ADVERTISEMENT

ಪ್ರತಿಭಾನ್ವಿತರನ್ನು ಗುರುತಿಸಬೇಕು: ರವೀಂದ್ರ

​ಪ್ರಜಾವಾಣಿ ವಾರ್ತೆ
Published 20 ಫೆಬ್ರುವರಿ 2012, 6:00 IST
Last Updated 20 ಫೆಬ್ರುವರಿ 2012, 6:00 IST

ಹೂವಿನಹಡಗಲಿ: ಸೃಜನಶೀಲ ಚಟುವಟಿಕೆಗಳ ಮೂಲಕ ಕೆಲಸ ಮಾಡುವ ಕಲಾ ಸಂಸ್ಥೆಗಳು, ಪ್ರತಿಭಾನ್ವಿತ ಕಲಾವಿದರನ್ನು ಗುರುತಿಸಿ, ಪ್ರೋತ್ಸಾಹಿಸುವ ಜೊತೆಗೆ ಭವಿಷ್ಯ ರೂಪಿಸಲು ಆದ್ಯತೆ ನೀಡಬೇಕು ಎಂದು ಬಳ್ಳಾರಿ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಎಂಪಿ. ರವೀಂದ್ರ ಹೇಳಿದರು.

ಪಟ್ಟಣದ ಜಿಬಿಆರ್ ಕಾಲೇಜ್ ಆವರಣದಲ್ಲಿ ಶನಿವಾರ ರಾತ್ರಿ ಚಂದಮಾಮ ಕಲಾಸಂಸ್ಥೆಯ ನಾಲ್ಕನೇ ವಾರ್ಷಿಕೋತ್ಸವ ಹಾಗೂ ಮಾಜಿ ಉಪಮುಖ್ಮಮಂತ್ರಿ ದಿ.ಎಂ.ಪಿ.ಪ್ರಕಾಶರ ಪ್ರಥಮ ಪುಣ್ಯಸ್ಮರಣೆ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.

ಪ್ರಸ್ತತ ರಾಜಕೀಯದಲ್ಲಿ ಒಳ್ಳೆಯವರಿಗೆ ಕಾಲವಿಲ್ಲ ನಮ್ಮ ತಂದೆಯವರ ಕಾಲದ ರಾಜಕೀಯಕ್ಕೂ ಇಂದಿನ ರಾಜಕೀಯಕ್ಕೂ ಬಹಳ ವ್ಯತ್ಯಾಸವಾಗಿದೆ. ರಾಜಕೀಯದಿಂದ ಮುಕ್ತವಾಗಿರುವ ಚಂದಮಾಮ ಕಲಾ ಸಂಸ್ಥೆ ನಾಡಿನಾದ್ಯಂತ ಬೆಳೆದು ಅನೇಕ ಪ್ರತಿಭಾವಂತ ಕಲಾವಿದರಿಗೆ ಪ್ರೋತ್ಸಾಹಿಸಬೇಕು ಎಂದು ಮನವಿ ಮಾಡಿದರು.

ರಂಗಭೂಮಿ ಕಲಾವಿದ ಹಾಗೂ ಚಲನಚಿತ್ರ ನಟ ರಾಜು ತಾಳೀಕೋಟೆ ಮಾತನಾಡಿ, ಕಲಾವಿದರಿಗೆ ಆ ದಿನ ಸತ್ಕಾರಗಳಿದ್ದವು ಆದರೆ ಸರ್ಕಾರಗಳಿಂದ ಪ್ರೋತ್ಸಾಹ ಸಿಗುತ್ತಿಲ್ಲ ಎಂದು ಖೇದ ವ್ಯಕ್ತಪಡಿಸಿದರು.

ಗಂಗಾವತಿ ಅನುಮೋಲ್ ಗ್ರೂಪ್ ಸಂಸ್ಥೆಯ ಮಾಲೀಕ ಎಂ.ಎ.ವಲಿಸಾಬ್ ಮಾತನಾಡಿ `ಪ್ರಕಾಶರು ನಮ್ಮನ್ನು ಅಗಲಿದ್ದಾರೆ ಆದರೆ ಅವರ ಆದರ್ಶಗಳು ಇಂದಿಗೂ ಪ್ರಕಾಶಮಾನವಾಗಿವೆ~ ಎಂದು ಹೇಳಿದರು.

ಗವಿಮಠದ  ಹಿರಿಶಾಂತವೀರ ಸ್ವಾಮೀಜಿ ಮಾತನಾಡಿ, ಚಂದಮಾಮ ಕಲಾ ಸಂಸ್ಥೆಯು ನಾಡಿನ ಜನರಿಗೆ ಸ್ಫೂರ್ತಿಯಾಗಲಿ ಸಂಸ್ಥೆಯಿಂದ ಕ್ರೀಡಾಕೂಟಗಳನ್ನು, ಉಚಿತ ವೈದ್ಯಕೀಯ ತಪಾಸಣೆ ಶಿಬಿರಗಳನ್ನು ಮಾಡುವ ಮೂಲಕ ಸಂಸ್ಥೆ ಉನ್ನತ ಸ್ಥಾನಕ್ಕೆ ಹೋಗಲಿ ಎಂದು ಹಾರೈಸಿದರು. 

ಪ್ರಜಾಪಿತ ಬ್ರಹ್ಮಕುಮಾರಿ ಈಶ್ವರೀಯ ವಿಶ್ವವಿದ್ಯಾನಿಲಯದ ಸಂಚಾಲಕರಾದ ಸುರೇಖಾಜಿ, ಖ್ಯಾತ ಚಲನ ಚಿತ್ರನಟ ಸುನಿಲ್, ನಮಿತಾರಾವ್, ಸಂಸ್ಥೆಯ ಕಾರ್ಯದರ್ಶಿ ಲಕ್ಷಣ, ಜಿಬಿಆರ್ ಕಾಲೇಜು ಆಡಳಿತ ಮಂಡಳಿ ಅಧ್ಯಕ್ಷ ಐಗೋಳ ಚಿದಾನಂದ,ಗಜಾನನ ದಿವಾಕರ, ನರಸಿಂಹಪ್ಪ ದಿವಾಕರ ಉಪಸ್ಥಿತರಿದ್ದರು.

ಬ್ರಹ್ಮಕುಮಾರಿ ಭಾರತೀಜಿ ಕಾರ್ಯಕ್ರಮ ನಿರೂಪಿಸಿದರು. ನಂತರ ಸಂಜೆ ಸೂರ್ಯ ಬೆಂಗಳೂರು ಕಲಾವಿದರಿಂದ ಗೀತನಾಟಕ ಪುಣ್ಯಕೋಟಿ ಹಾಗೂ ರಾಜು ತಾಳೀಕೋಟೆ ಇವರಿಂದ ಹಾಸ್ಯ ಕಾರ್ಯಕ್ರಮ, ಖ್ಯಾತ ನಟಿ ನಮಿತಾ ರಾವ್‌ರಿಂದ ಅನೇಕ ಸಾಂಸ್ಕೃತಿಕ ಕಾರ್ಯಕ್ರಮ ಜರುಗಿದವು. ಅನೇಕ ಕಲಾವಿದರನ್ನು ಸನ್ಮಾನಿಸಿ ಗೌರವಿಸಲಾಯಿತು.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.