ADVERTISEMENT

ಪಾಲಕರಿಂದಲೇ ಸಮಸ್ಯೆಗೆ ತೆರೆ

ಕಗ್ಗಂಟಾಗಿದ್ದ ಎಸ್‌ಡಿಎಂಸಿ ಸದಸ್ಯರ ಆಯ್ಕೆ

​ಪ್ರಜಾವಾಣಿ ವಾರ್ತೆ
Published 7 ಸೆಪ್ಟೆಂಬರ್ 2013, 5:29 IST
Last Updated 7 ಸೆಪ್ಟೆಂಬರ್ 2013, 5:29 IST

ಕೂಡ್ಲಿಗಿ: ಗ್ರಾಮದ ಎರಡು ಗುಂಪುಗಳ ನಡುವೆ ಹಗ್ಗಜಗ್ಗಾಟದಿಂದಾಗಿ ತಾಲ್ಲೂಕಿನ ಕಂದಗಲ್ಲು ಸರ್ಕಾರಿ ಪ್ರೌಢಶಾಲೆಯ ಶಾಲಾಭಿವೃದ್ಧಿ ಸಮಿತಿ ಸದಸ್ಯರ ಆಯ್ಕೆ ತಿಂಗಳಿಂದಲೂ ಕಗ್ಗಂಟಾಗಿ ಉಳಿದಿತ್ತು. ಆದರೆ ಮಕ್ಕಳ ಪಾಲಕರೇ ಶಾಲೆಗೆ ಹಾಜರಾಗಿ  ಸದಸ್ಯರನ್ನು ಆಯ್ಕೆಮಾಡುವುದರ ಮೂಲಕ ಎರಡು ಗುಂಪುಗಳ ವಿವಾದಕ್ಕೆ ತೆರೆ ಎಳೆದಿದ್ದಾರೆ. 

ಕಂದಗಲ್ಲು ಗ್ರಾಮದ ಸರ್ಕಾರಿ ಪ್ರೌಢಶಾಲೆ ಗಜಾಪುರ-ಕಂದಗಲ್ಲು ಎರಡು ಗ್ರಾಮಗಳ ಮಧ್ಯೆ ಇದ್ದು, ಈ ಶಾಲೆಯಲ್ಲಿ ಕಂದಗಲ್ಲು ಹಾಗೂ ಗಜಾಪುರ ಗ್ರಾಮಗಳ ಮಕ್ಕಳು ವಿದ್ಯಾಭ್ಯಾಸ ಮಾಡುತ್ತಿದ್ದು, ಸತತ ಮೂರು ವರ್ಷಗಳಿಂದ ತಾಲ್ಲೂಕಿನಲ್ಲಿ ಎಸ್.ಎಸ್.ಎಲ್.ಸಿ. ಪರೀಕ್ಷೆಯಲ್ಲಿ   ನೂರಕ್ಕೆ ನೂರು ಫಲಿತಾಂಶ ಬಂದು ಇಡಿ ತಾಲ್ಲೂಕಿಗೆ ಕೀರ್ತಿ ತಂದಿದ್ದು, ಆದರೆ ತಿಂಗಳಿನಿಂದಲೂ ಶಾಲಾಭಿವೃದ್ಧಿ ಸಮಿತಿ ರಚನೆ ಪ್ರತಿಷ್ಠೆಯಾಗಿ ಎರಡು ಗುಂಪುಗಳ ಮಧ್ಯ ಆರೋಪ, ಪ್ರತ್ಯಾರೋಪಗಳಿದ್ದವು. ಹೀಗಾಗಿ   ಈ ಸಮಸ್ಯೆ ಬಗೆಹರಿಸುವುದೇ ಸವಾಲಾಗಿತ್ತು. ಬುಧವಾರ ಶಾಲೆಯ ಮಕ್ಕಳಿಗೆ ಸಂಬಂಧಿಸಿದ  ಬಹುತೇಕ ಪಾಲಕರು-ಪೋಷಕರು ಖುದ್ದು ಹಾಜರಾಗಿ ಸದಸ್ಯರನ್ನು ಆಯ್ಕೆ ಮಾಡಿದರು.

ಶಾಸಕರು ಅಧ್ಯಕ್ಷರಾಗಿರುವ ಶಾಲಾಭಿವೃದ್ಧಿ ಸಮಿತಿಗೆ ಸದಸ್ಯರನ್ನು  ಮಾತ್ರ ಆಯ್ಕೆ ಮಾಡುವ ಅಧಿಕಾರ ಪೋಷಕರಿಗಿದ್ದು, ಈ ಶಾಲೆಯ  ಪೋಷಕರು 9 ಸದಸ್ಯರನ್ನು ಆಯ್ಕೆ ಮಾಡಿದರು. ಮುಖ್ಯಶಿಕ್ಷಕರು ಹಾಗೂ ಸಹಶಿಕ್ಷಕರು ಪ್ರಜ್ಞಾವಂತ ಪೋಷಕರು ಪಾರದರ್ಶಕ ವ್ಯವಸ್ಥೆಗೆ  ಮುಂದಾಗಿದ್ದರಿಂದ  ಸದಸ್ಯರ ಆಯ್ಕೆಯ ಕಗ್ಗಂಟು ಬಗೆಹರಿಯುವುದಿಲ್ಲ ಎಂದು ತಿಳಿದಿದ್ದ ಗ್ರಾಮಸ್ಥರು ನೆಮ್ಮದಿಯ ನಿಟ್ಟುಸಿರು ಬಿಟ್ಟರು.

ಶಾಲೆಗಳಲ್ಲಿ ರಾಜಕೀಯ ಜಿದ್ದಾಜಿದ್ದಿ ತಂದಿದ್ದರಿಂದ ಈ ರೀತಿಯ ಹಗ್ಗ-ಜಗ್ಗಾಟಗಳು ಎಲ್ಲಾ ಕಡೆ ನಡೆಯುತ್ತಿದ್ದು ಪೋಷಕರೇ ಆಯ್ಕೆ ಮಾಡಿದ ಸಮರ್ಥ ಸದಸ್ಯರು ಆಯ್ಕೆಯಾದರೆ ಯಾವುದೇ ಭಿನ್ನಾಭಿಪ್ರಾಯಗಳು ಬರುವುದಿಲ್ಲ ಎಂಬುದನ್ನು ಕಂದಗಲ್ಲು ಸಕಾ9ರಿ ಪ್ರೌಡಶಾಲೆಯ ಪೋಷಕರು ತೋರಿಸಿಕೊಟ್ಟಿದ್ದಾರೆ. ಮುಂಜಾಗೃತ ಕ್ರಮವಾಗಿ ಸೂಕ್ತ ಪೊಲೀಸ್ ಬಂದೋಬಸ್ತ್ ಮಾಡಲಾಗಿತ್ತು.

ಡಿ.ಶಾಂತಮ್ಮ, ಬಿ.ಗೌರಮ್ಮ, ಡಿ.ಲಲಿತಮ್ಮ, ಜುಲ್ಕಿ ರಾಜಪ್ಪ, ಬಾರಿಕರ ಚನ್ನಬಸಪ್ಪ, ಎಚ್.ಕೆ. ಮರಿಯಪ್ಪ, ದೇವರಕೊಳ್ಳದ ಕೊಟ್ರೇಶ್,  ಜಲ್ದಿಮಪ್ಪರ ಕೊಟ್ರೇಶ್,  ಕೆ.ರೇವಣಸಿದ್ದಪ್ಪ ಇವರನ್ನು ಆಯ್ಕೆ ಮಾಡಲಾಯಿತು. ಈ ಪಟ್ಟಿಗೆ ಹಗರಿಬೊಮ್ಮನಹಳ್ಳಿ ಶಾಸಕ ಎಸ್ . ಭೀಮಾನಾಯ್ಕ ಅವರ ಅನುಮೋದನೆಯಾದರೆ ಅಂತಿಮವಾಗುತ್ತದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.