ADVERTISEMENT

ಪ್ರಮುಖ ಪಕ್ಷಗಳ ಕಾದು ನೋಡುವ ತಂತ್ರ...!

ಸಿದ್ದಯ್ಯ ಹಿರೇಮಠ
Published 8 ಏಪ್ರಿಲ್ 2013, 6:26 IST
Last Updated 8 ಏಪ್ರಿಲ್ 2013, 6:26 IST

ಚುನಾವಣಾ ಟಿಕೆಟ್ ಹಂಚಿಕೆ

ಬಳ್ಳಾರಿ: ಒಂದು ಪಕ್ಷದಲ್ಲಿ ಟಿಕೆಟ್ ದೊರೆಯದೆ ತೀವ್ರ ಅಸಮಾಧಾನಕ್ಕೆ ಒಳಗಾಗುವ ಪ್ರಮುಖ ಟಿಕೆಟ್ ಆಕಾಂಕ್ಷಿಗಳು ಬಂಡಾಯದ ಬಾವುಟ ಬೀಸಿ, ಇನ್ನೊಂದು ಪಕ್ಷದ ಕದ ತಟ್ಟುವುದು ಸಾಮಾನ್ಯ.

ಜಿಲ್ಲೆಯಲ್ಲಿ ಕಾಂಗ್ರೆಸ್ ಪಕ್ಷದ ಟಿಕೆಟ್ ದೊರೆಯದ್ದರಿಂದ ಅನೇಕ ಆಕಾಂಕ್ಷಿಗಳು ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದು, ನವದೆಹಲಿಯಲ್ಲೇ ಬೀಡುಬಿಟ್ಟು ಅಂತಿಮ ಹಂತದ ಕಸರತ್ತು ನಡೆಸುತ್ತಿದ್ದಾರೆ. ಅಸಮಾಧಾನಗೊಂಡಿರುವ ಆ ಪಕ್ಷದ ಪ್ರಮುಖರಿಗೆ ಗಾಳ ಹಾಕುವ ನಿಟ್ಟಿನಲ್ಲಿ ಪ್ರಮುಖ ಪಕ್ಷಗಳು ಯತ್ನಿಸುತ್ತಿದ್ದ, ಕಾದು ನೋಡುವ ತಂತ್ರ ಅನುಸರಿಸುತ್ತಿವೆ.


ಬಿಜೆಪಿ, ಜೆಡಿಎಸ್ ಹಾಗೂ ಬಿಎಸ್‌ಆರ್ ಕಾಂಗ್ರೆಸ್ ಪಕ್ಷಗಳು ಜಿಲ್ಲೆಯ 9 ವಿಧಾನಸಭೆ ಕ್ಷೇತ್ರಗಳ ಪೈಕಿ ಕೆಲವು ಕ್ಷೇತ್ರಗಳಲ್ಲಿ ಇದುವರೆಗೂ ಟಿಕೆಟ್ ಹಂಚಿಕೆಯ ಗೋಜಿಗೆ ಹೋಗದೆ, ಅನ್ಯ ಪಕ್ಷದ ಅತೃಪ್ತರನ್ನು ತಮ್ಮೆಡೆ ಸೆಳೆದುಕೊಳ್ಳಲು ಇನ್ನಿಲ್ಲದ ಪ್ರಯತ್ನ ನಡೆಸಿವೆ.

ಮೂರರಲ್ಲಿ ಮಾತ್ರ ಅಂತಿಮ: ಕಳೆದ ಬಾರಿಯ ಚುನಾವಣೆಯಲ್ಲಿ ಜಿಲ್ಲೆಯ ಸಂಡೂರು ವಿಧಾನಸಭೆ ಕ್ಷೇತ್ರವೊಂದನ್ನು ಹೊರತುಪಡಿಸಿ ಮಿಕ್ಕ ಎಂಟು ಕಡೆ ಗೆಲುವು ಸಾಧಿಸಿ ಬೀಗಿದ್ದ ಬಿಜೆಪಿ, ಪ್ರಸ್ತುತ ರೆಡ್ಡಿ ಸಹೋದರರು ಪಕ್ಷದತ್ತ ಮುನಿಸಿಕೊಂಡಿದ್ದರಿಂದ ಅಸ್ತಿತ್ವಕ್ಕೆ ಪರದಾಡುತ್ತಿದ್ದು, ಸೂಕ್ತ ಅಭ್ಯರ್ಥಿಗಳಿಗಾಗಿ ತಡಕಾಡುತ್ತಿದೆ.

ಜಿಲ್ಲೆಯ ಹಗರಿ ಬೊಮ್ಮನಹಳ್ಳಿ, ಹೂವಿನ ಹಡಗಲಿ ಮತ್ತು ಸಿರುಗುಪ್ಪ ಕ್ಷೇತ್ರಗಳ ಹಾಲಿ ಶಾಸಕರಿಗೆ ಟಿಕೆಟ್ ಘೋಷಿಸಿದ್ದು, ವಿಜಯನಗರ (ಹೊಸಪೇಟೆ), ಕಂಪ್ಲಿ, ಕೂಡ್ಲಿಗಿ ಕ್ಷೇತ್ರಗಳಲ್ಲಿ ಟಿಕೆಟ್ ದೊರೆಯದ ಕಾಂಗ್ರೆಸ್ ಅತೃಪ್ತರಿಗಾಗಿ ಕಾಯುತ್ತಿದೆ.

ವಿಜಯನಗರ ಕ್ಷೇತ್ರದ ಶಾಸಕ ಆನಂದ್‌ಸಿಂಗ್ ಪಕ್ಷೇತರರಾಗಿ ಸ್ಪರ್ಧಿಸಲು ನಿರ್ಧರಿಸಿದ್ದರಿಂದ, ಕಾಂಗ್ರೆಸ್ ಟಿಕೆಟ್ ವಂಚಿತರಾಗಿರುವ ದೀಪಕ್‌ಕುಮಾರ್ ಸಿಂಗ್ ಹಾಗೂ ಎಚ್.ಆರ್. ಗವಿಯಪ್ಪ ಅವರೊಂದಿಗೆ ಈ ಕುರಿತ ಮಾತುಕತೆಯನ್ನೂ ನಡೆಸಲಾಗುತ್ತಿದೆ ಎಂದು ಬಿಜೆಪಿ ಜಿಲ್ಲಾ ಘಟಕದ ಅಧ್ಯಕ್ಷ ಗುತ್ತಿಗನೂರು ವಿರೂಪಾಕ್ಷಗೌಡ `ಪ್ರಜಾವಾಣಿ'ಗೆ ತಿಳಿಸಿದ್ದಾರೆ.

ಅದೇ ರೀತಿ, ಕಂಪ್ಲಿಯಲ್ಲಿ ಶಾಸಕ ಸುರೇಶಬಾಬು ಬಿಎಸ್‌ಆರ್ ಕಾಂಗ್ರೆಸ್ ಸೇರಿದ್ದರಿಂದ ಕಾಂಗ್ರೆಸ್ ಟಿಕೆಟ್ ಆಕಾಂಕ್ಷಿಯಾಗಿ ನಿರಾಸೆ ಅನುಭವಿಸಿರುವ ನೆನಗಡಲೆ ಗಣೇಶ್ ಅವರನ್ನು ಸೆಳೆಯಲು ಸಿದ್ಧತೆ ನಡೆದಿದೆ. ಅವರು ಬರದಿದ್ದರೆ ಯುವ ಮೋರ್ಚಾದ ಮುಖಂಡ ಶಿವಕುಮಾರ್ ಅವರಿಗೇ ಟಿಕೆಟ್ ನೀಡಲಾಗುವುದು ಎಂದು ಅವರು ಹೇಳಿದ್ದಾರೆ.

ಕೂಡ್ಲಿಗಿ, ಬಳ್ಳಾರಿ ಗ್ರಾಮೀಣ, ಬಳ್ಳಾರಿ ನಗರ ಮತ್ತು ಸಂಡೂರು ಕ್ಷೇತ್ರಗಳಲ್ಲಿ ಸೂಕ್ತ `ಅತೃಪ್ತ' ಅಭ್ಯರ್ಥಿಗಳು ದೊರೆತರೆ, ಅವರಿಗೇ ಟಿಕೆಟ್ ನೀಡಿದರಾಯಿತು ಎಂಬ ಆಲೋಚನೆ ಪಕ್ಷದ ಮುಖಂಡರಲ್ಲಿದೆ.

ಬಳ್ಳಾರಿ ಗ್ರಾಮೀಣ ಕ್ಷೇತ್ರಕ್ಕೆ ಇತ್ತೀಚೆಗೆ ನಡೆದ ಉಪ ಚುನಾವಣೆಯಲ್ಲಿ ಸ್ಪರ್ಧಿಸಿದ್ದ  ಗಾದಿಲಿಂಗಪ್ಪ ಅವರು ಸ್ಪರ್ಧಿಸಲು ಒಪ್ಪಿಗೆ ಸೂಚಿಸಿದ್ದರಿಂದ, ಅವರಿಗೇ ಟಿಕೆಟ್ ನೀಡಲು ನಿರ್ಧರಿಸಲಾಗಿದೆ. ನಗರ ಕ್ಷೇತ್ರದಿಂದ ಕೇಂದ್ರ ಪರಿಹಾರ ಸಮಿತಿ ಅಧ್ಯಕ್ಷ ಕೆ.ಎ. ರಾಮಲಿಂಗಪ್ಪ, ಸಂಡೂರಿನಲ್ಲಿ ಮಾರೆಣ್ಣ, ಕೂಡ್ಲಿಗಿಯಲ್ಲಿ ಎಂ.ಎಸ್. ಸೋಮಲಿಂಗಪ್ಪ ಅವರ ಸಂಬಂಧಿ, ನಿವೃತ್ತ ಸರ್ಕಾರಿ ನೌಕರ ರಾಮಣ್ಣ ಅವರಿಗೆ ಟಿಕೆಟ್ ನೀಡುವ ನಿರ್ಧಾರ ಕೈಗೊಳ್ಳಲಾಗಿದ್ದು, ಅಂತಿಮ ಕ್ಷಣದಲ್ಲಿ ಅನ್ಯ ಪಕ್ಷದ ಅತೃಪ್ತರಿಗೆ ಮಣೆ ಹಾಕುವ ಮೂಲಕ ಇವರಿಗೂ ಟಿಕೆಟ್ ನಿರಾಕರಿಸುವ ಸಾಧ್ಯತೆಗಳಿವೆ.

ಇತ್ತೀಚೆಗೆ ನಡೆದಿರುವ ನಗರ ಸ್ಥಳೀಯ ಸಂಸ್ಥೆ ಚುನಾವಣೆಯಲ್ಲಿ ತವರು ಜಿಲ್ಲೆಯಲ್ಲೇ ಸೋತು ಸುಣ್ಣವಾಗಿರುವ ಬಿಎಸ್‌ಆರ್ ಕಾಂಗ್ರೆಸ್, ವಿಧಾನಸಭೆ ಚುನಾವಣೆಯಲ್ಲಿ ಜಿಲ್ಲೆಯ ಕೆಲವು ಕ್ಷೇತ್ರಗಳ ಟಿಕೆಟ್ ಹಂಚಿಕೆಗೆ ಸಂಬಂಧಿಸಿದಂತೆ ಇತರ ಪಕ್ಷಗಳು ಪಟ್ಟಿ ಅಂತಿಮಗೊಳಿಸುವವರೆಗೆ ಕಾದು ನೋಡುವ ತಂತ್ರ ಅನುಸರಿಸಲು ನಿರ್ಧರಿಸಿದೆ.

ಸ್ಥಳೀಯ ಸಂಸ್ಥೆ ಚುನಾವಣೆ ಫಲಿತಾಂಶದಿಂದ ತೀವ್ರ ವಿಚಲಿತವಾಗಿರುವ ಪಕ್ಷದ ಮುಖಂಡರು, ಈಗಾಗಲೇ ಬಿಡುಗಡೆಯಾಗಿರುವ ಪಟ್ಟಿಯಲ್ಲಿ ಕೆಲವು ಬದಲಾವಣೆ ಮಾಡುವ ಸಾಧ್ಯತೆಗಳಿವೆ ಎಂದು ಪಕ್ಷದ ಮೂಲಗಳು ಹೇಳಿವೆ.

ಬಿ.ನಾಗೇಂದ್ರ ಅವರು ಕೈಕೊಟ್ಟಿರುವುದರಿಂದ ಕೂಡ್ಲಿಗಿಯಲ್ಲಿ, ಹೂವಿನ ಹಡಗಲಿಯಲ್ಲಿ, ಸಿರುಗುಪ್ಪದಲ್ಲಿ ಸೂಕ್ತ ಅಭ್ಯರ್ಥಿಗಳ ಹುಡುಕಾಟದಲ್ಲಿ ತೊಡಗಿದೆ.

ಜಿಲ್ಲೆಯ ಯಾವುದೇ ಕ್ಷೇತ್ರದ ಅಭ್ಯರ್ಥಿ ಆಯ್ಕೆಯನ್ನು ಅಂತಿಮಗೊಳಿಸದ ಜೆಡಿಎಸ್ ಪಕ್ಷವೂ ಇದೇ ತಂತ್ರಕ್ಕೆ ಅಂಟಿಕೊಂಡಿದ್ದು, `ಬಂದವರೆಲ್ಲ ಬರಲಿ' ಎಂಬ ಮಂತ್ರ ಪಠಿಸುತ್ತಿದೆ.

ಜಿಲ್ಲೆಯಲ್ಲಿ ಅಷ್ಟಾಗಿ ತನ್ನ ಪ್ರಭಾವವನ್ನು ಬೀರದಿರುವ ಬಿ.ಎಸ್. ಯಡಿಯೂರಪ್ಪ ನೇತೃತ್ವದ ಕೆಜೆಪಿ, ಜಿಲ್ಲೆಯ ಹೂವಿನ ಹಡಗಲಿ ಕ್ಷೇತ್ರದ ಅಭ್ಯರ್ಥಿಯನ್ನು ಅಂತಿಮಗೊಳಿಸಿದ್ದು, ಮಿಕ್ಕ ಕಡೆ ಯಾರಾದರೂ ಅತೃಪ್ತರು ಟಿಕೆಟ್ ಕೋರಿ ಮುಂದೆ ಬಂದಲ್ಲಿ, ಹಿಂದೆಮುಂದೆ ನೋಡದೆ ಹಸಿರು ನಿಶಾನೆ ತೋರಿಸುವ ಸಾಧ್ಯತೆಗಳಿವೆ ಎಂಬ ಮತುಗಳು ಕೇಳಿಬರುತ್ತಿವೆ.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.