಮೌಲ್ಯದ 5 ಎಕರೆ ಜಮೀನು ಹೊಂದಿದ್ದಾರೆ. ನಾದಿರಾ ಅವರು ಬೆಂಗಳೂರಿನಲ್ಲಿ ಹೊಂದಿರುವ ಜಮೀನಿನ ಬೆಲೆ ₹ 83.90 ಕೋಟಿ ಮೌಲ್ಯದ್ದು.

ಎರಡು ಅಪರಾಧ ಪ್ರಕರಣ

ಬಳ್ಳಾರಿ: ಅಪರಾಧ ಸಂಖ್ಯೆ 27/2015, ಹೊತೂರು ಪಾಲುದಾರರಾಗಿರುವ ಬಳ್ಳಾರಿಯ ಮೆಹಬೂಬ್ ಟ್ರಾನ್ಸ್‌ಪೋರ್ಟ್‌ ಕಂಪೆನಿ, ಹಾಗೂ ಅಪರಾಧ ಸಂಖ್ಯೆ 29/2015– ಹೊತೂರು ಪಾಲುದಾರರಾಗಿರುವ ಬಳ್ಳಾರಿಯ ಟ್ರಿಡೆಂಟ್‌ ಮಿನರಲ್ಸ್‌ ವಿರುದ್ಧ ಎಸ್‌ಐಟಿಯಲ್ಲಿ ಪ್ರಕರಣ ದಾಖಲಾಗಿದ್ದು ತನಿಖೆ ನಡೆದಿದೆ. ಐಪಿಸಿ 379, 409, 420, 447, 468 ಮತ್ತು 471 ಜೊತೆಗೆ 120 (ಬಿ) ಹಾಗೂ ಗಣಿ ಮತ್ತು ಖನಿಜ (ಅಭಿವೃದ್ಧಿ ಮತ್ತು ನಿಯಂತ್ರಣ) ಕಾಯ್ದೆಯ ಸೆಕ್ಷನ್‌ 21 ಮತ್ತು 23ರ ಜೊತೆಗೆ 4(1) ಮತ್ತು (41ಎ).‌

‘ ಜನ ಮುಖ್ಯ’

ಬಳ್ಳಾರಿ: ‘ಎಲ್ಲ ಸ್ಪರ್ಧಿಗಳೂ ಶಕ್ತಿವಂತರೇ. ಆದರೆ ನಾನು ಯಾವ ಎದುರಾಳಿಯನ್ನೂ ಗಂಭೀರವಾಗಿ ಪರಿಗಣಿಸಿಲ್ಲ. ಜನರಷ್ಟೇ ನನ್ನ ಗಮನಲ್ಲಿದ್ದಾರೆ. ನಾನು ಯಾರನ್ನೂ ಸೋಲಿಸಲು ಬಂದಿಲ್ಲ. ಗೆಲ್ಲುವ ಸಲುವಾಗಿ ಸ್ಪರ್ಧಿಸಿರುವೆ’ ಎಂದು ಹೊತೂರ್‌ ತಿಳಿಸಿದರು.
‘ಹತ್ತು ವರ್ಷದ ಕಾಂಗ್ರೆಸ್‌–ಬಿಜೆಪಿ ಆಡಳಿತದಲ್ಲಿ ನಗರ ಕ್ಷೇತ್ರ ಅಭಿವೃದ್ಧಿಯಾಗಿಲ್ಲ. ನೀರಿನ ಪೂರೈಕೆ ಸಮಸ್ಯೆಯೇ ದೊಡ್ಡದಾಗಿದೆ. ಅದನ್ನು ಸರಿಪಡಿಸಲಾಗುವುದು’ ಎಂದು ಅವರು ನಾಮಪತ್ರ ಸಲ್ಲಿಸಿದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದರು.

ಪಕ್ಷದ ಜಿಲ್ಲಾ ಘಟಕದ ಅಧ್ಯಕ್ಷ ಕೆ.ಶಿವಪ್ಪ, ಈಶಾನ್ಯ ಪದವೀಧರ ಕ್ಷೇತ್ರದ ಅಭ್ಯರ್ಥಿ ಪ್ರತಾಪರೆಡ್ಡಿ ಜೊತೆಗಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.