ADVERTISEMENT

ಪೀಠೋಪಕರಣ ಖರೀದಿಯಲ್ಲಿ ಅಕ್ರಮ ಆರೋಪ

​ಪ್ರಜಾವಾಣಿ ವಾರ್ತೆ
Published 22 ಡಿಸೆಂಬರ್ 2012, 6:09 IST
Last Updated 22 ಡಿಸೆಂಬರ್ 2012, 6:09 IST

ಬಳ್ಳಾರಿ: ಜಿಲ್ಲೆಯ ವಿವಿಧ ಪ್ರೌಢಶಾಲೆಗಳಿಗೆ ಅಗತ್ಯವಿರುವ ಪೀಠೋಪಕರಣ ಖರೀದಿಯಲ್ಲಿ ಭಾರಿ ಅವ್ಯವಹಾರ ನಡೆದಿದೆ ಎಂದು ಶುಕ್ರವಾರ  ನಡೆದ ಜಿಲ್ಲಾ ಪಂಚಾಯಿತಿಯಲ್ಲಿ ಸಾಮಾನ್ಯ ಸಭೆಯಲ್ಲಿ ಆರೋಪಿಸಿದ ಸದಸ್ಯರು, ಸಮಗ್ರ ತನಿಖೆಗೆ  ಪಟ್ಟುಹಿಡಿದರು.

ಬಿಜೆಪಿ ಸದಸ್ಯ ಚೆನ್ನಬಸವನಗೌಡ ಈ ಕುರಿತು ಆರೋಪ ಮಾಡಿದರಲ್ಲದೆ, ಶಾಲಾ ಅಭಿವೃದ್ಧಿ ಸಮಿತಿ (ಎಸ್‌ಡಿಎಂಸಿ) ವತಿಯಿಂದಲೇ ಶಾಲೆಗಳಿಗೆ ಅಗತ್ಯವಿರುವ ಬೆಂಚು-ಮೇಜುಗಳನ್ನು ಖರೀದಿಸಬೇಕೆಂಬ ನಿಯಮವಿದ್ದರೂ, ಶಿಕ್ಷಣ ಇಲಾಖೆ ಅಧಿಕಾರಿಗಳು ಹಾಗೂ ಪ್ರಭಾವಿಗಳು ಅದನ್ನು ಗಾಳಿಗೆ ತೂರಿ, ಏಜೆನ್ಸಿಯೊಂದರ ಮೂಲಕ ಕಳಪೆ ಗುಣಮಟ್ಟದ ಬೆಂಚುಗಳನ್ನು ಪೂರೈಸಿದ್ದಾರೆ ಎಂದು ದೂರಿದರು.

ಸರ್ವಶಿಕ್ಷಣ ಅಭಿಯಾನದ ಅಡಿಯ ಯೋಜನೆಗೆ ಸಂಬಂಧಿಸಿದಂತೆ ಎಸ್‌ಡಿಎಂಸಿ ಮೂಲಕವೇ ಪೀಠೋಪಕರಣ ಖರೀದಿಸಬೇಕು. ಆದರೆ, ಟೆಂಡರ್ ಕರೆಯದೆ, ಪಾರದರ್ಶಕತೆ ಕಾಯ್ದುಕೊಳ್ಳದೆ ಬೇಕಾಬಿಟ್ಟಿಯಾಗಿ ತಮಗೆ ಬೇಕಾದವರಿಗೆ ಪೀಠೋಪಕರಣ ಸರಬರಾಜಿಗೆ ಆದೇಶ ನೀಡಲಾಗಿದೆ ಎಂದು ದೂರಿದರು.

ಪ್ರತಿ ತಾಲ್ಲೂಕಿನಲ್ಲಿ 40ರಿಂದ 50 ಲಕ್ಷ ರೂಪಾಯಿ ಮೌಲ್ಯದ ಪೀಠೋಪಕರಣ ಖರೀದಿಸಲಾಗಿದ್ದು, ಪೂರೈಕೆಯಾಗಿರುವ ಎಲ್ಲ ಪೀಠೋಪಕರಣಗಳು ಕಳಪೆಯಾಗಿವೆ. ಈ ಕುರಿತು ಸಮಗ್ರ ತನಿಖೆಗೆ ಆದೇಶ ನೀಡಬೇಕು ಎಂದು ಹಿರೇಹಡಗಲಿ ಕ್ಷೇತ್ರದ ಸದಸ್ಯ ವಸಂತ ದನಿಗೂಡಿಸಿದರು.

ಪೀಠೋಪಕರಣ ಖರೀದಿ ಪ್ರಕ್ರಿಯೆಯು ಆಯಾ ಎಸ್‌ಡಿಎಂಸಿಗಳಿಗೆ ಸಂಬಂಧಿಸಿದ್ದು, ಈ ಕುರಿತು ಪರಿಶೀಲನೆ ನಡೆಸಿ ವರದಿ ಸಲ್ಲಿಸಲಾಗುವುದು ಎಂದು ಸಾರ್ವಜನಿಕ ಶಿಕ್ಷಣ ಇಲಾಖೆ ಉಪನಿರ್ದೇಶಕ ನಾರಾಯಣಗೌಡ ಸಭೆಗೆ ತಿಳಿಸಿದರಾದರೂ,  ಸದಸ್ಯರು ಇದಕ್ಕೆ ಸಮ್ಮತಿ ಸೂಚಿಸದೆ, ತನಿಖೆಗೆ ಆದೇಶ ನೀಡುವಂತೆ ಒಕ್ಕೊರಲಿನ  ಒತ್ತಾಯಿಸಿದರು.

ಒಂದು ವಾರದೊಳಗೆ ಈ ಕುರಿತು ಪರಿಶೀಲನೆ ನಡೆಸಿ, ವರದಿ ಒಪ್ಪಿಸುವಂತೆ ಮುಖ್ಯ  ಕಾರ್ಯನಿರ್ವಾಹಕ ಅಧಿಕಾರಿ ಮಂಜುನಾಥ ನಾಯಕ್ ಸೂಚಿಸಿದರಲ್ಲದೆ, ಪೀಠೋಪಕರಣ ಖರೀದಿಯನ್ನು ನಿರ್ದಿಷ್ಟ ಏಜೆನ್ಸಿಗೆ ಒಪ್ಪಿಸಿದ್ದು ಕಂಡುಬಂದಲ್ಲಿ ತನಿಖೆ ನಡೆಸಲಾಗುವುದು ಎಂಬ ಭರವಸೆ ನೀಡಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.