ADVERTISEMENT

ಬಲಿಗಾಗಿ ಕಾಯ್ದಿರುವ ವಿದ್ಯುತ್ ಕಂಬ

​ಪ್ರಜಾವಾಣಿ ವಾರ್ತೆ
Published 14 ಡಿಸೆಂಬರ್ 2012, 8:56 IST
Last Updated 14 ಡಿಸೆಂಬರ್ 2012, 8:56 IST

ಹೊಸಪೇಟೆ: ರೈತ, ಜನ ಜಾನುವಾರು ಸ್ಪಲ್ಪವೇ ಮೈಮರೆತರು ಸಾಕು ಅಪಾಯ ಶತಃಸಿದ್ಧ.
ಹೌದು...! ಹೊಸಪೇಟೆಯ ನಗರ ವ್ಯಾಪ್ತಿಯಲ್ಲಿರುವ, ಪ್ರತಿಷ್ಠಿತ ಐಎಸ್‌ಆರ್ ಕಾರ್ಖಾನೆ ಹಿಂದುಗಡೆಯಿಂದ ಪಂಪಾಸಾರ ಡಿಸ್ಟಿಲರಿ ಘಟಕಕ್ಕೆ ವಿದ್ಯುತ್ ಸಂಪರ್ಕ ನೀಡಿರುವ ಕಂಬಗಳು ಇಂತಹ ಅಪಾಯಕ್ಕೆ ಆಹ್ವಾನ ನೀಡುವ ಸ್ಥಿತಿಗೆ ಬಂದು ತಲುಪಿವೆ.

ರಸ್ತೆಯಲ್ಲಿ ಸಂಚಾರ ಮಾಡುವ ಜನ, ಜಾನುವಾರು, ಹೊಲಗದ್ದೆಗಳಲ್ಲಿ ಕೆಲಸ ಮಾಡುವ ರೈತ ಕಾರ್ಮಿಕರು ಇಂತಹ ಭಯದ ವಾತಾವರಣದಲ್ಲಿ ದಿನಕಳೆಯುವಂತಾಗಿದೆ.

ಬಾಗಿ, ಬೆಂಡಾಗಿರುವ ವಿದ್ಯುತ್ ಕಂಬಗಳು, ರಸ್ತೆ ಸಂಚಾರಿಗಳಿಗೆ ಕೈಗೆಟುಕುವ ಹಂತಕ್ಕೆ ಬಂದಿರುವ ವಿದ್ಯುತ್ ತಂತಿಗಳು ಇಂತಹ ವಾತಾವರಣವನ್ನು ಸೃಷ್ಟಿ ಮಾಡಿವೆ. ವಿಜಯನಗರ ಕಾಲದಿಂದಲೂ ತುರ್ತು ಕಾಲುವೆಯ ದಂಡೆಯುದ್ದಕ್ಕೂ ಸಂಚಾರ ಮಾಡುವ ಜನ ಹಾಗೂ ಈ ಮಾರ್ಗವನ್ನೇ ನಂಬಿರುವ ರೈತವರ್ಗ ಇಂದು ತಮ್ಮ ಜೀವವನ್ನು ಕೈಯಲ್ಲಿ ಹಿಡಿದು ಸಂಚಾರ ಮಾಡುವಂತಾಗಿದೆ.

ಅಧಿಕಾರಿಗಳ ನಿರ್ಲಕ್ಷ್ಯ: ಅಂದಾಜು 20 ಎಕರೆಗೂ ಅಧಿಕ ಕೃಷಿ ಭೂಮಿಯನ್ನು ನಂಬಿರುವ ಅನೇಕ ರೈತರು  ಈ ಮಾರ್ಗದಲ್ಲಿಯೇ ತಿರುಗಾಡುವುದು ಅನಿವಾರ್ಯವಾಗಿದೆ. ಬೇಕಾಬಿಟ್ಟಿಯಾಗಿ ಕಂಬಗಳನ್ನು ನೆಟ್ಟಿರುವ ಜೆಸ್ಕಾಂ ಅಧಿಕಾರಿಗಳು ಇಂತಹ ಪರಿಸ್ಥಿತಿಯ ಅವಘಡದ ಬಗ್ಗೆ ಮಾಹಿತಿ ನೀಡಿದರೂ ನಿರ್ಲಕ್ಷ್ಯ ತೋರುತ್ತಿದ್ದಾರೆ. ಅವುಗಳನ್ನು ಸರಿಪಡಿಸುವ ಹಾಗೂ ತಂತಿಗಳನ್ನು ಮೊಟಕುಗೊಳಿಸುವ ಕೆಲಸಕ್ಕೆ ಮುಂದಾಗುತ್ತಿಲ್ಲ, ರೈತರ ಕೃಷಿ ಭೂಮಿಯ ದಂಡೆಗೂ ಕಂಬಗಳನ್ನು ನೆಟ್ಟಿದ್ದು, ಯಾವುದೇ ಸಂದರ್ಭದಲ್ಲಿ ತಂತಿ ಹರಿದು ಹೊಲದಲ್ಲಿ ಬಿದ್ದರೆ ಅರಿಯದ ರೈತ ಕಾಲಿಟ್ಟರೆ ಸಾಕು ಅಪಾಯ ಒಂದೆಡೆಯಾದರೆ, ಕಬ್ಬು, ಭತ್ತ ಸೇರಿದಂತೆ ಯಾವುದೇ ಫಸಲನ್ನು ತುಂಬಲು ಟ್ರ್ಯಾಕ್ಟರ್, ಎತ್ತಿನ ಬಂಡಿ ಬರುವುದು ಕಷ್ಟವಾಗಿದೆ, ಇನ್ನು ಅವುಗಳ ಸಾಹಯ ಪಡೆಯದೇ ರೈತ ಕೃಷಿ ಚಟುವಟಿಕೆ ನಡೆಸುವುದು ಅಸಾಧ್ಯವಾಗಿದ್ದು ಅನೇಕ ಬಾರಿ ಸಾಕಷ್ಟು ರೈತರು ಮಾಹಿತಿ ನೀಡಿದರೂ ಅಧಿಕಾರಿಗಳು ಲಕ್ಷ್ಯ ವಹಿಸುತ್ತಿಲ್ಲ.

ಅನಾಹುತ ಆಗುವ ಮೊದಲು ಕ್ರಮಕ್ಕೆ ಮುಂದಾಗಬೇಕು ಎನ್ನುವುದು ಅನೇಕರ ಅಭಿಪ್ರಾಯ. ಈ ಕುರಿತು ಪ್ರಜಾವಾಣಿಯೊಂದಿಗೆ ಮಾತನಾಡಿದ ಈ ಭಾಗದ ರೈತ ಲಕ್ಷ್ಮಣ ಮತ್ತು  ಪದ್ಮನಾಭ ಸೇರಿದಂತೆ ಅನೇಕರು ಜೆಸ್ಕಾಂ ಅಧಿಕಾರಿಗಳ ನಿರ್ಲಕ್ಷ್ಯವನ್ನು ಖಂಡಿಸಿ ಜಿಲ್ಲಾಧಿಕಾರಿಗಳು, ತಾಲ್ಲೂಕು ಆಡಳಿತದ ಅಧಿಕಾರಿಗಳಾದರೂ ಈ ಬಗ್ಗೆ ಗಮನ ಹರಿಸಿ ಅಧಿಕಾರಿಗಳಿಗೆ ಸೂಚಿಸುವ ಮೂಲಕ ರೈತರ ಹಾಗೂ ಸಂಚಾರಿಗಳ ನೋವಿಗೆ ಸ್ಪಂದಿಸುವಂತೆ ಒತ್ತಾಯಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.