ADVERTISEMENT

ಫ್ಲೋರೈಡ್ ನೀರಿನಿಂದ ತತ್ತರಿಸಿರುವ ಮಡಕಲಕಟ್ಟೆ ಗ್ರಾಮ

ಸಿದ್ಧರಾಮ ಹಿರೇಮಠ
Published 24 ಜೂನ್ 2012, 8:30 IST
Last Updated 24 ಜೂನ್ 2012, 8:30 IST
ಫ್ಲೋರೈಡ್ ನೀರಿನಿಂದ ತತ್ತರಿಸಿರುವ ಮಡಕಲಕಟ್ಟೆ ಗ್ರಾಮ
ಫ್ಲೋರೈಡ್ ನೀರಿನಿಂದ ತತ್ತರಿಸಿರುವ ಮಡಕಲಕಟ್ಟೆ ಗ್ರಾಮ   

ಕೂಡ್ಲಿಗಿ: ಮಳೆ ಕಾಣೆಯಾಗಿ ಇಡೀ ತಾಲ್ಲೂಕು ಬರದ ಭೀತಿಯಲ್ಲಿ ನರಳುತ್ತಿರುವಾಗ, ಕುಡಿಯುವ ನೀರಿಗೂ ಈಗ ಪರದಾಡುವಂತಾಗಿದೆ. ಸಿಗುವ ನೀರೂ ಸಹ ಫ್ಲೋರೈಡ್ ಮಿಶ್ರಿತವಾಗಿರು ವುದರಿಂದಾಗಿ ಜನತೆ ಕಂಗಾಲಾಗಿದ್ದಾರೆ. ಫ್ಲೋರೈಡ್ ಸಮಸ್ಯೆಯಿಂದ ಬಳಲುತ್ತಿ ರುವ ತಾಲ್ಲೂಕಿನ ಅನೇಕ ಗ್ರಾಮಗಳಲ್ಲಿ ಮಡಕಲಕಟ್ಟೆಯೂ ಒಂದಾಗಿದೆ.

ಗುಂಡುಮುಣುಗು ಗ್ರಾಮ ಪಂಚಾಯ್ತಿಗೆ ಸೇರಿರುವ ಮಡಕಲಕಟ್ಟೆ ಗ್ರಾಮ ತಾಲ್ಲೂಕು ಕೇಂದ್ರದಿಂದ 35 ಕಿ.ಮೀ ದೂರವಿದೆ. ಸುಮಾಅರು 500 ಜನಸಂಖ್ಯೆಯಿರುವ ಈ ಗ್ರಾಮದಲ್ಲಿ ಹಲವಾರು ವರ್ಷಗಳಿಂದಲೂ ನೀರಿನ ಸಮಸ್ಯೆ ಕಾಡುತ್ತಿದೆ. ಇಲ್ಲಿ ಕುಡಿಯಲು ನೀರಿದೆಯಾದರೂ ಶುದ್ಧ ಕುಡಿಯುವ ನೀರಿಲ್ಲ. ಇರುವ ನೀರು ಫ್ಲೋರೈಡ್ ಮಿಶ್ರಣವಾಗಿರುವದರಿಂದ, ಅದೇ ನೀರನ್ನೇ ಕುಡಿದು ಬದುಕುತ್ತಿರುವ ಇಲ್ಲಿನ ಜನತೆಗೆ ಕೀಲು ನೋವು, ಸುಸ್ತು, ಜ್ವರ ಬೆಂಬಿಡದ ಭೂತದಂತೆ ಕಾಡುತ್ತಿದೆ.

ಇಲ್ಲಿ ಶಾಲೆಯಲ್ಲಿ ಓದುತ್ತಿರುವ ಎಲ್ಲ ಮಕ್ಕಳ ಹಲ್ಲುಗಳು ಫ್ಲೋರೈಡ್ ನೀರಿನಿಂದ ಕೆಂಪಾಗಿವೆ. ಜನತೆ ಮಂಡಿನೋವು, ಕೀಲುನೋವಿನಿಂದ ವರ್ಷವಿಡೀ ಬಳಲುತ್ತಿದ್ದಾರೆ. ತಮಗೆ ತಿಳಿದ ಊರುಗಳಿಗೆ ಹೋಗಿ ವೈದ್ಯರಲ್ಲಿ ತೋರಿಸಿ ಕೊಂಡು ಚಿಕಿತ್ಸೆ ಪಡೆಯುತ್ತಾರಾದರೂ, ವೈದ್ಯರು ಹೇಳುವುದು ಕಾಯಿಲೆ ಬರುವುದೇ ಕಲುಷಿತ ನೀರಿನಿಂದ, ಶುದ್ಧ ನೀರನ್ನೇ ಕುಡಿಯಿರೆಂದು. `ಡಾಕ್ಟ್ರು ಚೊಲೋ ನೀರೇ ಕುಡೀರಂತಾರೆ ಸಾರ್ ಇಲ್ಲಿ ಚೊಲೋ ನೀರು ಎಲ್ಲಿಂದ ತರಾಣ ಹೇಳ್ರಿ~ ಎಂದು ಗ್ರಾಮದ ವೆಂಕಟೇಶ ಪ್ರಶ್ನಿಸುತ್ತಾರೆ.

ಇರುವ ಬೋರವೆಲ್‌ನ ನೀರು ಸಂಪೂರ್ಣವಾಗಿ ಫ್ಲೋರೈಡ್ ಅಂಶದಿಂದ ಕೂಡಿದೆ. ಗ್ರಾಮಸ್ಥರು ಬಳಸುವ ನೀರಿನ ಪಾತ್ರೆಗಳಲ್ಲೆಲ್ಲ ಬಿಳಿ ಪುಡಿ ಅಂಟಿಕೊಂಡಿರುತ್ತದೆ. ಗ್ರಾಮಸ್ಥರು ಅದಾವುದರ ಬಗ್ಗೆಯೂ ಯೋಚಿಸದೇ ನೀರು ಸಿಗುತ್ತಲ್ಲ ಸಾಕು ಎಂಬಂತೆ ಅದೇ ನೀರನ್ನೇ ಬಳಸುತ್ತಿರುವುದರಿಂದ ಸಮಸ್ಯೆ ಮತ್ತಷ್ಟು ಉಲ್ಬಣಿಸಿದೆ. ಮಳೆ ಇಲ್ಲದಿರುವುದರಿಂದ ಫ್ಲೋರೈಡ್ ಅಂಶ ಮತ್ತಷ್ಟು ಹೆಚ್ಚಾಗಿದೆ.

ಗ್ರಾಮದಲ್ಲಿ ಒಟ್ಟು 3 ಬೋರ್‌ವೆಲ್‌ಗಳಿವೆ. 2 ಸಂಪರ್ಕವಿಲ್ಲ. ಒಂದು ಬೋರ್‌ವೆಲ್‌ನಿಂದ ಈ ಮೊದಲಿದ್ದ ಶಕ್ತಿಶಾಲಿಯಾಗಿದ್ದ ಮೋಟರ್‌ನಿಂದ ನೀರಿನ ಸಂಪರ್ಕ ಒದಗಿಸಿ 5 ಮಿನಿ ವಾಟರ್ ಟ್ಯಾಂಕ್‌ಗಳಿಗೆ ನೀರನ್ನು ಒದಗಿಸ ಲಾಗುತ್ತಿತ್ತು. ಇದೀಗ ಸಣ್ಣ ಮೋಟರ್ ಸಂಪರ್ಕವಿರುವುದರಿಂದಾಗಿ ಕೇವಲ 2 ಮಿನಿ ವಾಟರ್ ಟ್ಯಾಂಕ್‌ಗಳಿಗೆ ಮಾತ್ರ ನೀರು ಸರಬರಾಜಾಗುತ್ತಿದೆ. ಅರ್ಧ ಭಾಗ ಗ್ರಾಮಕ್ಕೆ ನೀರಿಲ್ಲದೇ ಜನ ಸುತ್ತಲ ತೋಟ, ಹೊಲಗಳನ್ನು ಅರಸಿ ನೀರು ತರುತ್ತಿದ್ದಾರೆ.

ದುರಂತವೆಂದರೆ ಗ್ರಾಮದಲ್ಲಿ ಬೀದಿ ದೀಪಗಳಿಲ್ಲ. ಇರುವ 2 ಬೀದಿ ದೀಪಗಳಿಗೆ ವರ್ಷಕ್ಕೊಮ್ಮೆ ಮಾತ್ರ ಬಲ್ಬ್‌ಗಳನ್ನು ಬದಲಾಯಿಸ ಲಾಗುತ್ತದೆ ಎಂದು ಗ್ರಾಮಸ್ಥರು ದೂರುತ್ತಾರೆ.

`ಮಾರಮ್ಮನ ಜಾತ್ರೆ ಗೊಮ್ಮೆ ಮಾತ್ರ ಬಲ್ಬ್ ಚೇಂಜ್ ಮಾಡ್ತಾರ, ಅಲ್ಲೆವರೆಗೂ ಕತ್ಲಾಗೇ ಓಡಾಡ್ಬೇಕು~ ಎಂದು ಗ್ರಾಮದ ಲೋಕೇಶ ಹೇಳುತ್ತಾರೆ. ಗ್ರಾಮದಲ್ಲಿ ಇರುವ ಮುಖ್ಯ ಚರಂಡಿಯೇ ಹೂಳು ತುಂಬಿ ಹೂತುಹೋಗಿದೆ. ಕೊಳಚೆಯೆಲ್ಲ ಹಾಗೇ ನಿಂತು ಸೊಳ್ಳೆಗಳ ಆವಾಸ ಸ್ಥಾನವಾಗಿದೆ.

ಹೂಡೇಂ ಪ್ರಾಥಮಿಕ ಆರೋಗ್ಯ ಕೇಂದ್ರದ ವ್ಯಾಪ್ತಿಗೆ ಬರುವ ಮಡಕಲಕಟ್ಟೆಗೆ ವೈದ್ಯರು ಭೇಟಿ ನೀಡುವುದೇ ಅಪರೂಪ. ಹೀಗಾಗಿ ಇಲ್ಲಿ ಗ್ರಾಮಸ್ಥರಲ್ಲದೇ ಮಕ್ಕಳೂ ಸಹ ಜ್ವರ, ಸುಸ್ತು, ಕೀಲು ನೋವುಗಳಿಂದ ಬಳಲು ತ್ತಿದ್ದಾರೆ. `ಏನೂ ಬೇಡ, ಕನಿಷ್ಠ ಕುಡಿ ಯಲು ಶುದ್ಧ ನೀರನ್ನಾದರೂ ಕೊಟ್ಟು ಆರೋಗ್ಯವನ್ನು ಕಾಪಾಡಿ~ ಎಂದು ಗ್ರಾಮಸ್ಥರಾದ ಮಾರಣ್ಣ, ಎಸ್. ಪಾಲಣ್ಣ ಮುಂತಾದವರು ಮೊರೆ ಇಡುತ್ತಿದ್ದಾರೆ.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.