ADVERTISEMENT

ಬಳ್ಳಾರಿಯಲ್ಲಿ ನಗ್ಸಲೀಯರ ದಾಳಿ...!

​ಪ್ರಜಾವಾಣಿ ವಾರ್ತೆ
Published 3 ಜನವರಿ 2011, 10:55 IST
Last Updated 3 ಜನವರಿ 2011, 10:55 IST

ಬಳ್ಳಾರಿ: ಅವರ ‘ಬಾಂಬ್’ ದಾಳಿಗೆ ಅನೇಕರ ಹೊಟ್ಟೆಗೆ ಗಾಯವಾದವು. ಒಟ್ಟು ಮೂವರು ನಗ್ಸಲಿಯರು ಸತತ ಮೂರು ಗಂಟೆಗಳ ಕಾಲ ನಡೆಸಿದ ಆ ದಾಳಿಗೆ ಸಿಲುಕಿದ ಸಾವಿರಕ್ಕೂ ಹೆಚ್ಚು ಜನರ ಹೊಟ್ಟೆ ಘಾಸಿಗೊಳಗಾಯಿತು. ಅವರು ಬೀಸಿದ ಬಾಂಬ್‌ಗಳು ನಿಜಕ್ಕೂ ಹೊಸ ವರ್ಷಾಚರಣೆಯ ಸಂಭ್ರಮದ ಅಲೆಯಲ್ಲಿ ತೇಲುತ್ತಿದ್ದ ವರನ್ನು ಹಿಡಿದು ಹಾಕಿತು. ಅಷ್ಟೇ ಅಲ್ಲ, ಆ ದಾಳಿ ಎಷ್ಟು ಪ್ರಕರವಾಗಿತ್ತು ಎಂದರೆ, ಅಲ್ಲಿ ನೆರೆದವರು ಒಂದೇ ಒಂದು ಹೆಜ್ಜೆಯನ್ನು ಕಿತ್ತು ಬೇರೆಡೆ ಇಡಲಾಗಲಿಲ್ಲ.

ನಗರದ ಡಾ.ರಾಜಕುಮಾರ ರಸ್ತೆ ಯಲ್ಲಿ ಇರುವ ರಾಘವ ಕಲಾಮಂದಿರ ಶನಿವಾರ ಸಂಜೆ ಈ ದಾಳಿಗೆ ಸಾಕ್ಷಿಯಾಯಿತು. ಅಲ್ಲಿ ನೆರೆದಿದ್ದ ಜನರ ‘ಬೊಬ್ಬೆ’ ಆ ಮಂದಿರದ ತಾರಸಿಯನ್ನೇ ಕಿತ್ತೆಸೆದಂತೆ ಭಾಸವಾಯಿತು. ರಾಘವ ಮೆಮೋರಿಯಲ್ ಅಸೋಸಿಯೇಷನ್ ‘ಹೊಸ ವರ್ಷಾಚರಣೆ ಅಂಗವಾಗಿ’ ಏರ್ಪಡಿಸಿದ್ದ ’ನಗೆಹಬ್ಬ’ ಕಾರ್ಯಕ್ರಮ ದಲ್ಲಿ ಜನರ ಹೊಟ್ಟೆಯನ್ನು ಗಾಯ ಗೊಳಿಸಿದವರು ಗಂಗಾವತಿ ಪ್ರಾಣೇಶ, ನರಸಿಂಹ ಜೋಷಿ ಹಾಗೂ ಬಸವರಾಜ ಮಹಾಮನಿ ಎಂಬ ತ್ರಿಮೂರ್ತಿಗಳು. ಜನರ ಹೊಟ್ಟೆ ಹುಣ್ಣಾಗುವಂತೆ ನಗಿಸಿದ ನಗ್ಸಲಿಯರು. 

ಉಚಿತ ಪ್ರವೇಶ ಹಾಗೂ ಭರ್ಜರಿ ಮನರಂಜನೆ ದೊರೆಯುವುದು ಗ್ಯಾರಂಟಿ ಎಂದರಿತು ಧಾವಿಸಿದ ಪ್ರೇಕ್ಷಕರಿಂದಾಗಿ ಇಡೀ ಕಲಾಮಂದಿರ ಕಿಕ್ಕಿರಿದು ತುಂಬಿತ್ತು.ಗಣ್ಯಾತಿಗಣ್ಯರು ತಮ್ಮೆಲ್ಲ ಕೆಲಸ ಕಾರ್ಯಗಳನ್ನು ಬದಿಗೊತ್ತಿ ’ನಗೆಹಬ್ಬ’ದಲ್ಲಿ ಪಾಲ್ಗೊಂಡು ಭರ್ಜರಿ ನಗೆ ಹೋಳಿಗೆ ಉಂಡರು. ನಕ್ಕು ನಲಿದರು.

ಜೀವನ ಎಂದರೆ, ಅದು ಮೂರು ದಿನಗಳ ಸಂತೆ, ನಗುವಾಗ ನಕ್ಕು ಬಿಡಿ, ನಗುವ ಸಂದರ್ಭ ಒದಗಿಬಂದರೂ, ಬಿಗು ಮುಖ ತೋರಬೇಡಿ ಎಂಬ ಸಲಹೆಯೊಂದಿಗೆ ಗಂಗಾವತಿ ಪ್ರಾಣೇಶ ಅವರು ತಮ್ಮ ಮಾತಿನ ಮೋಡಿಗೆ ಸಿಲುಕಿಸಿ ಜನರನ್ನು ಮಂತ್ರ ಮುಗ್ಧಗೊಳಿಸಿದರು. ಮಕ್ಕಳು ಏನೂ ಅರಿಯದವರು, ಅವರಿಗೆ ಸ್ವಾತಂತ್ರ್ಯ ಬೇಕು. ಅವರನ್ನು ಟೆಕ್ಸ್ಟ್‌ಬುಕ್‌ಗಳ ಹುಳಗಳನ್ನಾಗಿಸದೆ ಸಮಾಜ ಮುಖಿಯನ್ನಾಗಿಸಿ ಎಂದು ಪ್ರಾಣೇಶ ಉದಾಹರಣೆ ಸಮೇತ ಮಾರ್ಮಿಕವಾಗಿ ನುಡಿದರು. 

ಕ್ರಿಕೆಟ್ ಪಂದ್ಯವೊಂದರ ವೀಕ್ಷಕ ವಿವರಣೆಯನ್ನು ಹೇಳುವಂತೆ ನಾಡಿನ ಖ್ಯಾತ ನಾಮರನ್ನೆಲ್ಲಾ ಕೋರಿದರೆ, ಅದನ್ನು ಅವರು ಹೇಗೆ ನಿರಾಕರಿಸಿದರು ಎಂಬುದನ್ನು ಅನುಕರಣ ಕಲೆ (ಮಿಮಿಕ್ರಿ)ಯ ನೆರವಿನೊಂದಿಗೆ ಹೇಳಿ ಪ್ರೇಕ್ಷಕರನ್ನು ನಗೆಗಡಲ್ಲಲ್ಲಿ ತೇಲಿಸಿದ ನರಸಿಂಹ ಜೋಷಿ, ಸಚಿವರಾದ ಜಿ.ಜನಾರ್ದನ ರೆಡ್ಡಿ, ಬಿ.ಶ್ರೀರಾಮುಲು ಅವರ ಧ್ವನಿಯನ್ನ ಅನುಕರಿಸಿದಾಗ ಬಳ್ಳಾರಿಯ ಸಾವಿರಾರು ಪ್ರೇಕ್ಷಕರು ‘ಹೋ..’ ಎಂದು ಕೇಕೆ ಹಾಕಿದರು.

ಮಲ್ಲಿಕಾರ್ಜುನ ಖರ್ಗೆ, ಧರ್ಮ ಸಿಂಗ್, ಬಿ.ಎಸ್.ಯಡಿಯೂರಪ್ಪ, ಎಸ್.ಬಂಗಾರಪ್ಪ, ಎಚ್.ಡಿ. ಕುಮಾರ ಸ್ವಾಮಿ, ಸಿದ್ಧರಾಮಯ್ಯ, ರವಿ ಬೆಳಗೆರೆ, ಹೀಗೂ ಉಂಟೆ... ನಾರಾಯಣ ಸ್ವಾಮಿ, ಶಿವರಾಜ್ ಕುಮಾರ ಹೀಗೆ ಖ್ಯಾತರ ಧ್ವನಿಯನ್ನು ತಮ್ಮ ಅದ್ಭುತ ಪ್ರತಿಭೆಯ ನೆರವಿನೊಂದಿಗೆ ಯಥಾವತ್ತಾಗಿ ಕೇಳಿಸಿದ ಜೋಷಿ ಚಪ್ಪಾಳೆ ಗಿಟ್ಟಿಸಿದಷ್ಟೇ ಅಲ್ಲ, ಅನೇಕ ದಿನಗಳಕಾಲ ಜನರ ಸ್ಮರಣೆಯಲ್ಲಿ ಉಳಿಯುವಂತ ಕಾಮಿಡಿ ’ಡೋಸ್’ ನೀಡಿದರು.

‘ಬಡಕಲು, ಸಣಕಲು ದೇಹದ ಬಸವರಾಜ ಮಹಾಮನಿ ತನ್ನ ದೇಹವನ್ನೇ ಉದಾಹರಣೆಯೊಂದಿಗೆ ಹೇಳಿದ ಕೆಲವು ಪ್ರಸಂಗಗಳು ಅಲ್ಲಿ ನೆರದಿದ್ದ ಜನರನ್ನು ಕೆಲಕಾಲ ನಗೆಯ ಒಡ್ಡೋಲಗದಲ್ಲಿ ಇರಿಸಿತು. ಬಳ್ಳಾರಿಗರ ಹೊಸ ವರ್ಷಾರಂಭ ಭರ್ಜರಿ ನಗೆಯೊಂದಿಗೆ ಆಗಲಿ ಎಂಬ ಸಂಘಟಕರ ಉದ್ದೇಶ ಈ ಮೂಲಕ ಈಡೇರಿತು.

ಜಿಲ್ಲಾಧಿಕಾರಿ ಬಿ.ಶಿವಪ್ಪ, ಪೊಲೀಸ್ ವರಿಷ್ಠ ಅಧಿಕಾರಿ ಎಂ.ಎನ್.ನಾಗರಾಜ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಾಯಕ ನಿರ್ದೇಶಕ ಚೋರನೂರು ಕೊಟ್ರಪ್ಪ ಮತ್ತಿತರರು ಕುಟುಂಬ ಸಮೇತ ಉಪಸ್ಥಿತರಿದ್ದು, ನಗೆಹಬ್ಬದ ಸವಿ ಉಂಡರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.