ADVERTISEMENT

‘ಪರಿಶಿಷ್ಟ ಜಾತಿ ಗುಂಪಿಗೆ ಸೇರಿಸಿ’

​ಪ್ರಜಾವಾಣಿ ವಾರ್ತೆ
Published 10 ಅಕ್ಟೋಬರ್ 2017, 5:24 IST
Last Updated 10 ಅಕ್ಟೋಬರ್ 2017, 5:24 IST

ಸಂಡೂರು: ತಮ್ಮನ್ನು ಪರಿಶಿಷ್ಟ ಜಾತಿಗೆ ಸೇರಿಸಬೇಕು ಎಂದು ಆಗ್ರಹಿಸಿ ಶ್ರೀ ಮಡಿವಾಳರ ಕ್ಷೇಮಾಭಿವೃದ್ಧಿ ಸಂಘದ ನೂರಾರು ಕಾರ್ಯಕರ್ತರು ಪಟ್ಟಣದಲ್ಲಿ ಸೋಮವಾರ ಕತ್ತೆಗಳೊಂದಿಗೆ ಮೆರವಣಿಗೆ ನಡೆಸಿದರು.

ಶಾಸಕ ಈ. ತುಕಾರಾಂ ಅವರಿಗೆ ಮನವಿ ಸಲ್ಲಿಸಿದ ಬಳಿಕ ಮಾತನಾಡಿದ ಸಂಘದ ಜಿಲ್ಲಾ ಘಟಕದ ಅಧ್ಯಕ್ಷ ಧನಂಜಯ, ‘ರಾಜ್ಯದಲ್ಲಿ 15–18 ಲಕ್ಷದಷ್ಟಿರುವ ಮಡಿವಾಳ ಸಮುದಾಯವು ಹಿಂದುಳಿದ ಜನಾಂಗದ ಸಮುದಾಯಗಳಲ್ಲಿಯೇ ಅತ್ಯಂತ ಕೆಳಸ್ತರದಲ್ಲಿದೆ. ಎಲ್ಲಾ ಕ್ಷೇತ್ರಗಳಲ್ಲಿಯೂ ಹಿಂದುಳಿದಿದೆ’ ಎಂದು ವಿಷಾದಿಸಿದರು.

‘ಅಗಸ, ರಜಕ, ಪರಿಠ ಹಾಗೂ ದೋಬಿ ಎಂದು ಕರೆಯಲ್ಪಡುವ ಸಮುದಾಯವನ್ನು ದೇಶದ 18 ರಾಜ್ಯಗಳಲ್ಲಿ ಹಾಗೂ 5 ಕೇಂದ್ರಾಡಳಿತ ಪ್ರದೇಶಗಳಲ್ಲಿ ಪರಿಶಿಷ್ಟ ಜಾತಿ ಗುಂಪಿಗೆ ಸೇರಿಸಲಾಗಿದೆ. ರಾಜ್ಯದಲ್ಲಿ ಮಾತ್ರ 2 ಎ ಗುಂಪಿಗೆ ಸೇರಿಸಲಾಗಿದ. ಈ ಕುರಿತು ಮುಖ್ಯಮಂತ್ರಿ ಮತ್ತು ಸಮಾಜ ಕಲ್ಯಾಣ ಸಚಿವರಿಗೆ ಮನವಿ ಸಲ್ಲಿಸಿದ್ದರೂ ಪ್ರಯೋಜನವಾಗಿಲ್ಲ’ ಎಂದು ಅಸಮಾಧಾನವನ್ನು ವ್ಯಕ್ತಪಡಿಸಿದರು.

ADVERTISEMENT

ಸಂಘದ ತಾಲ್ಲೂಕು ಘಟಕದ ಅಧ್ಯಕ್ಷ ಕೆ.ಎಂ. ಕುಮಾರಸ್ವಾಮಿ, ಉಪಾಧ್ಯಕ್ಷ ಎಂ. ನಾಗರಾಜ, ಪ್ರಧಾನ ಕಾರ್ಯದರ್ಶಿ ಎ. ಕಾಶಪ್ಪ, ಪ್ರಮುಖರಾದ ಎ. ಕುಮಾರಸ್ವಾಮಿ, ಡಿ.ಎಚ್. ಕೃಷ್ಣಮೂರ್ತಿ, ಎಂ. ನರಸಿಂಹ, ಕೆ. ಉಗ್ರನರಸಿಂಹ, ಎಂ. ವಿರುಪಾಕ್ಷಪ್ಪ, ಎಂ. ಚಂದ್ರಪ್ಪ, ಎಂ. ಕಾಶಿನಾಥ, ಹುಲಿಗೇಶಿ ಉಪಸ್ಥಿತರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.